ರಾಜ್‌ಕೋಟ್‌(ಮಾ.11): ಮಧ್ಯಮ ಕ್ರಮಾಂಕದಲ್ಲಿ ಅರ್ಪಿತ್‌ ವಾಸಾವಡ ಶತಕ ಹಾಗೂ ಚೇತೇಶ್ವರ್‌ ಪೂಜಾರ ಅರ್ಧಶತಕ ಬಾರಿಸುವ ಮೂಲಕ ಆಸರೆಯಾಗಿದ್ದಾರೆ. 2019-20ರ ರಣಜಿ ಟ್ರೋಫಿ ಫೈನಲ್‌ ಪಂದ್ಯದಲ್ಲಿ ಸೌರಾಷ್ಟ್ರ ತಂಡ, 2ನೇ ದಿನದಾಟದಲ್ಲಿ ಬಂಗಾಳ ತಂಡಕ್ಕೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ. 

ಮೊದಲ ದಿನದಾಟದಲ್ಲಿ 206 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸೌರಾಷ್ಟ್ರ ಸಾಧಾರಣ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು. ಅಲ್ಲದೇ ತಾರಾ ಬ್ಯಾಟ್ಸ್‌ಮನ್‌ ಪೂಜಾರ ಗಂಟಲು ನೋವಿನಿಂದ ಬಳಲುತ್ತಿದ್ದ ಪರಿಣಾಮ ಸೌರಾಷ್ಟ್ರ ಚಿಂತೆಗೀಡಾಗಿತ್ತು. 2ನೇ ದಿನದಂತ್ಯಕ್ಕೆ ಸೌರಾಷ್ಟ್ರ 8 ವಿಕೆಟ್‌ಗೆ 384 ರನ್‌ಗಳಿಸಿ ಸುಸ್ಥಿತಿಯಲ್ಲಿದೆ.

ಅರ್ಪಿತ್‌-ಪೂಜಾರ ಆಸರೆ:

ಸಾಮಾನ್ಯವಾಗಿ ಪೂಜಾರ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುತ್ತಾರೆ. ಆದರೆ ರಣಜಿ ಫೈನಲ್‌ ಪಂದ್ಯದ ಮೊದಲ ದಿನದಲ್ಲಿ ಪೂಜಾರ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದರು. 24 ಎಸೆತಗಳಲ್ಲಿ ಕೇವಲ 5 ರನ್‌ಗಳಿಸಿ ನಿವೃತ್ತಿ ಹೊಂದಿದ್ದರು. 2ನೇ ದಿನವಾದ ಮಂಗಳವಾರ ಗಂಟಲು ನೋವಿನಿಂದ ಚೇತರಿಸಿಕೊಂಡ ಬಳಿಕ ಮೈದಾನಕ್ಕಿಳಿದ ಪೂಜಾರ 6ನೇ ವಿಕೆಟ್‌ಗೆ ಅರ್ಪಿತ್‌ ವಾಸಾವಡ ಜೊತೆಯಾಟದಲ್ಲಿ 146 ರನ್‌ ಸೇರಿಸಿದ್ದು ತಂಡಕ್ಕೆ ನೆರವಾಯಿತು. ಅರ್ಪಿತ್‌ ಈ ಋುತುವಿನಲ್ಲಿ 4ನೇ ಶತಕ ಸಿಡಿಸಿದರೆ, ಪೂಜಾರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 60ನೇ ಅರ್ಧಶತಕ ಪೂರ್ಣಗೊಳಿಸಿದರು.

380 ಎಸೆತಗಳನ್ನು ಎದುರಿಸಿದ ಈ ಜೋಡಿ 297 ನಿಮಿಷಗಳ ಕಾಲ ಕ್ರೀಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿತ್ತು. ಈ ಜೋಡಿಯನ್ನು ಬೇರ್ಪಡಿಸಲು ಬಂಗಾಳ ಪದೇ ಪದೇ ಬೌಲಿಂಗ್‌ ಬದಲಾಯಿಸಿತ್ತು. ಆದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಮೊದಲ 2 ಸೆಷನ್ಸ್‌ನಲ್ಲಿ ಸೌರಾಷ್ಟ್ರ ವಿಕೆಟ್‌ ಬೀಳದಂತೆ ಎಚ್ಚರಿಕೆಯ ಆಟವಾಡಿತ್ತು. ಚಹಾ ವಿರಾಮದ ಬಳಿಕ ಅರ್ಪಿತ್‌ ವಾಸಾವಡ (106), ಶಬಾಜ್‌ಗೆ ವಿಕೆಟ್‌ ಒಪ್ಪಿಸಿದರೆ, 10 ರನ್‌ಗಳ ಅಂತರದಲ್ಲಿ ಪೂಜಾರ (66) ವೇಗಿ ಮುಕುಂದ್‌ ಕುಮಾರ್‌ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಬಂಗಾಳ ಪರ ಅಕ್ಷ್ ದೀಪ್‌ 3 ವಿಕೆಟ್‌ ಪಡೆದರು. ಚಿರಾಗ್‌ ಜಾನಿ (13), ಧರ್ಮೇಂದ್ರ ಜಡೇಜಾ (13) 3ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಸ್ಕೋರ್‌: ಸೌರಾಷ್ಟ್ರ ಮೊದಲ ಇನ್ನಿಂಗ್ಸ್‌ 384/8

ಅರ್ಪಿತ್‌ 106, ಪೂಜಾರ 66, ಅಕ್ಷ್ ದೀಪ್‌ 3-77
(2ನೇ ದಿನದಂತ್ಯಕ್ಕೆ)