* ದೇಶಿ ಕ್ರಿಕೆಟ್ ಟೂರ್ನಿಯಾದ ರಣಜಿ ಟ್ರೋಫಿ ಜನವರಿ 05ರಿಂದ ಆರಂಭ* ದೇಶಿ ಕ್ರಿಕೆಟ್ ಟೂರ್ನಿಯಲ್ಲಿ ಕೊಂಚ ಬದಲಾವಣೆ ಮಾಡಿದ ಬಿಸಿಸಿಐ* ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯು ಅಕ್ಟೋಬರ್ 27ರಿಂದ ಆರಂಭ

ಮುಂಬೈ(ಡಿ.20): ದೇಶಿ ಕ್ರಿಕೆಟ್ ಟೂರ್ನಿಗಳ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆಗಳಾಗಿದ್ದು, ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯು ಜನವರಿ 05ರಿಂದ ಮಾರ್ಚ್‌ 20ರವರೆಗೆ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಎಲ್ಲಾ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಮಾಹಿತಿ ನೀಡಿದೆ.

ಈ ಮೊದಲು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯನ್ನು ನವೆಂಬರ್ 16ರಿಂದ ಫೆಬ್ರವರಿ 19ರವರೆಗೆ ಆಯೋಜಿಸಲು ಬಿಸಿಸಿಐ ತೀರ್ಮಾನಿಸಿತ್ತು. ಆದರೆ ಇದೀಗ ರಣಜಿ ಟೂರ್ನಿಗೂ ಮುಂಚೆ ಸೀಮಿತ ಓವರ್‌ಗಳ ಸರಣಿಯನ್ನು ಆಯೋಜಿಸಲು ಬಿಸಿಸಿಐ ತೀರ್ಮಾನಿಸಿದೆ ಸ್ಪೋರ್ಟ್ಸ್‌ಸ್ಟಾರ್ ವರದಿ ಮಾಡಿದೆ. ಇದೀಗ ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯು ಅಕ್ಟೋಬರ್ 27ರಿಂದ ನವೆಂಬರ್ 22ರವರೆಗೆ ನಡೆಯಲಿದೆ. ಇನ್ನು ವಿಜಯ್ ಹಜಾರೆ ಏಕದಿನ ಚಾಂಪಿಯನ್‌ಶಿಪ್‌ ಟೂರ್ನಿಯು ಡಿಸೆಂಬರ್ 01ರಿಂದ ಡಿಸೆಂಬರ್ 29ರವರೆಗೆ ನಡೆಯಲಿದೆ. ಇನ್ನು 25 ವರ್ಷದೊಳಗಿನವರ ಅಂತರಾಜ್ಯ 'ಎ' ಪಂದ್ಯಗಳು ಜನವರಿ 06ರಿಂದ ಏಪ್ರಿಲ್ 12ರವರೆಗೆ ನಡೆಯಲಿವೆ. 

ದೇಶಿ ಕ್ರಿಕೆಟ್ ಟೂರ್ನಿ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

ಕೋವಿಡ್ 19 ಪಿಡುಗಿನಿಂದಾಗಿ ದೇಶಿ ಕ್ರಿಕೆಟ್‌ ಟೂರ್ನಿ ಆಯೋಜಿಸಲು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇವೆ. ಭಾರತದಲ್ಲೇ ಪೂರ್ಣ ಪ್ರಮಾಣದಲ್ಲಿ ದೇಶಿ ಟೂರ್ನಿಯನ್ನು ಆಯೋಜಿಸಲು ಕೆಲವೊಂದು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಇದರ ಭಾಗವಾಗಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಹಕರಿಸಿದ ಎಲ್ಲಾ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳ ಆಡಳಿತ ಮಂಡಳಿಗೆ, ಮ್ಯಾಚ್ ಅಧಿಕಾರಿಗಳಿಗೆ, ಕೋಚ್‌ಗಳಿಗೆ ಬಿಸಿಸಿಐ ಧನ್ಯವಾದಗಳನ್ನು ಅರ್ಪಿಸುತ್ತಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ಸ್ಪೋರ್ಟ್ಸ್‌ಸ್ಟಾರ್ ವರದಿ ಮಾಡಿದೆ

ಪರಿಷ್ಕೃತ ದೇಶಿ ಕ್ರಿಕೆಟ್ ಕ್ಯಾಲೆಂಡರ್ ಹೀಗಿದೆ ನೋಡಿ:

1. ಅಂಡರ್ 19 ಮಹಿಳಾ ಏಕದಿನ ಸರಣಿ : ಸೆಪ್ಟೆಂಬರ್ 20 - ಅಕ್ಟೋಬರ್ 18

2. ವಿನೂ ಮಂಕಡ್ ಟ್ರೋಫಿ : ಸೆಪ್ಟೆಂಬರ್ 20 - ಅಕ್ಟೋಬರ್ 18

3. ಪುರುಷರ ಅಂಡರ್ 19 ಚಾಲೆಂಜರ್ ಟ್ರೋಫಿ : ಅಕ್ಟೋಬರ್ 26 - ನವೆಂಬರ್ 9

4. ಮಹಿಳಾ ಅಂಡರ್ 19 ಚಾಲೆಂಜರ್ ಟ್ರೋಫಿ : ಅಕ್ಟೋಬರ್ 25 - ನವೆಂಬರ್ 6

5. ಸಯ್ಯದ್ ಮುಷ್ತಾಕ್‌ ಅಲಿ ಟಿ20 ಟ್ರೋಫಿ : ಅಕ್ಟೋಬರ್ 27 - ನವೆಂಬರ್ 22

6. ಸೀನಿಯರ್ ಮಹಿಳಾ ಏಕದಿನ : ಅಕ್ಟೋಬರ್ 20 - ನವೆಂಬರ್ 20

7. ಪುರುಷರ ಸ್ಟೇಟ್‌ 'ಎ' ಏಕದಿನ ಸರಣಿ : ನವೆಂಬರ್ 9 - ಡಿಸೆಂಬರ್ 10

8. ವಿಜಯ್ ಹಜಾರೆ ಟ್ರೋಫಿ: ಡಿಸೆಂಬರ್ 01 - ಡಿಸೆಂಬರ್ 29

9. ಸೀನಿಯರ್ ಮಹಿಳಾ ಚಾಲೆಂಜರ್ ಟ್ರೋಫಿ : ನವೆಂವರ್ 26 - ಡಿಸೆಂಬರ್ 08

10. ರಣಜಿ ಟ್ರೋಫಿ : ಜನವರಿ 05 - ಮಾರ್ಚ್‌ 20

11. ಪುರುಷರ ಅಂಡರ್ 19 ಕೋಚ್ ಬೆಹಾರ್ ಟ್ರೋಫಿ : ನವೆಂಬರ್ 21 - ಫೆಬ್ರವರಿ 02

12. 25 ವರ್ಷದೊಳಗಿನವರ 4 ದಿನಗಳ ಸಿಕೆ ನಾಯ್ಡು ಟ್ರೋಫಿ : ಜನವರಿ 06 - ಏಪ್ರಿಲ್ 02

13. ಸೀನಿಯರ್ ಮಹಿಳಾ ಟಿ20 ಟೂರ್ನಿ : ಫೆಬ್ರವರಿ 20 - ಮಾರ್ಚ್ 23

14. ಪುರುಷರ 16 ವರ್ಷದೊಳಗಿನವರ ವಿಜಯ್ ಮರ್ಚೆಂಟ್ ಟ್ರೋಫಿ : ನವೆಂಬರ್ - ಡಿಸೆಂಬರ್