ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಕರ್ನಾಟಕ ತನ್ನ ಹೋರಾಟ ಅಂತ್ಯಗೊಳಿಸಿದೆ. ಕರ್ನಾಟಕ 174 ರನ್‌ಗಳಿಂದ ಬಂಗಾಳಕ್ಕೆ ಶರಣಾಗಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.

ಕೋಲ್ಕತಾ(ಮಾ.03): ಮುಕೇಶ್ ಕುಮಾರ್ ಮಾರಕ ದಾಳಿಗೆ ತತ್ತರಿಸಿದ ಕರ್ನಾಟಕ ತಂಡವು ಎರಡನೇ ಇನಿಂಗ್ಸ್‌ನಲ್ಲಿ 177 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಬಂಗಾಳ 174 ರನ್‌ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ 14ನೇ ಬಾರಿಗೆ ರಣಜಿ ಟ್ರೋಫಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಕರ್ನಾಟಕ ತಂಡ ಸತತ ಮೂರನೇ ಬಾರಿಗೆ ಸೆಮಿಫೈನಲ್‌ನಲ್ಲೇ ಹೊರಬಿದ್ದು ನಿರಾಸೆ ಅನುಭವಿಸಿದೆ. ಬಂಗಾಳ ತಂಡವು 2007ರ ಬಳಿಕ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ. 

ರಣಜಿ ಟ್ರೋಫಿ: ರಾಜ್ಯಕ್ಕೆ ಪಡಿಕ್ಕಲ್ ಆಸರೆ, ಗುರಿ ಇನ್ನೂ ದೂರವಿದೆ..!

Scroll to load tweet…

ಫೈನಲ್ ಪ್ರವೇಶಿಸಲು 352 ರನ್‌ಗಳ ಗುರಿ ಪಡೆದ ಕರ್ನಾಟಕ ಮೂರನೇ ದಿನದಾಟದಂತ್ಯಕ್ಕೆ ಕರ್ನಾಟಕ ತಂಡ 3 ವಿಕೆಟ್ ಕಳೆದುಕೊಂಡು 98 ರನ್ ಗಳಿಸಿತ್ತು. ಕ್ರೀಸ್ ಕಾಯ್ದುಕೊಂಡಿದ್ದ ಮನೀಶ್ ಪಾಂಡೆ ಹಾಗೂ ದೇವದತ್ ಪಡಿಕ್ಕಲ್ ಮೇಲೆ ನಿರೀಕ್ಷೆಯಿತ್ತು. ಆದರೆ ಪಾಂಡೆ ತನ್ನ ಖಾತೆಗೆ ಒಂದು ರನ್ ಸೇರಿಸಿ ಮುಕೇಶ್‌ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಸಿದ್ಧಾರ್ಥ್ ಹಾಗೂ ಶರತ್ ಅವರನ್ನು ಮಕೇಶ್ ಪೆವಿಲಿಯನ್ನಿಗಟ್ಟಿದರು. ಈ ಇಬ್ಬರು ಆಟಗಾರರು ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಈ ವೇಳೆ ಕರ್ನಾಟಕ 103 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿತು. ಬಂಗಾಳ ಬೌಲರ್‌ಗಳ ಎದುರು ಪ್ರತಿರೋಧ ತೋರಿದ ದೇವದತ್ ಪಡಿಕ್ಕಲ್ 62 ರನ್ ಬಾರಿಸಿ ಮುಕೇಶ್‌ಗೆ 5ನೇ ಬಲಿಯಾದರು.ಕೊನೆಯಲ್ಲಿ ಕೆ. ಗೌತಮ್(22) ಹಾಗೂ ಅಭಿಮನ್ಯು ಮಿಥುನ್(38) ಕೆಲಕಾಲ ಹೋರಾಟ ನಡೆಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

Scroll to load tweet…

ಟಾಸ್ ಗೆದ್ದು ಕರ್ನಾಟಕ ಫೀಲ್ಡಿಂಗ್ ಆಯ್ದುಕೊಂಡಿತ್ತು. ಅನುಸ್ತೂಪ್ ಮಜುಂದಾರ್(149) ಶತಕದ ನೆರವಿನಿಂದ ಬಂಗಾಳ 312 ರನ್ ಬಾರಿಸಿತ್ತು. ಇನ್ನು ಕರ್ನಾಟಕ ಇಶಾನ್ ಪೊರೆಲ್ ಮಾರಕ ದಾಳಿಗೆ ತತ್ತರಿಸಿ 122 ರನ್‌ಗಳಿಗೆ ಸರ್ವಪತನ ಕಂಡಿತ್ತು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ಬಂಗಾಳ 161 ರನ್‌ಗಳಿಸಿ ಸರ್ವಪತನ ಕಂಡಿತು. ಈ ಮೂಲಕ ಕರ್ನಾಟಕ ಗೆಲ್ಲಲು 352 ರನ್‌ಗಳ ಗುರಿ ನೀಡಿತ್ತು.