Asianet Suvarna News Asianet Suvarna News

Ranji Trophy: ಕರ್ನಾಟಕ-ಛತ್ತೀಸ್‌ಗಢ ಮೊದಲ ದಿನ ಸಮಬಲದ ಹೋರಾಟ

ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ-ಛತ್ತೀಸ್‌ಗಢ ಮುಖಾಮುಖಿ
ಮೊದಲ ದಿನ ಸಮಬಲದ ಹೋರಾಟ ಮಾಡಿದ ಉಭಯ ತಂಡಗಳು
ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಛತ್ತೀಸ್‌ಗಢ

Ranji Trophy Ashutosh Singh Unbeaten century powers Chhattisgarh fightback against Karnataka kvn
Author
First Published Jan 4, 2023, 9:55 AM IST

ಬೆಂಗಳೂರು(ಜ.04): ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭಗೊಂಡ ರಣಜಿ ಟ್ರೋಫಿ ಪಂದ್ಯದ ಮೊದಲ ದಿನ ಕರ್ನಾಟಕ ಹಾಗೂ ಛತ್ತೀಸ್‌ಗಢ ಸಮಬಲ ಸಾಧಿಸಿದವು. 1 ರನ್‌ಗೆ 2 ವಿಕೆಟ್‌ ಕಳೆದುಕೊಂಡು ಬಳಿಕ 43 ರನ್‌ ಗಳಿಸುವಷ್ಟರಲ್ಲಿ 3 ವಿಕೆಟ್‌ ಪತನಗೊಂಡರೂ, ಅಶುತೋಶ್‌ ಸಿಂಗ್‌ ಹಾಗೂ ಅಮನ್‌ದೀಪ್‌ ಖಾರೆ ಅವರ ದ್ವಿಶತಕದ ಜೊತೆಯಾಟದಿಂದ ಉತ್ತಮ ಸ್ಥಿತಿ ತಲುಪಿದ ಛತ್ತೀಸ್‌ಗಢ, ದಿನದಾಟದ ಕೊನೆಯಲ್ಲಿ 2 ವಿಕೆಟ್‌ ಕಳೆದುಕೊಂಡಿತು. ದಿನದಂತ್ಯಕ್ಕೆ ಪ್ರವಾಸಿ ತಂಡವನ್ನು 5 ವಿಕೆಟ್‌ಗೆ 267 ರನ್‌ಗೆ ನಿಯಂತ್ರಿಸಿದ ಕರ್ನಾಟಕ, 2ನೇ ದಿನ ಮೇಲುಗೈ ಸಾಧಿಸಲು ಎದುರು ನೋಡುತ್ತಿದೆ.

ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ರಾಜ್ಯ ತಂಡ ಆರಂಭಿಕ ಯಶಸ್ಸು ಗಳಿಸಿತು. ಆರಂಭಿಕರಾದ ಅವ್‌ನಿಶ್‌ ಸಿಂಗ್‌, ಅನುಜ್‌ ತಿವಾರಿ ಶೂನ್ಯಕ್ಕೆ ನಿರ್ಗಮಿಸಿದರು. 34 ರನ್‌ ಗಳಿಸಿದ್ದ ನಾಯಕ ಹರ್‌ಪ್ರೀತ್‌ ಸಿಂಗ್‌ ವೈಶಾಖ್‌ಗೆ ವಿಕೆಟ್‌ ಒಪ್ಪಿಸಿದರು. ಆದರೆ ಅಶುತೋಶ್‌ ಸಿಂಗ್‌ ಹಾಗೂ ಅಮನ್‌ದೀಪ್‌ 4ನೇ ವಿಕೆಟ್‌ಗೆ 210 ರನ್‌ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ಶತಕದ ಅಂಚಿನಲ್ಲಿದ್ದ ಅಮನ್‌ದೀಪ್‌(93)ಗೆ ವಿದ್ವತ್‌ ಕಾವೇರಪ್ಪ ಪೆವಿಲಿಯನ್‌ ಹಾದಿ ತೋರಿಸಿದರೆ, 118 ರನ್‌ ಸಿಡಿಸಿರುವ ಅಶುತೋಶ್‌ ಕ್ರೀಸ್‌ನಲ್ಲಿದ್ದಾರೆ. ರಾಜ್ಯ ತಂಡದ ಪರ ವಿದ್ವತ್‌ 3, ವೈಶಾಖ್‌, ಕೌಶಿಕ್‌ ತಲಾ 1 ವಿಕೆಟ್‌ ಕಿತ್ತರು.

ಸ್ಕೋರ್‌: ಛತ್ತೀಸ್‌ಗಢ 267/5(ಮೊದಲ ದಿನದಂತ್ಯಕ್ಕೆ) 
(ಅಶುತೋಶ್‌ 118*, ಅಮನ್‌ದೀಪ್‌ 93, ವಿದ್ವತ್‌ 3-54)

ತಮ್ಮ ಸ್ವಂತ ಕ್ರೀಡಾಂಗಣದಲ್ಲಿ ಶತಕ ಸಿಡಿಸಿದ ಅಭಿಮನ್ಯು!

ಡೆಹರಾಡೂನ್‌: ಮೊದಲ ಬಾರಿ ಡೆಹರಾಡೂನ್‌ನ ತಮ್ಮ ಸ್ವಂತ ಕ್ರೀಡಾಂಗಣದಲ್ಲಿ ರಣಜಿ ಪಂದ್ಯವಾಡುತ್ತಿರುವ ಬಂಗಾಳ ತಂಡದ ನಾಯಕ ಅಭಿಮನ್ಯು ಈಶ್ವರನ್‌ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಮಂಗಳವಾರ ಉತ್ತರಾಖಂಡ ವಿರುದ್ಧ ಕಣಕ್ಕಿಳಿದ ಅಭಿಮನ್ಯು 238 ಎಸೆತಗಳಲ್ಲಿ ಔಟಾಗದೆ 141 ರನ್‌ ಸಿಡಿಸಿದ್ದು, 2ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಅಭಿಮನ್ಯು ಶತಕದ ನೆರವಿನಿಂದ ಮೊದಲ ದಿನ ಬಂಗಾಳ 3 ವಿಕೆಟ್‌ಗೆ 269 ರನ್‌ ಕಲೆಹಾಕಿತು.

ಮೊದಲ ಓವರಲ್ಲೇ ಹ್ಯಾಟ್ರಿಕ್‌: ಉನಾದ್ಕತ್‌ ರಣಜಿ ದಾಖಲೆ

ರಾಜ್‌ಕೋಟ್‌: ಸೌರಾಷ್ಟ್ರದ ಅನುಭವಿ ವೇಗಿ ಜಯ್‌ದೇವ್‌ ಉನಾದ್ಕತ್‌ ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಮೊದಲ ಓವರ್‌ನಲ್ಲೇ ಹ್ಯಾಟ್ರಿಕ್‌ ವಿಕೆಟ್‌ ಕಿತ್ತ ಮೊದಲ ಬೌಲರ್‌ ಎಂಬ ದಾಖಲೆ ಬರೆದಿದ್ದಾರೆ. ಮಂಗಳವಾರ ‘ಬಿ’ ಗುಂಪಿನ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದರು. 

ಬಿಸಿಸಿಐನಿಂದ ಹೊರಗುಳಿದ ಸೌರವ್ ಗಂಗೂಲಿಗೆ ಐಪಿಎಲ್‌ನಲ್ಲಿ ಪ್ರಮುಖ ಹುದ್ದೆ!

ಇತ್ತೀಚೆಗಷ್ಟೇ 12 ವರ್ಷಗಳ ಬಳಿಕ ಭಾರತ ಟೆಸ್ಟ್‌ ತಂಡದಲ್ಲಿ ಆಡಿದ್ದ ಉನಾದ್ಕತ್‌ ಮಂಗಳವಾರ ಪಂದ್ಯದ ಮೊದಲ ಓವರ್‌ನ 3, 4 ಮತ್ತು 5ನೇ ಎಸೆತಗಳಲ್ಲಿ ಧ್ರುವ್‌ ಶೊರೆ, ವೈಭವ್‌ ರಾವಲ್‌, ನಾಯಕ ಯಶ್‌ ಧುಳ್‌ರನ್ನು ಔಟ್‌ ಮಾಡಿದರು. ಬಳಿಕ ತಮ್ಮ 2ನೇ ಓವರಲ್ಲಿ ಜಾಂಟಿ ಸಿಧು, ಲಲಿತ್‌ ಯಾದವ್‌ರನ್ನು ಪೆವಿಲಿಯನ್‌ಗಟ್ಟಿದ ಅವರು 39 ರನ್‌ಗೆ ಜೀವನಶ್ರೇಷ್ಠ 8 ವಿಕೆಟ್‌ ಪಡೆದರು. ಕೇವಲ 10ಕ್ಕೆ 7 ವಿಕೆಟ್‌ ಕಳೆದುಕೊಂಡಿದ್ದ ಡೆಲ್ಲಿ ಬಳಿಕ ಹೃತಿಕ್‌ ಶೋಕೀನ್‌(68), ಶಿವಾಂಕ್‌(38) ಸಾಹಸದಿಂದಾಗಿ 133 ರನ್‌ಗೆ ಆಲೌಟಾಯಿತು. 6 ಬ್ಯಾಟರ್‌ಗಳು ಶೂನ್ಯ ಸುತ್ತಿದರು.

ಯು-15 ಏಕದಿನ: ಒಂದೇ ಓವರಲ್ಲೇ ಗೆದ್ದ ಕರ್ನಾಟಕ

ರಾಜ್‌ಕೋಟ್‌: ರಾಷ್ಟ್ರೀಯ ಅಂಡರ್‌-15 ಬಾಲಕಿಯರ ಏಕದಿನ ಟೂರ್ನಿಯಲ್ಲಿ ಕರ್ನಾಟಕ ಕೇವಲ 1 ಓವರಲ್ಲೇ ಗುರಿ ಬೆನ್ನತ್ತಿ ಗೆದ್ದು ಗಮನ ಸೆಳೆದಿದೆ. ಮಂಗಳವಾರ ‘ಡಿ’ ಗುಂಪಿನ ಕೊನೆ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಅರುಣಾಚಲ ಪ್ರದೇಶ 15.3 ಓವರಲ್ಲಿ 15ಕ್ಕೆ ಆಲೌಟ್‌ ಆಯಿತು. 8 ಬ್ಯಾಟರ್‌ಗಳು ಶೂನ್ಯಕ್ಕೆ ಔಟಾದರೆ, 9 ರನ್‌ ಇತರೆ ರೂಪದಲ್ಲಿ ಸೇರ್ಪಡೆಗೊಂಡಿತು. ಬಳಿಕ ರಾಜ್ಯ ತಂಡ ಕೇವಲ 6 ಎಸೆತಗಳಲ್ಲಿ ಗುರಿ ತಲುಪಿತು. ರಾಜ್ಯ ತಂಡ ಸತತ 5 ಗೆಲುವು ದಾಖಲಿಸಿದ್ದು, ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ.

Follow Us:
Download App:
  • android
  • ios