ಬೆಂಗಳೂರು(ಫೆ.16): 2019-20ರ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡ ನಾಕೌಟ್‌ ಹಂತ ಪ್ರವೇಶಿಸಿದೆ. ಕ್ವಾರ್ಟರ್‌ಫೈನಲ್‌ ಪಂದ್ಯಗಳ ವೇಳಾಪಟ್ಟಿಯೂ ಅಧಿಕೃತವಾಗಿದ್ದು, ನಿರೀಕ್ಷೆಯಂತೆಯೇ ಕರ್ನಾಟಕಕ್ಕೆ ಜಮ್ಮುಕಾಶ್ಮೀರ ಎದುರಾಳಿಯಾಗಿದೆ. ‘ಎ’ ಮತ್ತು ‘ಬಿ’ ಗುಂಪಿನಲ್ಲಿ ಕರ್ನಾಟಕ ಆಡಿದ 8 ಪಂದ್ಯಗಳಲ್ಲಿ 4ರಲ್ಲಿ ಗೆಲುವು, 4ರಲ್ಲಿ ಡ್ರಾ ಸಾಧಿಸಿದೆ. ಸೋಲರಿಯದ ತಂಡವಾಗಿರುವ ಕರ್ನಾಟಕ ತಂಡ 31 ಅಂಕಗಳಿಂದ 3ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಬರೋಡ ಬಗ್ಗುಬಡಿದು ಕ್ವಾರ್ಟರ್ ಫೈನಲ್‌ಗೆ ಕರ್ನಾಟಕ ಲಗ್ಗೆ

ರಣಜಿ ಟ್ರೋಫಿಯ ಗುಂಪು ಹಂತದಲ್ಲಿ ಈ ಬಾರಿ 38 ತಂಡಗಳು ಕಣಕ್ಕಿಳಿದಿದ್ದವು. ಇದರಲ್ಲಿ 8 ತಂಡಗಳು ನಾಕೌಟ್‌ ಹಂತಕ್ಕೇರಿವೆ. ‘ಎ’ ಮತ್ತು ‘ಬಿ’ ಗುಂಪಿನಲ್ಲಿ ಅಗ್ರ ಸ್ಥಾನಗಳಿಸಿರುವ 5 ತಂಡಗಳಾದ ಗುಜರಾತ್‌, ಬಂಗಾಳ, ಕರ್ನಾಟಕ, ಸೌರಾಷ್ಟ್ರ ಹಾಗೂ ಆಂಧ್ರಪ್ರದೇಶ, ‘ಸಿ’ ಗುಂಪಿನಲ್ಲಿರುವ ಅಗ್ರ 2 ತಂಡಗಳಾದ ಜಮ್ಮು-ಕಾಶ್ಮೀರ, ಒಡಿಶಾ ಹಾಗೂ ಪ್ಲೇಟ್‌ ಗುಂಪಿನಲ್ಲಿ ಮೊದಲ ಸ್ಥಾನ ಪಡೆದಿರುವ ಗೋವಾ ತಂಡ ಕ್ವಾರ್ಟರ್‌ಫೈನಲ್‌ ಹಂತಕ್ಕೆ ತೇರ್ಗಡೆ ಹೊಂದಿವೆ.

ಇದನ್ನೂ ಓದಿ: ರಣಜಿ ಟ್ರೋಫಿ: ಯುವಿ ರೀತಿಯಲ್ಲೇ ಕ್ಯಾನ್ಸರ್ ಗೆದ್ದು ಶತಕ ಸಿಡಿಸಿದ 18ರ ಪೋರ!

ಇದರಲ್ಲಿ ‘ಎ’ ಮತ್ತು ‘ಬಿ’ ಗುಂಪಿನಲ್ಲಿ 35 ಅಂಕಗಳಿಸಿ ಮೊದಲ ಸ್ಥಾನದಲ್ಲಿರುವ ಗುಜರಾತ್‌ ಪ್ಲೇಟ್‌ ಗುಂಪಿನ ಅಗ್ರಸ್ಥಾನಿ ಗೋವಾ ತಂಡವನ್ನು ಮೊದಲ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಎದುರಿಸಲಿದೆ. ‘ಎ’ ಮತ್ತು ‘ಬಿ’ ಗುಂಪಿನಲ್ಲಿ 32 ಅಂಕಗಳಿಂದ 2ನೇ ಸ್ಥಾನದಲ್ಲಿರುವ ಬಂಗಾಳ ‘ಸಿ’ ಗುಂಪಿನಲ್ಲಿ 38 ಅಂಕಗಳಿಂದ 2ನೇ ಸ್ಥಾನಿಯಾಗಿರುವ ಒಡಿಶಾ ಎದುರು 2ನೇ ಕ್ವಾರ್ಟರ್‌ ಪಂದ್ಯದಲ್ಲಿ ಸೆಣಸಲಿದೆ. ಅದರಂತೆ ಕರ್ನಾಟಕ ‘ಸಿ’ ಗುಂಪಿನಲ್ಲಿ 39 ಅಂಕಗಳಿಸಿರುವ ಜಮ್ಮು-ಕಾಶ್ಮೀರ ತಂಡದ ಎದುರು 3ನೇ ಕ್ವಾರ್ಟರ್‌ನಲ್ಲಿ ಕಾದಾಟ ನಡೆಸಲಿದೆ. 31 ಅಂಕಗಳಿಸಿರುವ ಸೌರಾಷ್ಟ್ರ, 27 ಅಂಕಗಳಿಸಿರುವ ಆಂಧ್ರಪ್ರದೇಶ ತಂಡವನ್ನು 4ನೇ ಕ್ವಾರ್ಟರ್‌ನಲ್ಲಿ ಎದುರಿಸಲಿದೆ.

ಬಿಸಿಸಿಐಗೆ ಮನವಿ
ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌ ಪಂದ್ಯ ನಡೆಯುವ ಸ್ಥಳಗಳನ್ನು ಈಗಾಗಲೇ ನಿಗದಿಪಡಿಸಲಾಗಿದೆ. ಕರ್ನಾಟಕ-ಜಮ್ಮುಕಾಶ್ಮೀರ ನಡುವಿನ ಕ್ವಾರ್ಟರ್‌ ಪಂದ್ಯ ಜಮ್ಮುವಿನಲ್ಲಿ ನಡೆಯಲಿದೆ. ಆದರೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಕರ್ನಾಟಕ-ಜಮ್ಮುಕಾಶ್ಮೀರ ಪಂದ್ಯವನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ಆಯೋಜಿಸುವುದಾಗಿ ಹೇಳಿದೆ. ಈ ಸಂಬಂಧ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಮನವಿ ಮಾಡುವುದಾಗಿ ಕೆಎಸ್‌ಸಿಎ ಖಜಾಂಚಿ ವಿನಯ್‌ ಮೃತ್ಯುಂಜಯ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಕ್ವಾರ್ಟರ್‌ಫೈನಲ್‌ ವೇಳಾಪಟ್ಟಿ
ಫೆ.20 ಗುಜರಾತ್‌-ಗೋವಾ ಗುಜರಾತ್‌
ಫೆ.20 ಬಂಗಾಳ-ಒಡಿಶಾ ಒಡಿಶಾ
ಫೆ.20 ಕರ್ನಾಟಕ-ಜಮ್ಮುಕಾಶ್ಮೀರ ಜಮ್ಮುಕಾಶ್ಮೀರ
ಫೆ.20 ಸೌರಾಷ್ಟ್ರ-ಆಂಧ್ರಪ್ರದೇಶ ಆಂಧ್ರಪ್ರದೇಶ