ಮುಂಬೈ[ಜ.04]: ಅನುಭವಿ ವೇಗಿ ಅಭಿಮನ್ಯು ಮಿಥುನ್ ಹಾಗೂ ವಿ. ಕೌಶಿಕ್ ಮಾರಕ ದಾಳಿಗೆ ತತ್ತರಿಸಿರುವ ಮುಂಬೈ ತಂಡ ಎರಡನೇ ದಿನದಾಟದಂತ್ಯಕ್ಕೆ ಎರಡನೇ ಇನಿಂಗ್ಸ್’ನಲ್ಲಿ 5 ವಿಕೆಟ್ ಕಳೆದುಕೊಂಡು 109 ರನ್ ಬಾರಿಸಿದೆ. ಇದರೊಂದಿಗೆ ಒಟ್ಟಾರೆ 85 ರನ್’ಗಳ ಮುನ್ನಡೆ ಸಾಧಿಸಿದೆ. ಮಿಥುನ್ 3 ವಿಕೆಟ್ ಪಡೆದರೆ, ಕೌಶಿಕ್ 2 ವಿಕೆಟ್ ಪಡೆದರು.

24 ರನ್’ಗಳ ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಮಾಡಲಿಳಿದ ಮುಂಬೈ ತಂಡಕ್ಕೆ ಮಿಥುನ್ ಆಘಾತ ನೀಡುವಲ್ಲಿ ಯಶಸ್ವಿಯಾದರು. 5ನೇ ಓವರ್’ನಲ್ಲಿ ಟೀಂ ಇಂಡಿಯಾ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಅವರನ್ನು ಎಲ್’ಬಿ ಬಲೆಗೆ ಸಿಲುಕಿಸಿದರು. ಇದರ ಬೆನ್ನಲ್ಲೇ ಸಿದ್ದೇಶ್ ಲಾಡ್ ಸಹಾ ಮಿಥುನ್’ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಮರು ಓವರ್’ನಲ್ಲಿ ವಿ. ಕೌಶಿಕ್ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಆದಿತ್ಯ ತಾರೆಯನ್ನು ಬಲಿ ಪಡೆಯುವ ಮೂಲಕ ತಂಡಕ್ಕೆ ಭರ್ಜರಿ ಯಶಸ್ಸು ದಕ್ಕಿಸಿಕೊಟ್ಟರು. ಆಗ ಮುಂಬೈ ಸ್ಕೋರ್ 3 ವಿಕೆಟ್ ನಷ್ಟಕ್ಕೆ 12 ರನ್..!

ರಣಜಿ ಟ್ರೋಫಿ: ಮುಂಬೈ ಎದುರು ಕರ್ನಾಟಕಕ್ಕೆ ಅಲ್ಪ ಮುನ್ನಡೆ

ಇನ್ನು ಮೊದಲ ಇನಿಂಗ್ಸ್’ನಲ್ಲಿ 77 ರನ್ ಬಾರಿಸಿ ತಂಡಕ್ಕೆ ಆಸರೆಯಾಗಿದ್ದ ಸೂರ್ಯ ಕುಮಾರ್ ಯಾದವ್[10] ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಮಿಥುನ್ ಮತ್ತೊಮ್ಮೆ ಯಶಸ್ವಿಯಾದರು. ಇದು ಮುಂಬೈ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಯಿತು. ಈ ವೇಳೆ ಮುಂಬೈ 4 ವಿಕೆಟ್ ನಷ್ಟಕ್ಕೆ 26 ರನ್ ಬಾರಿಸಿತ್ತು.

ಆಸರೆಯಾದ ಸರ್ಫರಾಜ್-ಮುಲಾನಿ: ಕರ್ನಾಟಕ ವೇಗಿಗಳ ದಾಳಿಗೆ ತತ್ತರಿಸಿ ಹೋಗಿದ್ದ ಮುಂಬೈ ಅಗ್ರಕ್ರಮಾಂಕ ಆಲೌಟ್ ಭೀತಿ ಅನುಭವಿಸಿತು. ಆದರೆ 5ನೇ ವಿಕೆಟ್’ಗೆ ಸರ್ಫರಾಜ್ ಅಹಮ್ಮದ್-ಮುಲಾನಿ ಜೋಡಿ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿತು. ಸರ್ಫರಾಜ್ ಖಾನ್ 92 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 53 ರನ್ ಬಾರಿಸಿ ಅಜೇಯರಾಗುಲಿದರೆ, ಮುಲಾನಿ 71 ಎಸೆತಗಳಲ್ಲಿ 5 ಬೌಂಡರಿ ಸಹಿತ 31 ರನ್ ಬಾರಿಸಿ ಕೌಶಿಕ್’ಗೆ ಎರಡನೇ ಬಲಿಯಾದರು.

ಮುನ್ನಡೆ ಒದಗಿಸಿದ ಸಮರ್ಥ್-ಶರತ್: ಮೂರು ವಿಕೆಟ್ ಕಳೆದುಕೊಂಡು 79 ರನ್’ಗಳೊಂದಿಗೆ ಎರಡನೇ ದಿನದಾಟ ಆರಂಭಿಸಿದ ಕರ್ನಾಟಕದ ಆರಂಭ ಅಷ್ಟೇನು ಉತ್ತಮವಾಗಿರಲಿಲ್ಲ. ಕರುಣ್ ನಾಯರ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಕಳಪೆ ಫಾರ್ಮ್’ನಿಂದ ಬಳಲುತ್ತಿದ್ದ ಆರ್. ಸಮರ್ಥ್ ಕೊನೆಗೂ ಅರ್ಧಶತಕ ಬಾರಿಶುವ ಮೂಲಕ ರನ್ ಬರ ನೀಗಿಸಿಕೊಂಡರು. ಸಮರ್ಥ್ 86 ರನ್ ಬಾರಿಸಿದರೆ, ಶ್ರೇಯಸ್ ಗೋಪಾಲ್ 31 ರನ್ ಬಾರಿಸುವ ಮೂಲಕ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು. ಇವರ ಬ್ಯಾಟಿಂಗ್ ಹೊರತಾಗಿಯೂ ಕರ್ನಾಟಕ ತಂಡ ಮೊದಲ ಇನಿಂಗ್ಸ್ ಹಿನ್ನಡೆಯ ಭೀತಿಗೆ ಒಳಗಾಗಿತ್ತು. ಆದರೆ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಬಿ. ಆರ್. ಶರತ್[46] ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡಕ್ಕೆ ಅಲ್ಪ ಮುನ್ನಡೆ ಒದಗಿಸಿಕೊಟ್ಟರು.