ಒಮ್ಮೆ ತಂಡದಿಂದ ಕೈಬಿಡಲ್ಪಟ್ಟ ರಜತ್ ಪಾಟಿದಾರ್, ಆರ್.ಸಿ.ಬಿಯ 18 ವರ್ಷಗಳ ಕಪ್ ಕನಸನ್ನು ನನಸು ಮಾಡಿದ ನಾಯಕನಾಗಿ ಹೊರಹೊಮ್ಮಿದ. ಹರಾಜಿನಲ್ಲಿ ಮಾರಾಟವಾಗದೆ, ಬದಲಿ ಆಟಗಾರನಾಗಿ ಬಂದು ತಂಡವನ್ನು ಮುನ್ನಡೆಸಿ ಕಪ್ ಗೆದ್ದುಕೊಟ್ಟ ಅವನ ರೋಚಕ ಪಯಣದ ಕಥೆಯಿದು.
ರಜತ್ ಪಾಟಿದಾರ್. ಈ ಹೆಸರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಎಂದಿಗೂ ಮರೆಯಲಾರರು. ಆರ್.ಸಿ.ಬಿಯ 18 ವರ್ಷಗಳ ಕಪ್ ಕನಸನ್ನು ನನಸು ಮಾಡಿದ್ದ ನಾಯಕನಿವನು. ಆರ್.ಸಿ.ಬಿಯನ್ನು ಸತತ 2ನೇ ಬಾರಿ ಫೈನಲ್’ಗೆ ಮುನ್ನಡೆಸಿದ ಸಾರಥಿಯಿವನು.
ಹಿಮಾಲಯದ ತಪ್ಪಲಲ್ಲಿನ ಮೈದಾನದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಅವನು ಆಡಿದ ಆಟವಿದೆಯಲ್ಲಾ. ಅದು ಹಿಮಾಲಯದೆತ್ತರದ ಸಾಧನೆ. 33 ಎಸೆತಗಳಲ್ಲಿ 93 ರನ್. 9 ಸಿಕ್ಸರ್’ಗಳು. ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಜೇಸನ್ ಹೋಲ್ಡರ್, ಪ್ರಸಿದ್ಧ್ ಕೃಷ್ಣ, ರಶೀದ್ ಖಾನ್’ರನ್ನೊಳಗೊಂಡ ಬಲಿಷ್ಠ ಬೌಲಿಂಗ್ ಆಕ್ರಮಣದ ಮುಂದೆ ಇಂಥಾ ಆಟವಾಡಲು ಗಟ್ಟಿ ಗುಂಡಿಗೆ ಬೇಕು.
ಆರ್‌ಸಿಬಿ ತಂಡದ ಕೊಹಿನೂರು ವಜ್ರ ರಜತ್ ಪಾಟೀದಾರ್
ಕೊಹ್ಲಿ ಕಟ್ಟಿದ ಸಾಮ್ರಾಜ್ಯ ಆರ್.ಸಿ.ಬಿಗೆ ಸಿಕ್ಕ ಕೊಹಿನೂರ್ ವಜ್ರ ಈ ರಜತ್ ಪಾಟಿದಾರ್. ಕೆಂಪು ಸೈನ್ಯದ ಸೇನಾಧಿಪತಿ ಇವನು. 2021ರಲ್ಲಿ 20 ಲಕ್ಷ ರೂಪಾಯಿಗೆ ರಾಯಲ್ ಚಾಲೆಂಜರ್ಸ್ ತಂಡ ಸೇರಿಕೊಂಡದ್ದ ಮಧ್ಯಪ್ರದೇಶ ಕ್ರಿಕೆಟಿಗನ ಆಟ, ನಾಯಕತ್ವ ಆರ್.ಸಿ.ಬಿ ಪಾಲಿಗೆ ಬೆಲೆ ಕಟ್ಟಲಾಗದ್ದು. 2021ರಲ್ಲಿ ಆರ್.ಸಿ.ಬಿಗೆ ಕಾಲಿಟ್ಟವನು ಆ ವರ್ಷ ನಾಲ್ಕು ಪಂದ್ಯಗಳಲ್ಲಿ 71 ರನ್ ಹೊಡೆದಿದ್ದ. ಅದೇ ವರ್ಷ ತಂಡದಿಂದ ಬಿಡುಗಡೆಗೊ೦ಡಿದ್ದ. ತಾಕತ್ತಿನ ಆಟಗಾರರನ್ನು ತಂಡದಿಂದ ಕೈ ಬಿಡುವುದು ಆ ದಿನಗಳಲ್ಲಿ ಆರ್.ಸಿ.ಬಿ ಜಾಯಮಾನ. ಹಾಗೆ ತಂಡದಿಂದ ಹೊರ ಬಿದ್ದ ರಜತ್ ಪಾಟಿದಾರ್. ಆದರೆ ವಿಧಿ ಬರೆದ ಕಥೆ ಬೇರೆಯೇ ಇತ್ತು.
ಅನ್‌ಸೋಲ್ಡ್ ಆದ ಆಟಗಾರನ ಕೈಬೀಸಿ ಕರೆದ
2022ರ ಐಪಿಎಲ್ ಹರಾಜಿನಲ್ಲಿ ಅವನನ್ನು ಯಾರೂ ಖರೀದಿಸಲಿಲ್ಲ. ಹಾಗೆಂದು ಅದೃಷ್ಟದೇವತೆ ಅವನ ಕೈ ಬಿಡಲಿಲ್ಲ. ಆರ್.ಸಿ.ಬಿ ತಂಡದಲ್ಲಿದ್ದ ಕರ್ನಾಟಕದ ಹುಡುಗ ಲವನೀತ್ ಸಿಸೋಡಿಯಾ 2022ರ ಟೂರ್ನಿಯ ಮಧ್ಯದಲ್ಲೇ ಗಾಯಗೊಂಡು ಹೊರ ನಡೆಯುತ್ತಾನೆ. ಅವನಿಗೆ ಬದಲಿ ಆಟಗಾರನಾಗಿ ಬಂದವನೇ ಈ ರಜತ್ ಪಾಟಿದಾರ್. ಆರ್.ಸಿ.ಬಿ ಪ್ಲೇ ಆಫ್ ತಲುಪಿತ್ತು ಆ ವರ್ಷ. ಲಕ್ನೋ ವಿರುದ್ಧದ ಎಲಿಮೆನೇಟರ್ ಪಂದ್ಯದಲ್ಲಿ ಪಾಟಿದಾರ್ ಕೇವಲ 54 ಎಸೆತಗಳಲ್ಲಿ ಅಜೇಯ 112 ರನ್ ಚಚ್ಚಿ ಬಿಸಾಕಿದ್ದ. ವಿರಾಟ್ ಕೊಹ್ಲಿ ಆರ್.ಸಿ.ಬಿ ನಾಯಕತ್ವ ತ್ಯಜಿಸುತ್ತಿದ್ದಂತೆ ಮುಂದೆ ಯಾರು ಎಂಬ ಪ್ರಶ್ನೆಗೆ ಉತ್ತರವಾದವನು ರಜತ್ ಪಾಟಿದಾರ್. ಫಾಫ್ ಡುಪ್ಲೆಸಿಸ್ ಕೈಯಿಂದ ನಾಯಕತ್ವದ ದಂಡ ಸ್ವೀಕರಿಸಿದ ಪಾಟಿದಾರ್, 2025ರಲ್ಲಿ ತಂಡಕ್ಕೆ ಕಪ್ ಗೆದ್ದು ಕೊಟ್ಟ.
ಈ ವರ್ಷ ಸ್ವತಃ ತಾನೇ ಮುಂಚೂಣಿಯಲ್ಲಿ ನಿಂತು ಕ್ವಾಲಿಫೈಯರ್ ಪಂದ್ಯದಲ್ಲಿ ಆರ್.ಸಿ.ಬಿಯನ್ನು ಗೆಲ್ಲಿಸಿ ಫೈನಲ್’ಗೆ ತಂದು ನಿಲ್ಲಿಸಿದ್ದಾನೆ. ಒತ್ತಡವನ್ನು ನಿಭಾಯಿಸುವ ರೀತಿ ಅವನ ಅಸಲಿ ಶಕ್ತಿ. ಅದೆಂಥಾ ಒತ್ತಡವೇ ಇರಲಿ ತಾಳ್ಮೆ ಕಳೆದುಕೊಳ್ಳಲಾರ. ಜ್ವಾಲಾಮುಖಿಯನ್ನೇ ನುಂಗಿದರೂ ಮಂಜನ್ನೇ ಎರಕ ಹೊಯ್ದ ಮುಖ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಂಥಾ ಅತೀ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಫ್ರಾಂಚೈಸಿಯನ್ನು ಮುನ್ನಡೆಸುವುದು ಸುಲಭವಲ್ಲ. ಅಲ್ಲಿ ಒತ್ತಡವೂ ಇರುತ್ತದೆ, ನಿರೀಕ್ಷೆಗಳೂ ನೂರ್ಮಡಿಯಾಗಿರುತ್ತವೆ. ರಜತ್ ಪಾಟಿದಾರ್ ಅವನೆಲ್ಲವನ್ನೂ ಸಲೀಸಾಗಿ ನಿಭಾಯಿಸುತ್ತಿದ್ದಾನೆ.
2022ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಣಜಿ ಫೈನಲ್’ನಲ್ಲಿ ಮುಂಬೈ ವಿರುದ್ಧ ಶತಕ ಬಾರಿಸಿ ಮಧ್ಯಪ್ರದೇಶಕ್ಕೆ ಮೊಟ್ಟ ಮೊದಲ ರಣಜಿ ಟ್ರೋಫಿ ಗೆದ್ದು ಕೊಟ್ಟವನು ರಜತ್ ಪಾಟಿದಾರ್. ಈಗ ಆರ್.ಸಿ.ಬಿಗೆ ಸತತ 2ನೇ ಕಪ್ ಗೆದ್ದು ಕೊಡುವ ಹಾದಿಯಲ್ಲಿದ್ದಾನೆ.

