ಯಶಸ್ವಿ ಜೈಸ್ವಾಲ್ ಮತ್ತು ಧ್ರುವ್ ಜುರೆಲ್ ಅವರ ಆಕರ್ಷಕ ಬ್ಯಾಟಿಂಗ್ ಹಾಗೂ ರವಿ ಬಿಷ್ಣೋಯ್ ಅವರ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 6 ರನ್‌ಗಳ ರೋಚಕ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ರಾಜಸ್ಥಾನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಅಹಮದಾಬಾದ್: ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ ಆಕರ್ಷಕ ಬ್ಯಾಟಿಂಗ್ ಹಾಗೂ ರವಿ ಬಿಷ್ಣೋಯ್ ಮಾರಕ ದಾಳಿಗೆ ತತ್ತರಿಸಿದ ಗುಜರಾತ್ ಟೈಟಾನ್ಸ್ ತಂಡವು ತವರಿನಲ್ಲೇ ರಾಜಸ್ಥಾನ ರಾಯಲ್ಸ್‌ ಎದುರು ಆರು ರನ್‌ಗಳ ವಿರೋಚಿತ ಸೋಲು ಕಂಡಿದೆ. ಈ ಗೆಲುವಿನೊಂದಿಗೆ 4 ಅಂಕಗಳ ಸಹಿತ ರಿಯಾನ್ ಪರಾಗ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟಿದೆ.

ಸವಾಲಿನ ಗುರಿ ಬೆನ್ನತ್ತಿದ ಟೈಟಾನ್ಸ್

ಸವಾಲಿನ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು ಸ್ಪೋಟಕ ಆರಂಭವನ್ನೇ ಪಡೆಯಿತು. ಗಿಲ್ ಬದಲಿಗೆ ಕಣಕ್ಕಿಳಿದ ಕುಮಾರ್ ಕುಶಾಗ್ರಾ ಹಾಗೂ ಸಾಯಿ ಸುದರ್ಶನ್ ಮೊದಲ ವಿಕೆಟ್‌ಗೆ 78 ರನ್‌ಗಳ ಜತೆಯಾಟವಾಡಿದರು. ಕುಶಾಗ್ರಾ 18 ರನ್ ಬಾರಿಸಿ ನಾಯಕ ರಿಯಾನ್ ಪರಾಗ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಸಾಯಿ ಸುದರ್ಶನ್ 44 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 73 ರನ್ ಸಿಡಿಸಿದರು. ಆದರೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ಸಿಗಲಿಲ್ಲ. ಬಟ್ಲರ್(26), ಗ್ಲೆನ್ ಫಿಲಿಪ್ಸ್(3), ವಾಷಿಂಗ್ಟನ್ ಸುಂದರ್(4), ರಾಹುಲ್ ತೆವಾಟಿಯಾ(12), ಶಾರುಖ್ ಖಾನ್(11) ಜವಾಬ್ದಾರಿಯುತ ಆಟವಾಡಲು ವಿಫಲವಾದರು. ಕೊನೆಯಲ್ಲಿ ಕಗಿಸೋ ರಬಾಡ(23) ಹಾಗೂ ರಶೀದ್ ಖಾನ್ 24 ರನ್ ಸಿಡಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

ರಾಜಸ್ಥಾನ ರಾಯಲ್ಸ್ ಪರ ಮಾರಕ ದಾಳಿ ನಡೆಸಿದ ರವಿ ಬಿಷ್ಣೋಯ್ 4 ವಿಕೆಟ್ ಕಬಳಿಸಿ ಪಂದ್ಯ ರಾಯಲ್ಸ್ ಪರ ವಾಲುವಂತೆ ಮಾಡಿದರು. ಇನ್ನುಳಿದಂತೆ ನಂದ್ರೆ ಬರ್ಗರ್, ತುಷಾರ್ ದೇಶಪಾಂಡೆ ಹಾಗೂ ರಿಯಾನ್ ಪರಾಗ್ ತಲಾ ಒಂದೊಂದು ವಿಕೆಟ್ ಪಡೆದರು.

ಟಾಸ್ ಗೆದ್ದು ಉತ್ತಮ ಆರಂಭ ಪಡೆದ ರಾಜಸ್ಥಾನ ರಾಯಲ್ಸ್

ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲಿಳಿದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ನಿರೀಕ್ಷೆಯಂತೆಯೇ ಪವರ್‌ಪ್ಲೇನಲ್ಲಿ ಸ್ಪೋಟಕ ಆರಂಭ ಒದಗಿಸಿಕೊಟ್ಟರು. 6.2 ಓವರ್‌ಗಳಲ್ಲಿ ಈ ಜೋಡಿ 70 ರನ್‌ಗಳ ಜತೆಯಾಟವಾಡುವ ಮೂಲಕ ಭದ್ರ ಬುನಾದಿ ಹಾಕಿಕೊಟ್ಟರು. ವೈಭವ್ ಸೂರ್ಯವಂಶಿ ಕೇವಲ 18 ಎಸೆತಗಳಲ್ಲಿ 5 ಬೌಂಡರಿ ಹಾಗೂ ಸಿಕ್ಸರ್ ಸಹಿತ 31 ರನ್ ಸಿಡಿಸಿ ರಶೀದ್ ಖಾನ್‌ಗೆ ವಿಕೆಟ್ ಒಪ್ಪಿಸಿದರು.

ಇದಾದ ಬಳಿಕ ಎರಡನೇ ವಿಕೆಟ್‌ಗೆ ಜತೆಯಾದ ಯಶಸ್ವಿ ಜೈಸ್ವಾಲ್ ಹಾಗೂ ಧ್ರುವ್ ಜುರೆಲ್ ಕೇವಲ 37 ಎಸೆತಗಳಲ್ಲಿ 56 ರನ್‌ಗಳ ಜತೆಯಾಟವಾಡಿದರು. ಚುರುಕಿನ ಬ್ಯಾಟಿಂಗ್ ನಡೆಸಿದ ಜೈಸ್ವಾಲ್ 36 ಎಸತೆಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 55 ರನ್ ಸಿಡಿಸಿ ರಬಾಡ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು. ಇನ್ನು ಕೊನೆಯವರೆಗೂ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಧ್ರುವ್ ಜುರೆಲ್ 42 ಎಸೆತಗಳಲ್ಲಿ ತಲಾ 5 ಬೌಂಡರಿ ಹಾಗೂ ಸಿಕ್ಸರ್ ಸಹಿತ 75 ರನ್ ಸಿಡಿಸಿ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು.

ಗುಜರಾತ್ ಟೈಟಾನ್ಸ್ ಪರ ಕಗಿಸೋ ರಬಾಡ ಎರಡು ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್, ಅಶೋಕ್ ಶರ್ಮಾ, ಪ್ರಸಿದ್ದ್ ಕೃಷ್ಣ ಹಾಗೂ ನಾಯಕ ರಶೀದ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.