ಬೆಂಗಳೂರು(ಜ.11): ವಿಶ್ವ ಕ್ರಿಕೆಟ್‌ ಕಂಡ ಜಂಟಲ್‌ಮನ್‌ ಕ್ರಿಕೆಟಿಗ, ದ ವಾಲ್‌ ಖ್ಯಾತಿಯ ರಾಹುಲ್‌ ದ್ರಾವಿಡ್‌ ಇಂದು 48ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಜನ್ಮದಿನಕ್ಕೆ ಟೀಂ ಇಂಡಿಯಾ ಸ್ಮರಣೀಯ ಗಿಫ್ಟ್‌ ನೀಡುವಲ್ಲಿ ಯಶಸ್ವಿಯಾಗಿದೆ.
   
ಹೌದು, ಟೀಂ ಇಂಡಿಯಾ ಆಪತ್ಭಾಂಧವ ಎಂದೇ ಗುರುತಿಸಿಕೊಂಡಿದ್ದ ರಾಹುಲ್‌ ದ್ರಾವಿಡ್‌ ಜನ್ಮದಿನದಂದೇ ಆಸ್ಟ್ರೇಲಿಯಾ ವಿರುದ್ದದ ಸಿಡ್ನಿ ಟೆಸ್ಟ್‌ ಪಂದ್ಯದಲ್ಲಿ ಕೆಚ್ಚೆದೆಯ ಪ್ರದರ್ಶನ ತೋರುವ ತಂಡವನ್ನು ಸೋಲಿನಿಂದ ಪಾರು ಮಾಡಿದರು. ಅಶ್ವಿನ್‌ ಹಾಗೂ ಹನುಮ ವಿಹಾರಿ ರಕ್ಷಣಾತ್ಮಕ ಆಟವಾಡುವ ಮೂಲಕ ತಂಡವನ್ನು ಸೋಲಿನಿಂದ ಬಚಾವ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರದರ್ಶನ ದ್ರಾವಿಡ್‌ಗೆ ಅರ್ಪಿಸಿದ ದ ಬೆಸ್ಟ್ ಗಿಫ್ಟ್ ಎಂದು ಐಸಿಸಿ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ತಿಳಿಸಿದೆ.

ರಾಹುಲ್ ದ್ರಾವಿಡ್ ಕೇವಲ ಯಶಸ್ವಿ ಬ್ಯಾಟ್ಸ್‌ಮನ್‌ ಮಾತ್ರವಲ್ಲ, ಅಗತ್ಯವಿದ್ದಾಗ ವಿಕೆಟ್‌ ಕೀಪರ್ ಆಗಿ, ಚುರುಕಿನ ಸ್ಲಿಪ್ ಫೀಲ್ಡರ್ ಆಗಿಯೂ ದ್ರಾವಿಡ್ ಸೈ ಎನಿಸಿಕೊಂಡಿದ್ದಾರೆ. ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತ ಪರ 164 ಟೆಸ್ಟ್‌ ಪಂದ್ಯಗಳನ್ನಾಡಿ 286 ಇನಿಂಗ್ಸ್‌ಗಳಲ್ಲಿ 52.31ರ ಸರಾಸರಿಯಲ್ಲಿ 13288 ರನ್‌ ಬಾರಿಸುವ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿದ ನಾಲ್ಕನೇ ಬ್ಯಾಟ್ಸ್‌ಮನ್ ಎನ್ನುವ ದಾಖಲೆ ರಾಹುಲ್ ದ್ರಾವಿಡ್ ಹೆಸರಿನಲ್ಲಿದೆ.

ಸಿಡ್ನಿ ಟೆಸ್ಟ್‌; ಪಂತ್ ಶೈನಿಂಗ್, ಸೋಲಿನಿಂದ ಪಾರು ಮಾಡಿದ ಹನುಮ-ಅಶ್ವಿನ್

ರಾಹುಲ್ ದ್ರಾವಿಡ್‌ ಹುಟ್ಟುಹಬ್ಬಕ್ಕೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ವಿರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್ ಸೇರಿದಂತೆ ಹಲವು ಆಟಗಾರರು ಟ್ವೀಟ್‌ ಮೂಲಕ ಶುಭಕೋರಿದ್ದಾರೆ.