ಭಾರತದ ವಿರುದ್ಧದ ಟಿ20 ಸರಣಿಯನ್ನು ನ್ಯೂಜಿಲೆಂಡ್ ತಂಡ ಈಗಾಗಲೇ ಕೈಚೆಲ್ಲಿದೆ. ಭುಜದ ಗಾಯದ ಸಮಸ್ಯೆಯಿಂದಾಗಿ ಕಿವೀಸ್ ಸ್ಟಾರ್ ಆಟಗಾರ ರಚಿನ್ ರವೀಂದ್ರ ಈ ಸರಣಿಯಿಂದ ಹೊರಗುಳಿದಿದ್ದಾರೆ. ಅವರು ಮುಂಬರುವ ಏಕದಿನ ಸರಣಿಯ ವೇಳೆಗೆ ತಂಡಕ್ಕೆ ಮರಳುವ ನಿರೀಕ್ಷೆಯಿದೆ.

ವೆಲ್ಲಿಂಗ್ಟನ್: ಭಾರತ-ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಮೂರು ಪಂದ್ಯಗಳು ಮುಕ್ತಾಯವಾಗಿದ್ದು, ಶ್ರೇಯಸ್ ಅಯ್ಯರ್ ನೇತೃತ್ವದ ಟೀಂ ಇಂಡಿಯಾ ಈಗಾಗಲೇ 3-0 ಮುನ್ನಡೆ ಸಾಧಿಸುವ ಮೂಲಕ ಸರಣಿ ಕೈವಶ ಮಾಡಿಕೊಂಡಿದೆ. ಆದರೆ ಭಾರತ ಎದುರು ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ರಚಿನ್ ರವೀಂದ್ರ ಈ ಟಿ20 ಸರಣಿಯಲ್ಲಿ ಯಾಕೆ ಆಡುತ್ತಿಲ್ಲ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡಲಾರಂಭಿಸಿದೆ. ಈ ಕುರಿತಂತೆ ಇದೀಗ ಮಹತ್ವದ ಅಪ್‌ಡೇಟ್ಸ್ ಹೊರಬಿದ್ದಿದೆ.

ಏಕದಿನ ಸರಣಿಗೆ ರಚಿನ್ ರವೀಂದ್ರ ಕಮ್‌ಬ್ಯಾಕ್?

ಹೌದು, ಬೆಂಗಳೂರು ಮೂಲದ ರಚಿನ್ ರವೀಂದ್ರ ಭುಜದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಭಾರತ-ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯ ಪ್ರೋಮೋ ಶೂಟ್ ಮಾಡುವ ವೇಳೆಯಲ್ಲಿ ರಚಿನ್ ರವೀಂದ್ರ ಭುಜದ ಗಾಯಕ್ಕೆ ಒಳಗಾಗಿದ್ದರು. ಇದೀಗ ರಚಿನ್ ರವೀಂದ್ರ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಏಕದಿನ ಸರಣಿ ವೇಳೆಗೆ ಕಿವೀಸ್ ತಂಡವನ್ನು ಕೂಡಿಕೊಳ್ಳುವ ನಿರೀಕ್ಷೆಯಿದೆ.

'ರಚಿನ್ ರವೀಂದ್ರ ವಿಚಾರದಲ್ಲಿ ನಮಗೆ ಬೇಸರವಾಗುತ್ತಿದೆ' ಎಂದು ನ್ಯೂಜಿಲೆಂಡ್ ತಂಡದ ಹೆಡ್‌ ಕೋಚ್ ರಾಬ್ ವಾಲ್ಟರ್ ಹೇಳಿದ್ದಾರೆ. ಈ ಬೇಸಿಗೆಯಲ್ಲಿ ಅವರು ನಮ್ಮ ತಂಡದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಆದ್ದರಿಂದ ಅವರು ತಮ್ಮ ಚೇತರಿಕೆಯ ಪ್ರಕ್ರಿಯೆಯನ್ನು ಅರ್ಜೆಂಟ್ ಮಾಡುವುದಿಲ್ಲ. ಆದರೆ ಅವರು ಏಕದಿನ ಸರಣಿಯ ವೇಳೆಗೆ ತಂಡವನ್ನು ಕೂಡಿಕೊಳ್ಳುವ ವಿಶ್ವಾಸವಿದೆ ಎಂದು ಕಿವೀಸ್ ಕೋಚ್ ಹೇಳಿದ್ದಾರೆ.

ಪಂದ್ಯಗಳನ್ನು ಗೆಲ್ಲುವುದು ಮತ್ತು ಅತ್ಯುತ್ತಮ ತಂಡ ಕಣಕ್ಕಿಳಿಯುವಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ; ಆದರೆ, ಮುಂಬರುವ ತಿಂಗಳುಗಳಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಗಳ ಸಂಖ್ಯೆಯನ್ನೂ ನಾವು ಗಮನದಲ್ಲಿಟ್ಟುಕೊಳ್ಳಬೇಕಿದೆ. ನಮ್ಮ ತಂಡದಲ್ಲಿರುವ 16 ಆಟಗಾರರು ಈ ಸರಣಿಯ ವರ್ಕ್‌ಲೋಡ್ ಮ್ಯಾನೇಜ್‌ ಮಾಡುವ ವಿಶ್ವಾಸವಿದೆ' ಎಂದು ರಾಬ್ ವಾಲ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟಿ20 ಸರಣಿ ಕೈಚೆಲ್ಲಿದ ಕಿವೀಸ್:

ಭಾರತ ಎದುರಿನ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಇದೀಗ ಆತಿಥೇಯ ಕಿವೀಸ್‌ ತಂಡವು ಇನ್ನೂ ಎರಡು ಪಂದ್ಯ ಬಾಕಿ ಇರುವಂತೆಯೇ ಟಿ20 ಸರಣಿ ಕೈಚೆಲ್ಲಿದೆ. ಮೊದಲೆರಡು ಪಂದ್ಯಗಳಲ್ಲಿ ಸೋಲು ಕಂಡಿದ್ದ ನ್ಯೂಜಿಲೆಂಡ್ ತಂಡವು ಮೂರನೇ ಪಂದ್ಯದಲ್ಲಾದರೂ ಕಮ್‌ಬ್ಯಾಕ್ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿ ಆರ್ಭಟದ ಮುಂದೆ ಕಿವೀಸ್ ಮಂಕಾಗಿದ್ದು, ಆರು ವಿಕೆಟ್‌ಗಳ ಸೋಲು ಅನುಭವಿಸಿತು.