ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ 199 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಭಾರತ ಭರ್ಜರಿ ಜಯ ಸಾಧಿಸಿದೆ. ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಅಭಿಷೇಕ್ ಶರ್ಮಾ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಆದರೆ 12 ಎಸೆತಗಳಲ್ಲಿ ಫಿಫ್ಟಿ ಬಾರಿಸುವ ದಾಖಲೆ ಮುರಿಯದ ಕಾರಣಕ್ಕೆ ಯುವರಾಜ್ ಸಿಂಗ್ ತಮ್ಮ ಶಿಷ್ಯನ ಕಾಲೆಳೆದಿದ್ದಾರೆ.
ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡವು ಭರ್ಜರಿ ಜಯ ಸಾಧಿಸಿದೆ. ಗೆಲ್ಲಲು 199 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಭಾರತ ಕೇವಲ ನಾಲ್ಕು ವಿಕೆಟ್ ಕಳೆದುಕೊಂಡು ಇನ್ನೂ 40 ಎಸೆತ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ. ಇನ್ನು ಅಭಿಷೇಕ್ ಶರ್ಮಾ ಎರಡನೇ ಅತಿವೇಗದ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಹೀಗಿದ್ದೂ, ಯುವರಾಜ್ ಸಿಂಗ್ ತಮ್ಮ ಶಿಷ್ಯ ಅಭಿಷೇಕ್ ಶರ್ಮಾ ಅವರನ್ನು ಕಾಲೆಳೆದಿದ್ದಾರೆ.
ಸವಾಲಿನ ಗುರಿ ಬೆನ್ನತ್ತಿದ ಟೀಂ ಇಂಡಿಯಾಗೆ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸುವ ಮೂಲಕ ರನ್ ಖಾತೆ ತೆರೆದರು. ಇದಾದ ಬಳಿಕವೂ ನ್ಯೂಜಿಲೆಂಡ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಅಭಿಷೇಕ್ ಶರ್ಮಾ ಕೇವಲ 10 ಎಸೆತಗಳಲ್ಲಿ 38 ರನ್ ಸಿಡಿಸಿದರು. ಈ ಮೂಲಕ ಅಭಿಷೇಕ್ ಶರ್ಮಾ, ಯುವರಾಜ್ ಸಿಂಗ್ ಹೆಸರಿನಲ್ಲಿ ಅಚ್ಚಳಿಯದೇ ಉಳಿದಿರುವ ಅಪರೂಪದ ದಾಖಲೆಯನ್ನು ಸರಿಗಟ್ಟುಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಆ ದಾಖಲೆ ಸರಿಗಟ್ಟಲು ಸಾಧ್ಯವಾಗಲಿಲ್ಲ. ಅಭಿಷೇಕ್ ಶರ್ಮಾ 14 ಎಸೆತಗಳನ್ನು ಎದುರಿಸಿ ಅರ್ಧಶತಕ ಪೂರೈಸುವ ಮೂಲಕ ಎರಡನೇ ಸ್ಥಾನ ಪಡೆದರು. ಇನ್ನು, ಯುವರಾಜ್ ಸಿಂಗ್ 2007ರ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಎದುರು ಕೇವಲ 12 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಕಳೆದ 19 ವರ್ಷಗಳಿಂದಲೂ ಆ ದಾಖಲೆ ಇಂದಿಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಚ್ಚಳಿಯದೇ ಉಳಿದಿದೆ.
ಅಭಿಷೇಕ್ ಶರ್ಮಾ ಕಾಲೆಳೆದ ಯುವರಾಜ್ ಸಿಂಗ್:
ಅಂದಹಾಗೆ ಅಭಿಷೇಕ್ ಶರ್ಮಾ ಕ್ರಿಕೆಟ್ ದಂತಕಥೆ ಯುವರಾಜ್ ಸಿಂಗ್ ಅವರ ಗರಡಿಯಲ್ಲಿ ಪಳಗಿದ ಪ್ರತಿಭೆ. ಇದೇ ಕಾರಣಕ್ಕೆ ಆಗಾಗ ಯುವಿ, ಅಭಿಷೇಕ್ ಶರ್ಮಾ ಬಗ್ಗೆ ಒಂದಲ್ಲಾ ಒಂದು ಪ್ರತಿಕ್ರಿಯೆ ನೀಡುತ್ತಲೇ ಬಂದಿದ್ದಾರೆ. ಇದೀಗ 12 ಎಸೆತಗಳಲ್ಲಿ ಅರ್ಧಶತಕ ಪೂರೈಸಲು ವಿಫಲವಾದ ಅಭಿಷೇಕ್ ಶರ್ಮಾ ಬಗ್ಗೆ ಯುವಿ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಕಾಲೆಳೆದಿದ್ದಾರೆ. 'ಕೊನೆಗೂ ನಿನಗೆ 12 ಎಸೆತಗಳಲ್ಲಿ 50 ರನ್ ಬಾರಿಸಲು ಸಾಧ್ಯವಾಗಲಿಲ್ಲ. 12 ಎಸೆತಗಳಲ್ಲಿ ಫಿಫ್ಟಿ ಬಾರಿಸುತ್ತೀಯಾ ಅಭಿಷೇಕ್ ಶರ್ಮಾ' ಎಂದು ಟೀಂ ಇಂಡಿಯಾ ಆರಂಭಿಕನ ಕಾಲೆಳೆದಿದ್ದಾರೆ.
ಟಿ20 ಸರಣಿ ಗೆದ್ದ ಟೀಂ ಇಂಡಿಯಾ:
ಭಾರತ-ನ್ಯೂಜಿಲೆಂಡ್ ನಡುವಿನ 3ನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ನ್ಯೂಜಿಲೆಂಡ್ ತಂಡವು ಬೃಹತ್ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಗಿತ್ತು. ಡೇರಲ್ ಮಿಚೆಲ್ ಅಜೇಯ 89 ರನ್ ಬಾರಿಸಿದರೆ, ಫಿನ್ ಅಲೆನ್ 40 ಹಾಗೂ ಬೆವೊನ್ ಜೇಕೊಬ್ಸ್ ಅಜೇಯ 39 ರನ್ ಸಿಡಿಸಿದರು. ಅಂತಿಮವಾಗಿ ನ್ಯೂಜಿಲೆಂಡ್ ತಂಡವು ಕೇವಲ 3 ವಿಕೆಟ್ ಕಳೆದುಕೊಂಡು 198 ರನ್ ಕಲೆಹಾಕಿತು.
ಗುರಿ ಬೆನ್ನತ್ತಿದ ಭಾರತಕ್ಕೆ ಮೊದಲ ವಿಕೆಟ್‌ಗೆ ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ಈ ಜೋಡಿ ಕೇವಲ 7.1 ಓವರ್‌ಗಳಲ್ಲಿ 133 ರನ್ ಜತೆಯಾಟವಾಡಿದರು. ವೈಭವ್ ಸೂರ್ಯವಂಶಿ 19 ಎಸೆತಗಳಲ್ಲಿ 45 ರನ್ ಬಾರಿಸಿದರೆ, ಅಭಿಷೇಕ್ ಶರ್ಮಾ 38 ಎಸೆತಗಳಲ್ಲಿ 113 ರನ್ ಚಚ್ಚಿದರು.







