Asianet Suvarna News Asianet Suvarna News

ಹರಿಣಗಳಿಗೆ ಸ್ಪರ್ಧಾತ್ಮಕ ಗುರಿ ನೀಡಿದ ಭಾರತ ಮಹಿಳಾ ತಂಡ

ದಕ್ಷಿಣ ಆಫ್ರಿಕಾ ವಿರುದ್ದದ ಮೂರನೇ ಏಕದಿನ ಪಂದ್ಯದಲ್ಲಿ ಮಿಥಾಲಿ ರಾಜ್ ನೇತೃತ್ವದ ಭಾರತ ಮಹಿಳಾ ತಂಡ 248 ರನ್‌ ಕಲೆಹಾಕಿದ್ದು, ಹರಿಣಗಳಿಗೆ ಸ್ಪರ್ಧಾತ್ಮಕ ಗುರಿ ನೀಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Punam Raut half Century Helps Indian Womens Team Set 249 runs Target to South Africa kvn
Author
Lucknow, First Published Mar 12, 2021, 1:02 PM IST

ಲಖನೌ(ಮಾ.12): ಪೂನಂ ರಾವತ್‌(77) ಸಮಯೋಚಿತ ಅರ್ಧಶತಕದ ನೆರವಿನಿಂದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ 5 ವಿಕೆಟ್ ಕಳೆದುಕೊಂಡು 248 ರನ್‌ ಬಾರಿಸಿದ್ದು, ಪ್ರವಾಸಿ ದಕ್ಷಿಣ ಆಫ್ರಿಕಾಗೆ ಸ್ಪರ್ಧಾತ್ಮಕ ಗುರಿ ನೀಡಿದೆ.

ಇಲ್ಲಿನ ಏಕಾನ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಭಾರತ ಮೊದಲ ಓವರ್‌ನಲ್ಲೇ ಜೆಮಿಯಾ ರೋಡ್ರಿಗಸ್‌ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಯಿತು. ಆದರೆ ಎರಡನೇ ವಿಕೆಟ್‌ಗೆ ಮಂಧನಾ ಹಾಗೂ ಪೂನಂ ರಾವತ್ ಜೋಡಿ 62 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಕಳೆದ ಪಂದ್ಯದಲ್ಲಿ ಅಜೇಯ ಅರ್ಧಶತಕ ಬಾರಿಸಿದ್ದ ಸ್ಮೃತಿ ಮಂಧನಾ 25 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು.

ಸತತ ಎರಡು ಅರ್ಧಶತಕ ಬಾರಿಸಿದ ಪೂನಂ: ಎರಡನೇ ಏಕದಿನ ಪಂದ್ಯದಲ್ಲಿ ಅಜೇಯ 62 ರನ್‌ ಬಾರಿಸಿದ್ದ ಪೂನಂ, ಮೂರನೇ ಏಕದಿನ ಪಂದ್ಯದಲ್ಲೂ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಪೂನಂ 108 ಎಸೆತಗಳನ್ನು ಎದುರಿಸಿ 11 ಬೌಂಡರಿಗಳ ನೆರವಿನಿಂದ 77 ರನ್‌ ಬಾರಿಸಿ ಕೆಪ್‌ಗೆ ವಿಕೆಟ್‌ ಒಪ್ಪಿಸಿದರು. 

ಮಹಿಳಾ ಕ್ರಿಕೆಟ್‌: 10 ಸಾವಿರ ರನ್ ಬಾರಿಸಿ ಹೊಸ ದಾಖಲೆ ಬರೆದ ಮಿಥಾಲಿ ರಾಜ್‌..!

ಮಿಥಾಲಿ ಸೇರಿ ಮೂವರು ತಲಾ 36 ರನ್‌: ಪೂನಂಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ನೀಡಿದ ನಾಯಕಿ ಮಿಥಾಲಿ ರಾಜ್‌ 36 ರನ್‌ ಬಾರಿಸಿದರು. ಮಿಥಾಲಿ 35 ರನ್‌ ಬಾರಿಸುತ್ತಿದ್ದಂತೆಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಪೂರೈಸಿದ ಭಾರತದ ಮೊದಲ ಹಾಗೂ ವಿಶ್ವದ ಎರಡನೇ ಆಟಗಾರ್ತಿ ಎನ್ನುವ ಗೌರವಕ್ಕೆ ಭಾಜನರಾದರು. ಇದಾದ ಬಳಿಕ ಹರ್ಮನ್‌ಪ್ರೀತ್ ಕೌರ್ 36 ಹಾಗೂ ದೀಪ್ತಿ ಶರ್ಮಾ ಅಜೇಯ 36 ರನ್‌ ಬಾರಿಸುವ ಮೂಲಕ ತಂಡದ ಮೊತ್ತವನ್ನು 250ರ ಸಮೀಪ ಕೊಂಡೊಯ್ಯುವಲ್ಲಿ ನೆರವಾದರು. ಕೊನೆಯಲ್ಲಿ ವಿಕೆಟ್‌ ಕೀಪರ್‌ ಬ್ಯಾಟ್ಸ್‌ವುಮೆನ್‌ ಸುಷ್ಮಾ ವರ್ಮಾ 14 ರನ್‌ ಬಾರಿಸಿ ಅಜೇಯರಾಗುಳಿದರು.

ಸಂಕ್ಷಿಪ್ತ ಸ್ಕೋರ್

ಭಾರತ: 248/5
ಪೂನಂ ರಾವತ್: 77
ಶಭ್ನಿಮ್‌ ಇಸ್ಮಾಯಿಲ್‌: 46/2
 

Follow Us:
Download App:
  • android
  • ios