RCB ತಂಡಕ್ಕೆ ಭಾವನಾತ್ಮಕ ವಿದಾಯ ಹೇಳಿದ ಡೇಲ್ ಸ್ಟೇನ್..!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್ ಡೇಲ್ ಸ್ಟೇನ್ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಜೋಹಾನ್ಸ್‌ಬರ್ಗ್(ಜ.03): ದಕ್ಷಿಣ ಆಫ್ರಿಕಾದ ದಿಗ್ಗಜ ವೇಗದ ಬೌಲರ್ ಡೇಲ್ ಸ್ಟೇನ್ 2021ರ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಆದರೆ ತಾವು ನಿವೃತ್ತಿ ಘೋಷಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ತಂಡದ ಪರ ಆಡಿದ್ದ ಸ್ಟೇನ್, ಮುಂದಿನ ಆವೃತ್ತಿಯಲ್ಲಿ ಮತ್ತ್ಯಾವುದೇ ತಂಡದ ಪರವೂ ಆಡುವುದಿಲ್ಲ ಎನ್ನುವುದನ್ನೂ ಖಚಿತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸ್ಟೇನ್, ‘ನಾನು ಈ ವರ್ಷ ಐಪಿಎಲ್ ಆರ್‌ಸಿಬಿ ಪರ ಆಡುವುದಿಲ್ಲ. ಬೇರೆ ಯಾವ ತಂಡದ ಪರವೂ ಕಣಕ್ಕಿಳಿಯುವುದಿಲ್ಲ. ಹಾಗಂತ ನಾನು ನಿವೃತ್ತಿ ಘೋಷಿಸುತ್ತಿಲ್ಲ. ಬೇರೆ ಲೀಗ್‌ಗಳಲ್ಲಿ ಆಡಲಿದ್ದೇನೆ’ ಎಂದಿದ್ದಾರೆ.
ನನ್ನನ್ನು ಅರ್ಥಮಾಡಿಕೊಂಡಿದ್ದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅನಂತ ಧನ್ಯವಾದಗಳು ಎಂದು ಆಫ್ರಿಕಾ ಅನುಭವಿ ವೇಗಿ ಡೇಲ್ ಸ್ಟೇನ್ ಟ್ವೀಟ್ ಮಾಡಿದ್ದಾರೆ.
ನಿವೃತ್ತಿ ಯೋಚನೆ ಸದ್ಯಕ್ಕಿಲ್ಲ, ಇನ್ನೂ 2 ವಿಶ್ವಕಪ್ ಆಡುವೆ: ಕ್ರಿಸ್ ಗೇಲ್!
ಡೇಲ್ ಸ್ಟೇನ್ ಟ್ವೀಟ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕೂಡಾ ಪ್ರತಿಕ್ರಿಯಿಸಿದ್ದು, ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಮಗೆ ಹಲವು ಸ್ಮರಣೀಯ ನೆನಪುಗಳನ್ನು ನೀಡಿದ ನಿಮಗೆ ಧನ್ಯವಾದಗಳು ಎಂದು ಆರ್‌ಸಿಬಿ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಶುಭ ಕೋರಿದೆ.
13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸದಸ್ಯರಾಗಿದ್ದ 37 ವರ್ಷದ ಸ್ಟೇನ್ ಕೇವಲ 03 ಪಂದ್ಯಗಳನ್ನಾಡಿ ಒಂದು ವಿಕೆಟ್ ಮಾತ್ರ ಕಬಳಿಸಿದ್ದರು. ಕೊರೋನಾ ಕಾರಣದಿಂದಾಗಿ ಭಾರತದಿಂದ ಯುಎಇಗೆ ಸ್ಥಳಾಂತರಗೊಂಡಿದ್ದ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.