ಅಡಿಲೇಡ್‌(ಡಿ.18): ಟೀಂ ಇಂಡಿಯಾ ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ ಪಾಲಿಗೆ ಈಗೀಗ ಹಗ್ಗ ಕೂಡಾ ಹಾವಿನಂತೆ ಭಾಸವಾಗುತ್ತಿದೆ. ಮೊದಲೇ ಕಳಪೆ ಫಾರ್ಮ್‌ನಿಂದ ಬಳಲಿ ಬೆಂಡಾಗಿ ಹೋಗಿರುವ ಪೃಥ್ವಿ  ಕ್ಷೇತ್ರ ರಕ್ಷಣೆಯ ವೇಳೆಯೂ ಕಳಪೆ ಪ್ರದರ್ಶನ ತೋರುವುದರ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ.

ಹೌದು, ಟೀಂ ಇಂಡಿಯಾ ಪರ ಮೊದಲ ಇನಿಂಗ್ಸ್‌ನಲ್ಲಿ ಕೇವಲ ಎರಡು ಎಸೆತಗಳನ್ನು ಎದುರಿಸಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದ್ದ ಪೃಥ್ವಿ ಶಾ, ಎರಡನೇ ದಿನದಾಟದಲ್ಲಿ ಕೈಗೆ ಬಂದ ಕ್ಯಾಚ್ ಕೈಚೆಲ್ಲಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ಮಾರ್ನಸ್ ಲಬುಶೇನ್ ನೀಡಿದ್ದ ಸುಲಭ ಕ್ಯಾಚ್ ಕೈಚೆಲ್ಲಿ ನಿರಾಸೆ ಅನುಭವಿಸಿದ್ದಾರೆ.

ಪಿಂಕ್ ಬಾಲ್ ಟೆಸ್ಟ್: ಅಶ್ವಿನ್ ಝಲಕ್, ಸಂಕಷ್ಟದಲ್ಲಿ ಅಸೀಸ್‌

ಮೊದಲ ಇನಿಂಗ್ಸ್‌ನಲ್ಲಿ ಕೇವಲ 244 ರನ್ ಬಾರಿಸಿ ಆಲೌಟ್ ಆಗಿರುವ ಟೀಂ ಇಂಡಿಯಾಗೆ ಲಬುಶೇನ್ ವಿಕೆಟ್‌ ಮಹತ್ವದ್ದಾಗಿತ್ತು. ಆದರೆ ಪೃಥ್ವಿ ಶಾ ಕ್ಯಾಚ್ ಕೈಚೆಲ್ಲಿದ್ದಕ್ಕೆ ಟೀಂ ಇಂಡಿಯಾ ಕ್ರಿಕೆಟ್‌ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.