ಅಡಿಲೇಡ್(ಡಿ.18): ರವಿಚಂದ್ರನ್ ಅಶ್ವಿನ್ ಅವರ ಚಾಣಾಕ್ಷ ಬೌಲಿಂಗ್ ದಾಳಿಗೆ ತತ್ತರಿಸಿದ ಆತಿಥೇಯ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಅನುಭವಿಸಿದೆ. ಚಹಾ ವಿರಾಮದ ವೇಳೆಗೆ ಆಸ್ಟ್ರೇಲಿಯಾ 5 ವಿಕೆಟ್ ಕಳೆದುಕೊಂಡು 92 ರನ್ ಬಾರಿಸಿದ್ದು, ಇನ್ನೂ 152 ರನ್‌ಗಳ ಹಿನ್ನಡೆಯಲ್ಲಿದೆ. 

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯವಾದ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾವನ್ನು ಕೇವಲ 244 ರನ್‌ಗಳಿಗೆ ಆಲೌಟ್ ಮಾಡಿ ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದ ಆಸ್ಟ್ರೇಲಿಯಾ ತಂಡ ಆರಂಭದಲ್ಲಿ ತುಂಬಾ ಎಚ್ಚರಿಕೆಯ ಆಟಕ್ಕೆ ಮೊರೆ ಹೋಯಿತು. ಮೊದಲ 14 ಓವರ್‌ನಲ್ಲಿ ಕೇವಲ 16 ರನ್ ಮಾತ್ರ ಗಳಿಸಿತ್ತು. ಆದರೆ 15ನೇ ಓವರ್‌ನಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಭಾರತಕ್ಕೆ ಮೊದಲ ಯಶಸ್ಸು ದಕ್ಕಿಸಿಕೊಡುವಲ್ಲಿ ಯಶಸ್ವಿಯಾದರು. ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಮ್ಯಾಥ್ಯೂ ವೇಡ್ ಹಾಗೂ ಜೋ ಬರ್ನ್ಸ್‌ ತಲಾ 8 ರನ್ ಬಾರಿಸಿ ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದು ಪೆವಿಲಿಯನ್ ಹಾದಿ ಹಿಡಿದರು.

ಶಾಕ್ ಕೊಟ್ಟ ಅಶ್ವಿನ್: ಬುಮ್ರಾ ಹೊರತುಪಡಿಸಿ ಉಳಿದ್ಯಾವ ವೇಗಿಗಳಿಂದ ವಿಕೆಟ್‌ ಕಬಳಿಸಲು ಸಾಧ್ಯವಾಗದಿದ್ದಾಗ ನಾಯಕ ಕೊಹ್ಲಿ ಸ್ಪಿನ್ ಅಸ್ತ್ರ ರವಿಚಂದ್ರನ್ ಅಶ್ವಿನ್ ಅವರನ್ನು 27ನೇ ಓವರ್‌ನಲ್ಲಿ ದಾಳಿಗಿಳಿಸಿದರು. ಆದರೆ ನಾಯಕ ತಮ್ಮ ಮೇಲಿಟ್ಟ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ಅನುಭವಿ ಆಫ್‌ಸ್ಪಿನ್ನರ್ ಯಶಸ್ವಿಯಾದರು. ಅಶ್ವಿನ್ ತಾವೆಸೆದ ಮೊದಲ ಓವರ್‌ನಲ್ಲೇ ವಿಶ್ವ ನಂ.1 ಟೆಸ್ಟ್‌ ಶ್ರೇಯಾಂಕಿತ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಇದರ ಬೆನ್ನಲ್ಲೇ ತ್ರಾವಿಸ್ ಹೆಡ್(7) ಹಾಗೂ ಕ್ಯಾಮರೋನ್ ಗ್ರೀನ್‌(11) ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು.