ಲಿಂಕನ್‌(ಜ.20): ಪೃಥ್ವಿ ಶಾ ಸ್ಫೋಟಕ ಶತಕದ (100 ಎಸೆತಗಳಲ್ಲಿ 150 ರನ್‌) ನೆರವಿನಿಂದ ನ್ಯೂಜಿಲೆಂಡ್‌ ಇಲೆವೆನ್‌ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 12 ರನ್‌ಗಳ ರೋಚಕ ಜಯ ಸಾಧಿಸಿದೆ. 

ಮೊದಲು ಬ್ಯಾಟಿಂಗ್ ಮಾಡಿದ ಭಾರತ 'ಎ' ತಂಡಕ್ಕೆ ಆರಂಭಿಕರಾದ ಮಯಾಂಕ್ ಅಗರ್‌ವಾಲ್-ಪೃಥ್ವಿ ಶಾ 89 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿದರು. 20 ವರ್ಷದ ಪೃಥ್ವಿ 22 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 150 ರನ್ ಬಾರಿಸಿದರು. 

ಭಾರತ ‘ಎ’ ತಂಡದಲ್ಲಿ ಹಾರ್ದಿಕ್ ಪಾಂಡ್ಯ, ಪೃಥ್ವಿ ಶಾಗೆ ಸ್ಥಾನ

372 ರನ್‌ಗಳ ಬೃಹತ್‌ ಮೊತ್ತ ಪೇರಿಸಿದ ಭಾರತ ‘ಎ’ 12 ರನ್‌ಗಳ ಗೆಲುವು ಸಾಧಿಸಿತು. ಮೊದಲ ಪಂದ್ಯದಲ್ಲೂ ಭಾರತ ‘ಎ’ 92 ರನ್‌ಗಳ ಗೆಲುವು ಪಡೆದಿತ್ತು. ಭರ್ಜರಿ ಹೋರಾಟದ ಹೊರತಾಗಿಯೂ ನ್ಯೂಜಿಲೆಂಡ್‌ ಇಲೆವೆನ್‌ 6 ವಿಕೆಟ್‌ಗೆ 360 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. 

ಕಳೆದ ವರ್ಷ ಆಸ್ಟ್ರೇಲಿಯಾ ಪ್ರವಾಸದ ವೇಳೆ ಗಾಯಕ್ಕೆ ಒಳಗಾಗಿ ಟೀಂ ಇಂಡಿಯಾದಿಂದ ಹೊರಬಿದ್ದಿರುವ ಪೃಥ್ವಿ ಶಾ ಆ ಬಳಿಕ ಬೇರೆ ಬೇರೆ ಕಾರಣಗಳಿಂದ ತಂಡದಿಂದ ಹೊರಗುಳಿದಿದ್ದಾರೆ. ಇನ್ನು ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ತಂಡಕ್ಕೆ ಕಮ್‌ಬ್ಯಾಕ್ ಮಾಡುವ ನಿಟ್ಟಿನಲ್ಲಿ ಪೃಥ್ವಿ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಫೆಬ್ರವರಿ 21ರಂದು ಹ್ಯಾಮಿಲ್ಟನ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆದರೆ, ಫೆಬ್ರವರಿ 29ರಂದು ಕ್ರೈಸ್ಟ್ ಚರ್ಚ್‌ನಲ್ಲಿ ಎರಡನೇ ಟೆಸ್ಟ್ ಪಂದ್ಯ ಜರುಗಲಿದೆ.