Asianet Suvarna News Asianet Suvarna News

ICC World Cup 2023: ವಿರಾಟ್ ಕೊಹ್ಲಿ ಕೊಂಡಾಡಿದ ಪ್ರಧಾನಿ ಮೋದಿ..!

ವಿರಾಟ್‌ ಕೊಹ್ಲಿ 50ನೇ ಶತಕಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದು, ಸಾಮಾಜಿಕ ತಾಣ ಎಕ್ಸ್‌(ಟ್ವೀಟರ್‌)ನಲ್ಲಿ ಕೊಂಡಾಡಿದ್ದಾರೆ. ‘ಈ ಮಹೋನ್ನತ ಮೈಲಿಗಲ್ಲು ಕೊಹ್ಲಿ ಅವರ ಅಪ್ರತಿಮ ಬದ್ಧತೆ ಹಾಗೂ ಅಸಾಧಾರಣ ಪ್ರತಿಭೆಗೆ ಸಿಕ್ಕಿರುವ ಗೌರವ. ಅವರನ್ನು ಅಭಿನಂದಿಸುತ್ತಾ, ಅವರು ಮುಂದಿನ ಪೀಳಿಗೆಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಮಾರ್ಗದರ್ಶನ ತೋರಲಿ ಎಂದು ಆಶಿಸುತ್ತೇನೆ’ ಎಂದು ಮೋದಿ ಟ್ವೀಟಿಸಿದ್ದಾರೆ.

PM Narendra Modi extends heartfelt wishes to Virat Kohli following record breaking 50th ODI ton kvn
Author
First Published Nov 16, 2023, 9:49 AM IST

ಮುಂಬೈ(ನ.16): ಕೆಲ ವರ್ಷಗಳ ಹಿಂದೆ ಸಚಿನ್‌ ತೆಂಡುಲ್ಕರ್‌ ತಮ್ಮ ದಾಖಲೆಗಳನ್ನು ವಿರಾಟ್‌ ಕೊಹ್ಲಿ ಅಥವಾ ರೋಹಿತ್‌ ಶರ್ಮಾ ಮುರಿಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು. ‘ಕ್ರಿಕೆಟ್‌ ದೇವರ’ ಭವಿಷ್ಯ ಸುಳ್ಳಾದೀತೆ? ಏಕದಿನ ಕ್ರಿಕೆಟ್‌ನಲ್ಲಿ 50 ಶತಕಗಳ ಮೈಲಿಗಲ್ಲನ್ನು ವಿರಾಟ್‌ ಕೊಹ್ಲಿ ಸ್ಥಾಪಿಸಿದ್ದಾರೆ. ತೆಂಡುಲ್ಕರ್‌ರ 49 ಶತಕಗಳ ದಾಖಲೆಯನ್ನು ಅವರ ಎದುರೇ ಮುರಿದು, ಆ ದಾಖಲೆಯನ್ನು ಅವರಿಗೇ ಅರ್ಪಿಸಿದ್ದಾರೆ.

ವಿರಾಟ್‌ ಕೊಹ್ಲಿ 50ನೇ ಶತಕಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದು, ಸಾಮಾಜಿಕ ತಾಣ ಎಕ್ಸ್‌(ಟ್ವೀಟರ್‌)ನಲ್ಲಿ ಕೊಂಡಾಡಿದ್ದಾರೆ. ‘ಈ ಮಹೋನ್ನತ ಮೈಲಿಗಲ್ಲು ಕೊಹ್ಲಿ ಅವರ ಅಪ್ರತಿಮ ಬದ್ಧತೆ ಹಾಗೂ ಅಸಾಧಾರಣ ಪ್ರತಿಭೆಗೆ ಸಿಕ್ಕಿರುವ ಗೌರವ. ಅವರನ್ನು ಅಭಿನಂದಿಸುತ್ತಾ, ಅವರು ಮುಂದಿನ ಪೀಳಿಗೆಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಮಾರ್ಗದರ್ಶನ ತೋರಲಿ ಎಂದು ಆಶಿಸುತ್ತೇನೆ’ ಎಂದು ಮೋದಿ ಟ್ವೀಟಿಸಿದ್ದಾರೆ.

ಈ ವಿಶ್ವಕಪ್‌ನಲ್ಲಿ ಕೊಹ್ಲಿ ತಮ್ಮ ಆರಾಧ್ಯ ದೈವ ಸಚಿನ್‌ರ ದಾಖಲೆ ಮುರಿಯಲಿದ್ದಾರೆ ಎನ್ನುವ ನಂಬಿಕೆ ಕೋಟ್ಯಂತರ ಅಭಿಮಾನಿಗಳಲ್ಲಿತ್ತು. ರನ್‌ ಮಷಿನ್‌ ಕೊಹ್ಲಿ ಆ ನಂಬಿಕೆಯನ್ನು ಹುಸಿಗೊಳಿಸಲಿಲ್ಲ. ಬುಧವಾರ ನ್ಯೂಜಿಲೆಂಡ್‌ ವಿರುದ್ಧದ ಏಕದಿನ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ ತಮ್ಮ ವಿರಾಟ ರೂಪ ಪ್ರದರ್ಶಿಸಿದ ಕೊಹ್ಲಿ, 50ನೇ ಶತಕ ದಾಖಲಿಸಿದರು.

98 ರನ್ ಆಗಿದ್ದಾಗ ವಿರಾಟ್‌ ಮಿಡ್‌ ವಿಕೆಟ್‌ನತ್ತ ಚೆಂಡನ್ನಟ್ಟಿದ್ದರು. ಅತಿವೇಗವಾಗಿ 2 ರನ್‌ ಓಡಿ, ಆಗಸದೆತ್ತರಕ್ಕೆ ನೆಗೆದು ಗಾಳಿಗೆ ಗುದ್ದಿ ಚೀರಿ ತಮ್ಮ ಶತಕದ ಸಂಭ್ರಮವನ್ನು ಆಚರಿಸಿದ ಕ್ಷಣವನ್ನು ಈ ಪೀಳಿಗೆಯ ಕ್ರಿಕೆಟ್‌ ಅಭಿಮಾನಿಗಳು ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ.

ಕ್ರಿಕೆಟ್‌ನ ಅತಿದೊಡ್ಡ ವೇದಿಕೆಯಾದ ವಿಶ್ವಕಪ್‌ನಲ್ಲಿ, ಅದೂ ಐಸಿಸಿ ಟೂರ್ನಿಗಳಲ್ಲಿ ಭಾರತವನ್ನು ಅತಿಯಾಗಿ ಕಾಡಿರುವ ಬದ್ಧವೈರಿ ನ್ಯೂಜಿಲೆಂಡ್‌ ಎದುರು ಕೊಹ್ಲಿ ಇನ್ನಿಂಗ್ಸ್‌ ಕಟ್ಟಿದ ರೀತಿ ಯುವ ಕ್ರಿಕೆಟಿಗರಿಗೆ ಪಠ್ಯದಂತ್ತಿತ್ತು.

ಎಚ್ಚರವಾಗಿ ಇನ್ನಿಂಗ್ಸ್‌ ಆರಂಭಿಸಿದ ಕೊಹ್ಲಿ, ನಿಧಾನವಾಗಿ ಒಂದೊಂದೇ ರನ್‌ ಕದಿಯುತ್ತಾ ಸಮಯ ಬಂದಾಗ ಗೇರ್‌ ಬದಲಿಸಿ ಶತಕದತ್ತ ಮುನ್ನುಗ್ಗುವುದರ ಜೊತೆಗೆ ತಂಡದ ಮೊತ್ತವನ್ನೂ ಹಿಗ್ಗಿಸಿದ್ದರು. ವಿರಾಟ್‌ರ ಶತಕ ಭಾರತ ಬೃಹತ್‌ ಮೊತ್ತ ಪೇರಿಸಲು ಕಾರಣವಾಯಿತು. 113 ಎಸೆತಗಳನ್ನು ಎದುರಿಸಿದ ಕೊಹ್ಲಿ 9 ಬೌಂಡರಿ, 2 ಸಿಕ್ಸರ್‌ನೊಂದಿಗೆ 117 ರನ್‌ ಸಿಡಿಸಿ ಮೈದಾನ ತೊರೆದರು.

ಕೊಹ್ಲಿ ಕೇವಲ 279 ಇನ್ನಿಂಗ್ಸ್‌ಗಳಲ್ಲೇ 50 ಶತಕ ಸಿಡಿಸಿದ್ದು, ಸಚಿನ್‌ ತೆಂಡುಲ್ಕರ್‌ 49 ಶತಕಕ್ಕೆ 452 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು. ರೋಹಿತ್‌ ಶರ್ಮಾ 31 ಶತಕಗಳೊಂದಿಗೆ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್‌ 30, ಶ್ರೀಲಂಕಾತ ಸನತ್‌ ಜಯಸೂರ್ಯ 28 ಶತಕ ಬಾರಿಸಿದ್ದಾರೆ.

3, 4ನೇ ಕ್ರಮಾಂಕದಲ್ಲಿ ಆಡಿದಾಗಷ್ಟೇ ಶತಕ!

ವಿರಾಟ್‌ ಏಕದಿನ ಕ್ರಿಕೆಟ್‌ನಲ್ಲಿ 1 ರಿಂದ 7ನೇ ಕ್ರಮಾಂಕದ ವರೆಗೂ ಆಡಿದ್ದಾರೆ. ಆದರೆ 3 ಹಾಗೂ 4ನೇ ಕ್ರಮಾಂಕಗಳಲ್ಲಿ ಆಡಿದಾಗ ಮಾತ್ರ ಅವರಿಂದ ಶತಕಗಳು ದಾಖಲಾಗಿವೆ. 3ನೇ ಕ್ರಮಾಂಕದಲ್ಲಿ 224 ಇನ್ನಿಂಗ್ಸ್‌ಗಳನ್ನು ಆಡಿದ್ದು 43 ಶತಕ ಬಾರಿಸಿದ್ದಾರೆ. 4ನೇ ಕ್ರಮಾಂಕದಲ್ಲಿ 39 ಇನ್ನಿಂಗ್ಸ್‌ಗಳನ್ನು ಆಡಿ 7 ಶತಕ ದಾಖಲಿಸಿದ್ದಾರೆ. 1ನೇ ಕ್ರಮಾಂಕದಲ್ಲಿ 4 ಇನ್ನಿಂಗ್ಸ್‌, 2ನೇ ಕ್ರಮಾಂಕದಲ್ಲಿ 3, 5ನೇ ಕ್ರಮಾಂಕದಲ್ಲಿ 4, 6ನೇ ಕ್ರಮಾಂಕದಲ್ಲಿ 1 ಹಾಗೂ 7ನೇ ಕ್ರಮಾಂಕದಲ್ಲಿ 4 ಇನ್ನಿಂಗ್ಸ್‌ಗಳನ್ನು ಕೊಹ್ಲಿ ಆಡಿದ್ದಾರೆ.

Follow Us:
Download App:
  • android
  • ios