ಅಡಿಲೇಡ್(ಡಿ.18): ಆಸ್ಟ್ರೇಲಿಯಾ ವೇಗಿಗಳ ಮಾರಕ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ ಪಿಂಕ್ ಬಾಲ್ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕೇವಲ 244 ರನ್‌ಗಳಿಗೆ ಸರ್ವಪತನ ಕಂಡಿದೆ. 

ಮೊದಲ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 233 ರನ್ ಬಾರಿಸಿದ್ದ ಟೀಂ ಇಂಡಿಯಾ ಎರಡನೇ ದಿನದಾಟದ ಆರಂಭದಲ್ಲೇ ತನ್ನ ಖಾತೆಗೆ ಕೇವಲ 11 ರನ್ ಸೇರಿಸಿ ಕೊನೆಯ 4 ವಿಕೆಟ್ ಕಳೆದುಕೊಂಡಿತು. ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ವೃದ್ದಿಮಾನ್ ಸಾಹ(9) ಹಾಗೂ ರವಿಚಂದ್ರನ್ ಅಶ್ವಿನ್(15) ಎರಡನೇ ದಿನದಾಟದಲ್ಲಿ ತಮ್ಮ ಖಾತೆಗೆ ಒಂದು ಸೇರಿಸಲು ಆಸ್ಟ್ರೇಲಿಯಾ ವೇಗಿಗಳು ಅವಕಾಶ ಮಾಡಿಕೊಡಲಿಲ್ಲ.

ಭಾರತಕ್ಕೆ ಮುಳುವಾಯ್ತು ಕೊಹ್ಲಿ ರನೌಟ್; ಆಡಿಲೇಡ್ ಟೆಸ್ಟ್ ಮೊದಲ ದಿನ ಆಸೀಸ್ ಪ್ರಾಬಲ್ಯ!

ಆಸ್ಟ್ರೇಲಿಯಾ ಪರ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ 53 ರನ್ ನೀಡಿ 4 ವಿಕೆಟ್‌ ಪಡೆಯುವ ಮೂಲಕ ಯಶಸ್ವಿ ಬೌಲರ್ ಎನಿಸಿಕೊಂಡರೆ, ಪ್ಯಾಟ್ ಕಮಿನ್ಸ್‌ 3 ಹಾಗೂ ಜೋಸ್ ಹೇಜಲ್‌ವುಡ್ ಮತ್ತು ನೇಥನ್ ಲಯನ್ ತಲಾ ಒಂದೊಂದು ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು.

ಸಂಕ್ಷಿಪ್ತ ಸ್ಕೋರ್:
ಭಾರತ: 244/10(ಮೊದಲ ಇನಿಂಗ್ಸ್‌)
ವಿರಾಟ್ ಕೊಹ್ಲಿ: 74
ಮಿಚೆಲ್ ಸ್ಟಾರ್ಕ್: 53/4