ಅಹಮದಾಬಾದ್‌(ಫೆ.25): ಟೀಂ ಇಂಡಿಯಾ ಸ್ಪಿನ್‌ ಮಾಂತ್ರಿಕ ರವಿಚಂದ್ರನ್ ಅಶ್ವಿನ್‌ ಪಿಂಕ್‌ ಬಾಲ್‌ ಟೆಸ್ಟ್ ಪಂದ್ಯದಲ್ಲಿ ಜೋಫ್ರಾ ಆರ್ಚರ್ ವಿಕೆಟ್‌ ಕಬಳಿಸುವ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ 400 ವಿಕೆಟ್‌ ಕಬಳಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಸ್ಪಿನ್ ದಿಗ್ಗಜ ಮುತ್ತಯ್ಯ ಮುರುಳೀಧರನ್‌ ಬಳಿಕ ಅತಿವೇಗವಾಗಿ 400 ವಿಕೆಟ್‌ ಕಬಳಿಸಿದ ಎರಡನೇ ಬೌಲರ್ ಎನ್ನುವ ಗೌರವಕ್ಕೆ ಚೆನ್ನೈ ಸ್ಪಿನ್ನರ್ ಯಶಸ್ವಿಯಾಗಿದ್ದಾರೆ. 

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್‌ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್‌ 400 ವಿಕೆಟ್‌ ಕಬಳಿಸಿದ ಸಾಧನೆ ಮಾಡಿದ್ದಾರೆ. ತಮ್ಮ 77ನೇ ಟೆಸ್ಟ್ ಪಂದ್ಯದಲ್ಲಿ 400 ವಿಕೆಟ್‌ ಕಬಳಿಸಿದ್ದಾರೆ. ಮುತ್ತಯ್ಯ ಮುರುಳೀಧರನ್‌ ಕೇವಲ 72 ಟೆಸ್ಟ್‌ ಪಂದ್ಯದಲ್ಲಿ ನಾನೂರು ಟೆಸ್ಟ್ ಬಲಿ ಪಡೆದಿದ್ದರು. 

100ನೇ ಟೆಸ್ಟ್‌ನಲ್ಲಿ ಚೊಚ್ಚಲ ಸಿಕ್ಸರ್‌ ಸಿಡಿಸಿದ ಇಶಾಂತ್ ಶರ್ಮಾ..!

ಅಶ್ವಿನ್‌ ಇಂಗ್ಲೆಂಡ್‌ ಕ್ರಿಕೆಟಿಗ ಜೋಫ್ರಾ ಆರ್ಚರ್‌ ಬಲಿ ಪಡೆಯುವ ಮೂಲಕ ಭಾರತ ಪರ 400+ ವಿಕೆಟ್‌ ಪಡೆದ ನಾಲ್ಕನೇ ಬೌಲರ್‌ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೊದಲು ಅನಿಲ್ ಕುಂಬ್ಳೆ(619), ಕಪಿಲ್ ದೇವ್(434), ಹರ್ಭಜನ್ ಸಿಂಗ್(417) ಈ ಸಾಧನೆ ಮಾಡಿದ್ದಾರೆ.

ರವಿಚಂದ್ರನ್‌ ಅಶ್ವಿನ್‌ ಅವರ ಈ ಸಾಧನೆಗೆ ಟೀಂ ಇಂಡಿಯಾ ದಿಗ್ಗಜ ಸ್ಪಿನ್ನರ್ ಅನಿಲ್‌ ಕುಂಬ್ಳೆ, ವಿವಿಎಸ್‌ ಲಕ್ಷ್ಮಣ್ ಸೇರಿದಂತೆ ಹಲವು ಹಿರಿಕಿರಿಯ ಆಟಗಾರರು ಅಭಿನಂದನೆ ಸಲ್ಲಿಸಿದ್ದಾರೆ.