ಅಹಮದಾಬಾದ್‌(ಫೆ.25): ಇಂಗ್ಲೆಂಡ್‌ ನಾಯಕ ಜೋ ರೂಟ್‌(8/5) ಹಾಗೂ ಜಾಕ್‌ ಲೀಚ್‌ ಸ್ಪಿನ್‌ ಜಾಲಕ್ಕೆ ತತ್ತರಿಸಿದ ಟೀಂ ಇಂಡಿಯಾ ಪಿಂಕ್‌ ಬಾಲ್ ಟೆಸ್ಟ್‌ನಲ್ಲಿ ನಾಟಕೀಯ ಕುಸಿತ ಕಂಡಿದ್ದು, ಮೊದಲ ಇನಿಂಗ್ಸ್‌ನಲ್ಲಿ ಕೇವಲ 145 ರನ್‌ಗಳಿಗೆ ಆಲೌಟ್ ಆಗಿದೆ. ಇದರೊಂದಿಗೆ ಭಾರತ ಮೊದಲ ಇನಿಂಗ್ಸ್‌ನಲ್ಲಿ ಕೇವಲ 33 ರನ್‌ಗಳ ಮುನ್ನಡೆ ಸಾಧಿಸಿದೆ.

ಹೌದು, ಮೊದಲ ದಿನದಾಟದಂತ್ಯಕ್ಕೆ ಕೇವಲ 3 ವಿಕೆಟ್‌ ಕಳೆದುಕೊಂಡು 99 ರನ್‌ ಬಾರಿಸಿದ್ದ ಭಾರತಕ್ಕೆ ಎರಡನೇ ದಿನದಾಟದ ಆರಂಭದಲ್ಲೇ ಇಂಗ್ಲೆಂಡ್‌ ಸ್ಪಿನ್ನರ್‌ಗಳು ಇನ್ನಿಲ್ಲದಂತೆ ಕಾಡಿದರು. ತಂಡದ ಖಾತೆಗೆ 25 ರನ್‌ ಸೇರಿಸುವಷ್ಟರಲ್ಲಿ ಐವರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿದರು. ರೋಹಿತ್ ಶರ್ಮಾ 66 ರನ್‌ ಭಾರತದ ಪರ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿತು. 

ಪಿಂಕ್ ಬಾಲ್ ಟೆಸ್ಟ್: ಅಕ್ಸರ್ ಸ್ಪಿನ್ ಮೋಡಿ , ರೋಹಿತ್ ಅರ್ಧಶತಕಕ್ಕೆ ತತ್ತರಿಸಿದ ಇಂಗ್ಲೆಂಡ್!

ಕೈಕೊಟ್ಟ ಮಧ್ಯಮ ಕ್ರಮಾಂಕ: ಭಾರತ ಬೃಹತ್ ಮುನ್ನಡೆ ಪಡೆಯುವ ಲೆಕ್ಕಾಚಾರದೊಂದಿಗೆ ಎರಡನೇ ದಿನದಾಟ ಆರಂಭಿಸಿತ್ತು. ಆದರೆ ರಹಾನೆ(7), ರಿಷಭ್‌ ಪಂತ್‌(1), ವಾಷಿಂಗ್ಟನ್ ಸುಂದರ್(0) ಹಾಗೂ ಅಕ್ಷರ್ ಪಟೇಲ್(0) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ರವಿಚಂದ್ರನ್ ಅಶ್ವಿನ್‌ 17 ಹಾಗೂ ಇಶಾಂತ್ ಶರ್ಮಾ ಅಜೇಯ 10 ರನ್‌ ಬಾರಿಸುವ ಮೂಲಕ ತಂಡ 30+ ರನ್‌ ಮುನ್ನಡೆ ಸಾಧಿಸಲು ನೆರವಾದರು.

ರೂಟ್‌ ಝಲಕ್‌: ವೃತ್ತಿಜೀವನದ ಶ್ರೇಷ್ಠ ಬೌಲಿಂಗ್ ಪ್ರದರ್ಶನ ತೋರಿದ ಜೋ ರೂಟ್ ಕೇವಲ 8 ರನ್‌ ನೀಡಿ ಭಾರತದ 5 ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾ ಬ್ಯಾಟಿಂಗ್‌ ಬೆನ್ನೆಲುಬನ್ನೇ ಮುರಿದರು. ನಾಯಕನಿಗೆ ಉತ್ತಮ ಸಾಥ್ ನೀಡಿದ ಜಾಕ್ ಲೀಚ್ 4 ವಿಕೆಟ್ ಕಬಳಿಸಿ ಟೀಂ ಇಂಡಿಯಾ ಕುಸಿತಕ್ಕೆ ಕಾರಣರಾದರು

ಸಂಕ್ಷಿಪ್ತ ಸ್ಕೋರ್:

ಇಂಗ್ಲೆಂಡ್‌: 112/10(ಮೊದಲ ಇನಿಂಗ್ಸ್)

ಭಾರತ: 145/10(ಮೊದಲ ಇನಿಂಗ್ಸ್‌)