ಅಡಿಲೇಡ್(ಡಿ.18): ಅನುಭವಿ ಆಫ್‌ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮಿಂಚಿನ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ತಂಡ ಪಿಂಕ್ ಬಾಲ್ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 191 ರನ್ ಬಾರಿಸಿ ಸರ್ವಪತನ ಕಂಡಿದೆ. ಇದರೊಂದಿಗೆ ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 53 ರನ್‌ಗಳ ಮುನ್ನಡೆ ಸಾಧಿಸಿದೆ.

ಚಹಾ ವಿರಾಮದ ವೇಳೆಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಸ್ಟ್ರೇಲಿಯಾ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ನಾಯಕ ಟಿಮ್ ಪೈನ್ ಆಸರೆಯಾದರು. 6ನೇ ವಿಕೆಟ್‌ಗೆ ಲಬುಶೇನ್ ಹಾಗೂ ಪೈನ್ ಜೋಡಿ 32 ರನ್‌ಗಳ ಜತೆಯಾಟ ನಿಭಾಯಿಸಿದರು. ಪಂದ್ಯದ 54ನೇ ಓವರ್‌ನಲ್ಲಿ ಉಮೇಶ್ ಯಾದವ್ ನೆಲಕಚ್ಚಿ ಆಡುತ್ತಿದ್ದ ಮಾರ್ನಸ್ ಲಬುಶೇನ್(47) ಹಾಗೂ ಪ್ಯಾಟ್ ಕಮಿನ್ಸ್‌(0) ಅವರನ್ನು ಬಲಿ ಪಡೆಯುವ ಮೂಲಕ ಆಸೀಸ್‌ಗೆ ಶಾಕ್ ನೀಡಿದರು.

ನಾಯಕನ ಆಟವಾಡಿದ ಪೈನ್: ಒಂದು ಹಂತದಲ್ಲಿ 111 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಸ್ಟ್ರೇ;ಲಿಯಾ ತಂಡಕ್ಕೆ ಟಿಮ್ ಪೈನೆ ಆಸರೆಯಾದರು. ಬಾಲಗೋಚಿಗಳನ್ನು ಕಟ್ಟಿಕೊಂಡು ತಂಡದ ಮೊತ್ತವನ್ನು ಇನ್ನೂರರ ಸಮೀಪ ಕೊಂಡ್ಯೊಯ್ದರು. ನಾಯಕ ಪೈನ್ 99 ಎಸೆತಗಳನ್ನು ಎದುರಿಸಿ 10 ಬೌಂಡರಿ ಸಹಿತ 73 ರನ್ ಬಾರಿಸಿ ಅಜೇಯರಾಗುಳಿದರು.

ಪಿಂಕ್ ಬಾಲ್ ಟೆಸ್ಟ್: ಅಶ್ವಿನ್ ಝಲಕ್, ಸಂಕಷ್ಟದಲ್ಲಿ ಅಸೀಸ್‌

ಭಾರತ ಪರ ರವಿಚಂದ್ರನ್ ಅಶ್ವಿನ್ 4 ವಿಕೆಟ್ ಪಡೆದರೆ, ಉಮೇಶ್ ಯಾದವ್ 3 ಹಾಗೂ ಜಸ್ಪ್ರೀತ್ ಬುಮ್ರಾ 2 ವಿಕೆಟ್ ಪಡೆದರು.