* 4 ಬಲಿಷ್ಠ ಕ್ರಿಕೆಟ್ ರಾಷ್ಟ್ರಗಳ ನಡುವೆ ಟಿ20 ಕ್ರಿಕೆಟ್ ಟೂರ್ನಿ ಆಯೋಜಿಸಲು ಪಿಸಿಬಿ ಪ್ಲಾನ್* ಭಾರತ, ಪಾಕಿಸ್ತಾನ ಸೇರಿ 4 ತಂಡಗಳ ನಡುವೆ ಪ್ರತಿವರ್ಷ ಟಿ20 ಟೂರ್ನಿ ನಡೆಸಲು ಐಸಿಸಿ ಮುಂದೆ ಪ್ರಸ್ತಾಪ* ಪಿಸಿಬಿ ಮುಖ್ಯಸ್ಥ ರಮೀಜ್ ರಾಜಾ ಪ್ರಸ್ತಾವವನ್ನು ಉಳಿದ ರಾಷ್ಟ್ರಗಳು ಒಪ್ಪಿಕೊಳ್ತಾವಾ..?
ಲಾಹೋರ್(ಜ.13): ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಿನ ಕ್ರಿಕೆಟ್ ಪಂದ್ಯಗಳು ಐಸಿಸಿ ವಿಶ್ವಕಪ್ (ICC World Cup), ಏಷ್ಯಾಕಪ್ ಟೂರ್ನಿಗಳಿಗಷ್ಟೇ (Asia Cup Cricket Tournament) ಸೀಮಿತಗೊಂಡಿರುವ ಸಮಯದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) (Pakistan Cricket Board) ಅಧ್ಯಕ್ಷ ರಮೀಜ್ ರಾಜಾ ಉಭಯ ದೇಶಗಳ ನಡುವೆ ವಾರ್ಷಿಕ ಟಿ20 ಸರಣಿಯೊಂದನ್ನು ಆಯೋಜಿಸಲು ಪ್ರಸ್ತಾಪಿಸಿದ್ದಾರೆ. ಸೂಪರ್ ಸೀರೀಸ್ ಹೆಸರಿನ ಈ ಸರಣಿಯಲ್ಲಿ ಆಡಲು ಆಸ್ಪ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳಿಗೂ ಆಹ್ವಾನ ನೀಡುವುದಾಗಿ ಹೇಳಿರುವ ರಾಜಾ, ಈ ಬಗ್ಗೆ ಸದ್ಯದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಜೊತೆ ಚರ್ಚಿಸುವುದಾಗಿ ಹೇಳಿದ್ದಾರೆ.
‘ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳನ್ನು ಟಿ20 ಸೂಪರ್ ಸೀರೀಸ್‌ನಲ್ಲಿ ಆಡಿಸುವ ಯೋಜನೆಯೊಂದನ್ನು ರೂಪಿಸಿದ್ದೇನೆ. ಪ್ರತಿ ವರ್ಷ ಒಂದೊಂದು ದೇಶ ಆತಿಥ್ಯ ವಹಿಸಲಿದೆ. ಈ ಟೂರ್ನಿಯು ಎಲ್ಲಾ 4 ಕ್ರಿಕೆಟ್ ಮಂಡಳಿಗಳಿಗೆ ಆರ್ಥಿಕ ಲಾಭ ತಂದುಕೊಡಲಿದೆ’ ಎಂದು ರಮೀಜ್ ರಾಜಾ (Ramiz Raja) ಟ್ವೀಟ್ ಮಾಡಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು 2013ರಲ್ಲಿ ಕಡೆಯ ಬಾರಿಗೆ ದ್ವಿಪಕ್ಷೀಯ ಸರಣಿಯನ್ನಾಡಿತ್ತು. ಇದಾದ ಬಳಿಕ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟ ಹಿನ್ನೆಲೆಯಲ್ಲಿ ಉಭಯ ತಂಡಗಳು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. 2013ರಲ್ಲಿ ಭಾರತ ತಂಡವು ತವರಿನಲ್ಲಿ ಪಾಕಿಸ್ತಾನ ಎದುರು ದ್ವಿಪಕ್ಷೀಯ ಟಿ20 ಸರಣಿಯನ್ನು ಆಡಿತ್ತು. ಇನ್ನು ಕೆಲ ತಿಂಗಳ ಹಿಂದಷ್ಟೇ ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಬಾಬರ್ ಅಜಂ (Babar Azam) ನೇತೃತ್ವದ ಪಾಕಿಸ್ತಾನ ತಂಡವು ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತ ವಿರುದ್ದ ಗೆಲುವಿನ ನಗೆ ಬೀರಿತ್ತು. ಕ್ರಿಕೆಟ್ ಅಭಿಮಾನಿಗಳ ನೆಚ್ಚಿನ ಪಂದ್ಯಾಟದಲ್ಲಿ ಪಾಕಿಸ್ತಾನ ತಂಡವು 10 ವಿಕೆಟ್‌ಗಳ ಅಂತರದ ಗೆಲುವು ದಾಖಲಿಸಿತ್ತು.
ಅಂಡರ್-19: ಅಭ್ಯಾಸ ಪಂದ್ಯದಲ್ಲಿ ಗೆದ್ದ ಭಾರತ
ಪ್ರೊವಿಡೆನ್ಸ್(ಗಯಾನಾ): ಆರಂಭಿಕ ಬ್ಯಾಟರ್ ಹರ್ನೂರ್ ಸಿಂಗ್‌ರ ಅಜೇಯ 100 ರನ್‌ಗಳ ಆಟದ ನೆರವಿನಿಂದ ಮಂಗಳವಾರ ನಡೆದ ಆಸ್ಪ್ರೇಲಿಯಾ ವಿರುದ್ಧ ಅಂಡರ್-19 ಏಕದಿನ ವಿಶ್ವಕಪ್‌ನ ಅಭ್ಯಾಸ ಪಂದ್ಯದಲ್ಲಿ 9 ವಿಕೆಟ್ ಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಆಸೀಸ್ 49.2 ಓವರಲ್ಲಿ 268 ರನ್‌ಗೆ ಆಲೌಟ್ ಆಗಿತ್ತು. ಭಾರತ 15 ಎಸೆತ ಬಾಕಿ ಇರುವಂತೆ ಕೇವಲ 1 ವಿಕೆಟ್ ನಷ್ಟಕ್ಕೆ 269 ರನ್ ಗಳಿಸಿತು. ಡಿಸೆಂಬರ್ 14ರಂದು ಟೂರ್ನಿ ಆರಂಭಗೊಳ್ಳಲಿದ್ದು, ಡಿಸೆಂಬರ್ 15ರಂದು ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ.
ದಕ್ಷಿಣ ಆಫ್ರಿಕಾ ಏಕದಿನಕ್ಕಿಲ್ಲ ವಾಷಿಂಗ್ಟನ್ ಸುಂದರ್, ಜಯಂತ್ ಯಾದವ್ ಇನ್
ಮುಂಬೈ: ಕೊರೋನಾ ಸೋಂಕಿಗೆ (Coronavirus) ತುತ್ತಾಗಿರುವ ಭಾರತದ ಯುವ ಆಲ್ರೌಂಡರ್ ವಾಷಿಂಗ್ಟನ್ ಸುಂದರ್(Washington Sundar), ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಬದಲು ಜಯಂತ್ ಯಾದವ್‌ಗೆ ಸ್ಥಾನ ನೀಡಲಾಗಿದೆ. ಇನ್ನು ವೇಗಿ ಮೊಹಮದ್ ಸಿರಾಜ್ ಗಾಯದಿಂದ ಸಂಪೂರ್ಣ ಚೇತರಿಸಿಕೊಳ್ಳದ ಕಾರಣ ನವ್‌ದೀಪ್ ಸೈನಿಯನ್ನು ಮೀಸಲು ಆಟಗಾರನಾಗಿ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ.
SA vs India 3rd Test : ಜಸ್ ಪ್ರೀತ್ ಬುಮ್ರಾ ಸೂಪರ್ ಬೌಲಿಂಗ್, ಭಾರತಕ್ಕೆ ಅಮೂಲ್ಯ ಮುನ್ನಡೆ
ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟೆಸ್ಟ್ ಸರಣಿ ಮುಕ್ತಾಯದ ಬಳಿಕ ಜನವರಿ 19ರಿಂದ ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿಯು ಆರಂಭವಾಗಲಿದೆ. ಸೀಮಿತ ಓವರ್‌ಗಳ ತಂಡದ ನೂತನ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಭಾರತ ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ.
