ಕೇಪ್ ಟೌನ್ ಟೆಸ್ಟ್ ನಲ್ಲಿ 70 ರನ್ ಮನ್ನಡೆಯಲ್ಲಿದೆ ಭಾರತ ತಂಡ2ನೇ ದಿನದಾಟದಲ್ಲಿ ಉರುಳಿದವು 11 ವಿಕೆಟ್ಪೀಟರ್ಸೆನ್ ಆಕರ್ಷಕ 72 ರನ್ ಹೊರತಾಗಿಯೂ 210 ರನ್ ಗೆ ಆಲೌಟ್ ಆದ ದಕ್ಷಿಣ ಆಫ್ರಿಕಾ

ಕೇಪ್ ಟೌನ್ (ಜ. 12): ಜಸ್ ಪ್ರೀತ್ ಬುಮ್ರಾ (Jasprit Bumrah) ಸಾಹಸಿಕ ಬೌಲಿಂಗ್ ಹಾಗೂ ದಿನದ ಕೊನೆಯಲ್ಲಿ ಅನುಭವಿ ಬ್ಯಾಟ್ಸ್ ಮನ್ ಗಳಾದ ನಾಯಕ ವಿರಾಟ್ ಕೊಹ್ಲಿ (Virat Kohli) ಹಾಗೂ ಚೇತೇಶ್ವರ ಪೂಜಾರ (Cheteshwar Pujara)ಅವರ ಎಚ್ಚರಿಕೆಯ ಬ್ಯಾಟಿಂಗ್ ನಿಂದ ಟೀಮ್ ಇಂಡಿಯಾ (Team India) ಆತಿಥೇಯ ದಕ್ಷಿಣ ಆಫ್ರಿಕಾ(South Africa) ವಿರುದ್ಧದ ಕೇಪ್ ಟೌನ್ ಟೆಸ್ಟ್ (Cape Town Test) ಪಂದ್ಯದಲ್ಲಿ ಅಮೂಲ್ಯ 70 ರನ್ ಗಳ ಮುನ್ನಡೆ ಕಂಡಿದೆ. ಮೊದಲ ಇನ್ನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕಾವನ್ನು 210 ರನ್ ಗೆ ಆಲೌಟ್ ಮಾಡುವ ಮೂಲಕ 13 ರನ್ ಗಳ ಮುನ್ನಡೆ ಪಡೆದುಕೊಂಡಿದ್ದ ಭಾರತ ತಂಡ 2ನೇ ಇನ್ನಿಂಗ್ಸ್ ನಲ್ಲಿ 17 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 57 ರನ್ ಗಳನ್ನು ಪೇರಿಸಿ 70 ರನ್ ಮುನ್ನಡೆಯಲ್ಲಿದೆ.

ಮೊದಲ ಇನ್ನಿಂಗ್ಸ್ ನಲ್ಲಿ ಭಾರತದ 223 ರನ್ ಗೆ ಉತ್ತರವಾಗಿ 1 ವಿಕೆಟ್ ಗೆ 17 ರನ್ ಗಳಿಂದ 2ನೇ ದಿನವಾದ ಬುಧವಾರ ಮೊದಲ ಇನ್ನಿಂಗ್ಸ್ ಮುಂದುವರಿಸಿದ ದಕ್ಷಿಣ ಆಫ್ರಿಕಾ ತಂಡ 76.3 ಓವರ್ ಗಳಲ್ಲಿ 210 ರನ್ ಗೆ ಆಲೌಟ್ ಆಯಿತು. ದಕ್ಷಿಣ ಆಫ್ರಿಕಾ ತಂಡದ ಕುಸಿತಕ್ಕೆ ಪ್ರಮುಖವಾಗಿ ಕಾರಣರಾದವರು ಜಸ್ ಪ್ರೀತ್ ಬುಮ್ರಾ ಅಂದಾಜು 24 ಓವರ್ ಗಳ ದಾಳಿ ನಡೆಸಿದ ಬುಮ್ರಾ 42 ರನ್ ಗೆ 5 ವಿಕೆಟ್ ಉರುಳಿಸುವ ಮೂಲಕ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಇವರಿಗೆ ಉತ್ತಮ ಸಾಥ್ ನೀಡಿದ ಉಮೇಶ್ ಯಾದವ್ (Umesh Yadav) 64 ರನ್ ಗೆ 2 ವಿಕೆಟ್ ಉರುಳಿಸಿದರೆ, ಮೊಹಮದ್ ಶಮಿ (Mohammed Shami ) 39 ರನ್ ಗೆ 2 ವಿಕೆಟ್ ಉರುಳಿಸಿ ದಕ್ಷಿಣ ಆಫ್ರಿಕಾಕ್ಕೆ ತಿರುಗೇಟು ನೀಡಿದರು. 

ದಕ್ಷಿಣ ಆಫ್ರಿಕಾ ಪರವಾಗಿ ಅದ್ಭುತ ಹೋರಾಟ ತೋರಿದ ಕೀಗನ್ ಪೀಟರ್ಸೆನ್(Keegan Petersen) 166 ಎಸೆತಗಳಲ್ಲಿ 9 ವಿಕೆಟ್ ಗೆ 72 ರನ್ ಬಾರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸುವಲ್ಲು ಶ್ರಮಿಸಿದರು. ಕೇಪ್ ಟೌನ್ ಟೆಸ್ಟ್ ನಲ್ಲಿ ಎರಡೂ ತಂಡಕ್ಕೂ ಗೆಲುವಿನ ಅವಕಾಶ ಸಮಾನವಾಗಿದ್ದು, 3ನೇ ದಿನದಾಟದಲ್ಲಿ ಯಾವ ತಂಡ ಮೇಲುಗೈ ಸಾಧಿಸುತ್ತದೆ ಎನ್ನುವ ಆಧಾರದಲ್ಲಿ ಪಂದ್ಯ ಯಾರೆಡೆಗೆ ವಾಲಲಿದೆ ಎನ್ನುವುದು ನಿರ್ಧಾರವಾಗಲಿದೆ. ಅಮೂಲ್ಯ 13 ರನ್ ಗಳ ಮುನ್ನಡೆ ಪಡೆದ ಬಳಿಕ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ 25 ರನ್ ಗಳಿಸುವ ವೇಳೆಗಾಗಲೇ ಕೆಎಲ್ ರಾಹುಲ್ (10) ಹಾಗೂ ಮಯಾಂಕ್ ಅಗರ್ವಾಲ್ ವಿಕೆಟ್ (7) ವಿಕೆಟ್ ಕಳೆದುಕೊಂಡಿತ್ತು. ಕೆಎಲ್ ರಾಹುಲ್ (KL Rahul)ವಿಕೆಟ್ ಅನ್ನು ಮಾರ್ಕೋ ಜಾನ್ಸೆನ್ ಉರುಳಿಸಿದರೆ, ಮಯಾಂಕ್ ಅಗರ್ವಾಲ್ (Mayank Agarwal)ರಬಾಡಗೆ ವಿಕೆಟ್ ನೀಡಿದರು. ಮೊದಲ ಇನ್ನಿಂಗ್ಸ್ ನಲ್ಲೂ ಆರಂಭಿಕ ಬ್ಯಾಟ್ಸ್ ಮನ್ ಗಳಿಂದ ದೊಡ್ಡ ಇನ್ಜಿಂಗ್ಸ್ ದಾಖಲಾಗಿರಲಿಲ್ಲ. ಬಳಿಕ ಜೊತೆಯಾಗಿರುವ ಚೇತೇಶ್ವರ ಪೂಜಾರ (9*) ಹಾಗೂ ವಿರಾಟ್ ಕೊಹ್ಲಿ (14*) 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Scroll to load tweet…


ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮುಂದುವರಿಸಿದ ದಕ್ಷಿಣ ಅಫ್ರಿಕಾ ತಂಡಕ್ಕೆ ದಿನದ 2ನೇ ಎಸೆತದಲ್ಲಿಯೇ ಬುಮ್ರಾ ಆಘಾತ ನೀಡಿದರು. ಏಡೆನ್ ಮಾರ್ಕ್ರಮ್ (8) ಬುಮ್ರಾಗೆ ಬೌಲ್ಡ್ ಆಗಿ ಹೊರನಡೆದರು. ಬಳಿಕ ಕೀಗನ್ ಪೀಟರ್ಸೆನ್ ಜೊತೆ 3ನೇ ವಿಕೆಟ್ ಗೆ ಅಮೂಲ್ಯ ರನ್ ಗಳನ್ನು ಕೂಡಿಸಿದ ಕೇಶವ್ ಮಹಾರಾಜ್ (25) ವಿಕೆಟ್ ಅನ್ನು ಉಮೇಶ್ ಯಾದವ್ ಪಡೆದುಕೊಂಡರು.
45 ರನ್ ಗೆ 3 ವಿಕೆಟ್ ಕಳೆದುಕೊಂಡಿದ್ದ ಹಂತದಲ್ಲಿ ಜೊತೆಯಾದ ಕೀಗನ್ ಪೀಟರ್ಸೆನ್ 4ನೇ ವಿಕೆಟ್ ಗೆ ಅಮೂಲ್ಯ 67 ರನ್ ಜೊತೆಯಾಟವಾಡಿದರು. 54 ಎಸೆತಗಳಲ್ಲಿ 21 ರನ್ ಬಾರಿಸಿದ್ದ ಡುಸೆನ್ ವಿಕೆಟ್ ಅನ್ನು ಉರುಳಿಸಿದ ಉಮೇಶದ ಯಾದವ್ ಭಾರತ ತಂಡಕ್ಕೆ ಬಿಗ್ ಬ್ರೇಕ್ ನೀಡಿದರು. ಆದರೆ, ಟೆಂಬಾ ಬವುಮಾ (28) ಹಾಗೂ ಕೀಗನ್ ಪೀಟರ್ಸೆನ್ 5ನೇ ವಿಕೆಟ್ ಗೆ 47 ರನ್ ಜೊತೆಯಾಟವಾಡುವ ಮೂಲಕ ಇನ್ನಿಂಗ್ಸ್ ಗೆ ಚೇತರಿಕೆ ನೀಡುವ ಪ್ರಯತ್ನ ಮಾಡಿದ್ದರು. ಇಲ್ಲಿಯವರೆಗೂ ದಕ್ಷಿಣ ಆಫ್ರಿಕಾ ತಂಡಕ್ಕೆ ಮುನ್ನಡೆ ಪಡೆದುಕೊಳ್ಳುವ ಭರವಸೆಯೂ ಇತ್ತು.

SA vs India 3rd Test: ವಿರಾಟ್ ಕೊಹ್ಲಿ ಹೋರಾಟದ ನಡುವೆಯೂ ಕುಸಿದ ಭಾರತ!
ಬವುಮಾ ವಿಕೆಟ್ ಉರುಳಿಸುವ ಮೂಲಕ ಶಮಿ ಮತ್ತೊಂದು ಬ್ರೇಕ್ ನೀಡಿದರೆ, ಅದೇ ಓವರ್ ನಲ್ಲಿ ಕೈಲ್ ವೆರ್ರೆನ್ನೆ ವಿಕೆಟ್ ಉರುಳಿಸುವ ಮೂಲಕ ಮೊಹಮದ್ ಶಮಿ ಭಾರತದ ಮೇಲುಗೈಗೆ ಕಾರಣರಾದರು. ಕೊನೆಯಲ್ಲಿ ಮಾರ್ಕೋ ಜಾನ್ಸೆನ್ ಹಾಗೂ ಲುಂಜಿ ಎನ್ ಗಿಡಿ ವಿಕೆಟ್ ಉರುಳಿಸುವ ಮೂಲಕ ಬುಮ್ರಾ ಐದು ವಿಕೆಟ್ ಪೂರ್ತಿ ಮಾಡಿದರೆ, 25 ಎಸೆತಗಳಲ್ಲಿ 15 ರನ್ ಬಾರಿಸಿದ ಕಗೀಸೋ ರಬಾಡ ವಿಕೆಟ್ ಅನ್ನು ಶಾರ್ದೂಲ್ ಠಾಕೂರ್ ಪಡೆದರು.

ಭಾರತ: 223 ಮತ್ತು 2 ವಿಕೆಟ್ ಗೆ 57 (ವಿರಾಟ್ ಕೊಹ್ಲಿ 14*, ಮಾರ್ಕೋ ಜಾನ್ಸೆನ್ 7ಕ್ಕೆ 1), ದಕ್ಷಿಣ ಆಫ್ರಿಕಾ: 210 (ಕೀಗನ್ ಪೀಟರ್ಸೆನ್ 72, ಟೆಂಬಾ ಬವುಮಾ 28, ಜಸ್ ಪ್ರೀತ್ ಬುಮ್ರಾ 64ಕ್ಕೆ 5, ಮೊಹಮದ್ ಶಮಿ 39ಕ್ಕೆ 2).