ಚಾಂಪಿಯನ್ಸ್‌ ಟ್ರೋಫಿಗೆ ಪೆಟ್ಟುಗಳ ಸರಮಾಲೆ ಎದುರಾಗಿರುವ ಆಸ್ಟ್ರೇಲಿಯಾಗೆ ಮಾರ್ಷ್, ಸ್ಟೋಯ್ನಿಸ್ ಗಾಯ ಮತ್ತು ನಿವೃತ್ತಿಯಿಂದ ಹೊರಬಿದ್ದಿದ್ದರು. ಇದೀಗ ನಾಯಕ ಕಮಿನ್ಸ್ ಮತ್ತು ಹೇಜಲ್‌ವುಡ್ ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಸ್ಮಿತ್ ಅಥವಾ ಹೆಡ್ ನಾಯಕತ್ವ ವಹಿಸುವ ಸಾಧ್ಯತೆ ಇದೆ. ಫೆಬ್ರವರಿ 22ರಿಂದ ಆಸ್ಟ್ರೇಲಿಯಾ ತನ್ನ ಅಭಿಯಾನ ಆರಂಭಿಸಲಿದೆ.

ಮೆಲ್ಬರ್ನ್: ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮುಂಬರುವ ಫೆಬ್ರವರಿ 19ರಿಂದ ಆರಂಭವಾಗಲಿದೆ. ಚಾಂಪಿಯನ್ಸ್ ಟ್ರೋಫಿ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿರುವ ಆಸ್ಟ್ರೇಲಿಯಾ ತಂಡಕ್ಕೆ ಇದೀಗ ಟೂರ್ನಿಗೂ ಮುನ್ನ ಬಿಗ್ ಶಾಕ್ ಎದುರಾಗಿದೆ. ಆರಂಭದಲ್ಲೇ ಗಾಯದ ಸಮಸ್ಯೆಯಿಂದ ಆಲ್ರೌಂಡರ್ ಮಿಚೆಲ್ ಮಾರ್ಷ್ ಹೊರಬಿದ್ದಿದ್ದರು. ಇನ್ನು ಮತ್ತೋರ್ವ ಆಲ್ರೌಂಡರ್ ಮಾರ್ಕಸ್ ಸ್ಟೋನಿಸ್ ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

ಈ ಶಾಕ್‌ನಿಂದ ಹೊರಬರುವ ಮುನ್ನವೇ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದ್ದು ತಂಡದ ನಾಯಕ ಪ್ಯಾಟ್ ಕಮಿನ್ಸ್ ಹಾಗೂ ಮಾರಕ ವೇಗಿ ಜೋಶ್ ಹೇಜಲ್‌ವುಡ್ ಕೂಡಾ ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ವೇಳೆಯಲ್ಲಿಯೇ ಪಾದದ ಗಾಯಕ್ಕೆ ಒಳಗಾಗಿದ್ದ ಪ್ಯಾಟ್ ಕಮಿನ್ಸ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದರು. ಇನ್ನು ಅನುಭವಿ ವೇಗಿ ಜೋಶ್ ಹೇಜಲ್‌ವುಡ್ ಕೂಡಾ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ಸಂಪೂರ್ಣ ಫಿಟ್ ಆಗಿಲ್ಲ. ಈ ಕಾರಣಕ್ಕಾಗಿಯೇ ಇದೀಗ ಈ ಇಬ್ಬರು ಆಟಗಾರರು ಅಧಿಕೃತವಾಗಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.

ರವೀಂದ್ರ ಜಡೇಜಾರನ್ನು ನೀವು ಯಾಕೆ ಹೊಗಳಲ್ಲ; ಕಿಡಿಕಾರಿದ ರವಿಚಂದ್ರನ್ ಅಶ್ವಿನ್

ಅನುಭವಿ ವೇಗಿ ಜೋಶ್ ಹೇಜಲ್‌ವುಡ್‌ ಭಾರತ ಎದುರಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಕೊನೆಯ ಬಾರಿಗೆ ಆಸ್ಟ್ರೇಲಿಯಾ ತಂಡದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದರು. ಸದ್ಯ ಲಂಕಾ ಎದುರಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದಲೂ ಈ ಇಬ್ಬರು ಆಟಗಾರರು ಹೊರಗುಳಿದಿದ್ದರು.

ಇದೀಗ ಸ್ವತಃ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರೇ ಹೊರಬಿದ್ದಿರುವುದರಿಂದಾಗಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಕಾಂಗರೂ ಪಡೆಯನ್ನು ಅನುಭವಿ ಬ್ಯಾಟರ್ ಸ್ಟೀವ್ ಸ್ಮಿತ್ ಇಲ್ಲವೇ ಟ್ರ್ಯಾವಿಸ್ ಹೆಡ್ ನಾಯಕನಾಗಿ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಸದ್ಯ ಸ್ಟೀವ್ ಸ್ಮಿತ್ ಲಂಕಾ ಪ್ರವಾಸದಲ್ಲಿ ಕಮಿನ್ಸ್ ಅನುಪಸ್ಥಿತಿಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

ಬ್ಯಾನ್‌ ಆಗಿದ್ದ ಶ್ರೀಶಾಂತ್ ಕೇರಳದ ಕ್ರಿಕೆಟಿಗರ ರಕ್ಷಣೆ ಮಾಡಬೇಕಾಗಿಲ್ಲ: ಕಿಡಿಕಾರಿದ ಕೇರಳ ಕ್ರಿಕೆಟ್ ಸಂಸ್ಥೆ

ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಫೆಬ್ರವರಿ 19ರಿಂದ ಪಾಕಿಸ್ತಾನದಲ್ಲಿ ಆರಂಭವಾಗಲಿದೆ. ಆದರೆ ಆಸ್ಟ್ರೇಲಿಯಾ ತಂಡವು ಫೆಬ್ರವರಿ 22ರಂದು ತನ್ನ ಬದ್ದ ಎದುರಾಳಿ ಇಂಗ್ಲೆಂಡ್ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಈ ಪಂದ್ಯಕ್ಕೆ ಲಾಹೋರ್‌ನಲ್ಲಿರುವ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಲಿದೆ. ಇನ್ನು ಇದಾದ ಬಳಿಕ ಫೆಬ್ರವರಿ 25ರಂದು ದಕ್ಷಿಣ ಆಫ್ರಿಕಾ ವಿರುದ್ಧ ರಾವಲ್ಪಿಂಡಿಯಲ್ಲಿ ಹಾಗೂ ಫೆಬ್ರವರಿ 28ರಂದು ಆಫ್ಘಾನಿಸ್ತಾನ ಎದುರು ಲಾಹೋರ್‌ನಲ್ಲಿ ಕಾದಾಡಲಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ 21ರಿಂದ ಆರಂಭವಾಗಲಿದೆ. ಜೋಸ್ ಹೇಜಲ್‌ವುಡ್ ಆರ್‌ಸಿಬಿ ಪರ ಹಾಗೂ ಪ್ಯಾಟ್ ಕಮಿನ್ಸ್ ಸನ್‌ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿಯಲಿದ್ದಾರೆ.