ಕರಾಚಿ(ಮೇ.25): ಸೊಂಟ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಮುಲ್ತಾನ್ ಸುಲ್ತಾನ್ಸ್‌ ತಂಡದ ಸ್ಟಾರ್ ಆಲ್ರೌಂಡರ್ ಶಾಹಿದ್‌ ಅಫ್ರಿದಿ ಅಬುಧಾಬಿ ಚರಣದ 6ನೇ ಆವೃತ್ತಿಯ ಪಾಕಿಸ್ತಾನ್ ಸೂಪರ್ ಲೀಗ್(ಪಿಎಸ್‌ಎಲ್‌) ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಪಾಕಿಸ್ತಾನ ತಂಡದ ಮಾಜಿ ನಾಯಕ ಅಫ್ರಿದಿ ಕರಾಚಿಯಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಸೊಂಟ ನೋವು ಕಾಣಿಸಿಕೊಂಡಿದೆ. ಬಳಿಕ ವೈದ್ಯರ ಬಳಿ ಸಮಾಲೋಚಿಸಿದ್ದಾರೆ. ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ ಎಂದು ವರದಿಯಾಗಿದೆ.

6ನೇ ಆವೃತ್ತಿಯ ಪಾಕಿಸ್ತಾನ್ ಸೂಪರ್ ಲೀಗ್‌ನ ಕರಾಚಿ ಚರಣದಲ್ಲಿ ಅಫ್ರಿದಿ ಮುಲ್ತಾನ್ ಸುಲ್ತಾನ್ಸ್ ಪರ 4 ಪಂದ್ಯಗಳನ್ನು ಆಡಿದ್ದರು. ಇದೀಗ ಅಫ್ರಿದಿ ಬದಲಿಗೆ ಎಡಗೈ ಸ್ಪಿನ್ನರ್ ಆಸಿಫ್ ಅಫ್ರಿದಿ ಮುಲ್ತಾನ್ ಸುಲ್ತಾನ್ಸ್ ತಂಡವನ್ನು ಅಬುಧಾಬಿಯಲ್ಲಿ ಕೂಡಿಕೊಳ್ಳಲಿದ್ದಾರೆ.

ಜೂನ್‌ ಮೊದಲ ವಾರದಲ್ಲಿ ಪಿಎಸ್‌ಎಲ್‌ ಆರಂಭಿಸಲು ಪಿಸಿಬಿ ಸಿದ್ದತೆ

6ನೇ ಆವೃತ್ತಿಯ ಪಾಕಿಸ್ತಾನ್ ಸೂಪರ್‌ ಲೀಗ್‌ಗಾಗಿ ಅಭ್ಯಾಸ ನಡೆಸುತ್ತಿರುವಾಗ ನನಗೆ ಸೊಂಟ ನೋವು ಕಾಣಿಸಿಕೊಂಡಿತು. ತಕ್ಷಣವೇ ವೈದ್ಯರನ್ನು ಸಂಪರ್ಕಿಸಿದೆ. ದುರಾದೃಷ್ಟವಶಾತ್ ವೈದ್ಯರು ನನಗೆ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಹೀಗಾಗಿ ಅಬುಧಾಬಿಯಲ್ಲಿ ನಡೆಯಲಿರುವ ಟೂರ್ನಿಯಲ್ಲಿ ನಾನು ಮುಲ್ತಾನ್ ಸುಲ್ತಾನ್ಸ್‌ ತಂಡದ ಪರ ಆಡಲು ಸಾಧ್ಯವಾಗುತ್ತಿಲ್ಲ ಎಂದು ಅಫ್ರಿದಿ ಹೇಳಿದ್ದಾರೆ.

ನಾನು ಟೂರ್ನಿಯಿಂದ ಹೊರಬಿದ್ದಿರುವುದಕ್ಕೆ ಬೇಸರವಾಗುತ್ತಿದೆ. ಆದರೆ ತಂಡಕ್ಕೆ ನನ್ನ ಹಾರೈಕೆ ಹಾಗೂ ಬೆಂಬಲ ಸದಾ ಇರಲಿದ್ದು, ಆಟಗಾರರು ಉತ್ತಮ ಪ್ರದರ್ಶನ ತೋರಿ ಟ್ರೋಫಿ ಗೆಲ್ಲಲಿ ಎಂದು ಅಫ್ರಿದಿ ತಿಳಿಸಿದ್ದಾರೆ ಎಂದು ಪಿಎಸ್‌ಎಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.