* ಪಾಕಿಸ್ತಾನ ವೇಗಿ ಹಸನ್ ಅಲಿ ಬಿಂದಾಸ್ ಸ್ಟೆಪ್* ಗಾಲೆ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಡ್ಯಾನ್ಸ್ ಮಾಡಿ ಗಮನ ಸೆಳೆದ ಹಸನ್ ಅಲಿ* ಬೌಲಿಂಗ್‌ನಲ್ಲೂ ಮಿಂಚಿನ ಪ್ರದರ್ಶನ ತೋರಿದ ಹಸನ್ ಅಲಿ

ಗಾಲೆ(ಜು.17): ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಮೊದಲ ಟೆಸ್ಟ್‌ ಪಂದ್ಯವು ಇದೀಗ ರೋಚಕ ಘಟ್ಟದತ್ತ ಸಾಗುತ್ತಿದೆ. ಇಲ್ಲಿನ ಗಾಲೆ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಸಂದರ್ಭದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ವೇಗಿ ಹಸನ್ ಅಲಿ ಬಿಂದಾಸ್ ಸ್ಟೆಪ್ ಹಾಕುವ ಮೂಲಕ ತಮ್ಮ ಕಾಲ್ಚಳಕ ತೋರಿದ್ದು, ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಪಾಕಿಸ್ತಾನ ಕ್ರಿಕೆಟ್ ತಂಡವು ದ್ವೀಪ ರಾಷ್ಟ್ರದ ನಾಡಿನಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಶ್ರೀಲಂಕಾಗೆ ಬಂದಿಳಿದಿದ್ದು, ಮೊದಲ ಪಂದ್ಯಕ್ಕೆ ಗಾಲೆ ಆತಿಥ್ಯವನ್ನು ವಹಿಸಿದೆ. ಇನ್ನು ಎರಡನೇ ಟೆಸ್ಟ್ ಪಂದ್ಯಕ್ಕೆ ಕೊಲಂಬೊ ಮೈದಾನ ಸಾಕ್ಷಿಯಾಗಲಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಪಾಕ್ ಅನುಭವಿ ವೇಗಿ ಹಸನ್ ಅಲಿ, ತುಂಬಾ ಉತ್ಸಾಹದಿಂದ ಮ್ಯೂಸಿಕ್‌ಗೆ ಕಾಲ್ಚಳಕದ ಜತೆ ಸೊಂಟ ಬಳುಕಿಸುತ್ತಾ ಡ್ಯಾನ್ಸ್ ಮಾಡಿದ್ದಾರೆ. ಮತ್ತೊಂದು ತುದಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಮತ್ತೋರ್ವ ವೇಗಿ ಹ್ಯಾರಿಸ್ ರೌಫ್ ನಗುಮೊಗದಿಂದ ಹಸನ್ ಅಲಿ ಡ್ಯಾನ್ಸ್ ನೋಡಿ ಹುರಿದುಂಬಿಸಿದ್ದಾರೆ. ಇನ್ನು ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ಕ್ರಿಕೆಟ್ ವೀಕ್ಷಕ ವಿವರಣೆಗಾರ ಡ್ಯಾನಿ ಮೋರಿಸನ್ ಕೂಡಾ ಹಸನ್ ಅಲಿಯವರ ಬಿಂದಾಸ್ ಸ್ಟೆಪ್ಸ್‌ ಕುರಿತಂತೆ ತಮ್ಮ ಕಂಚಿನ ಕಂಠದ ಮೂಲಕ ಕಾಮೆಂಟ್ರಿ ಮಾಡಿದ್ದಾರೆ.

Scroll to load tweet…

ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕ್ ವೇಗಿ ಹಸನ್ ಅಲಿ, ಶ್ರೀಲಂಕಾ ಎದುರು ಮೊದಲ ಇನಿಂಗ್ಸ್‌ನಲ್ಲಿ ಕೇವಲ 23 ರನ್‌ ನೀಡಿ 2 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಮತ್ತೊಂದು ತುದಿಯಲ್ಲಿ ಮಾರಕ ದಾಳಿ ನಡೆಸಿದ ಶಾಹೀನ್ ಶಾ ಅಫ್ರಿದಿ ಕೇವಲ 58 ರನ್ ನೀಡಿ ಲಂಕಾದ 4 ವಿಕೆಟ್ ಕಬಳಿಸುವ ಮೂಲಕ ಶ್ರೀಲಂಕಾ ತಂಡವನ್ನು ಕೇವಲ 222 ರನ್‌ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ದಿಟ್ಟ ಬ್ಯಾಟಿಂಗ್ ನಡೆಸಿದ ದಿನೇಶ್ ಚಾಂಡಿಮಲ್‌ ದಿಟ್ಟ 76 ರನ್‌ ಬಾರಿಸುವ ಮೂಲಕ ಶ್ರೀಲಂಕಾ ತಂಡವನ್ನು ಇನ್ನೂರು ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ಗಡಿ ಮೀರಿದ ಕ್ರಿಕೆಟ್‌..! ವಿರಾಟ್ ಬೆಂಬಲಕ್ಕೆ ನಿಂತ ಅಜಂ ಟ್ವೀಟ್‌ಗೆ ನೆಟ್ಟಿಗರು ಫಿದಾ..!

ಇನ್ನು ಮೊದಲ ದಿನದಾಟದಂತ್ಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 24 ರನ್ ಬಾರಿಸಿದ್ದ ಪಾಕಿಸ್ತಾನ ತಂಡವು ಎರಡನೇ ದಿನದಾಟದಲ್ಲಿ ಪ್ರಬಾತ್ ಜಯಸೂರ್ಯ ಮಾರಕ ದಾಳಿಗೆ ತತ್ತರಿಸಿ ಹೋಗಿದೆ. ಒಂದು ಹಂತದಲ್ಲಿ ಪಾಕಿಸ್ತಾನ ತಂಡವು 85 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು. ಈ ವೇಳೆ ಮತ್ತೊಮ್ಮೆ ನಾಯಕನ ಆಟವಾಡಿದ ಪಾಕಿಸ್ತಾನದ ಬಾಬರ್ ಅಜಂ ಕೆಚ್ಚೆದೆಯ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಅಸರೆಯಾಗಿದ್ದಾರೆ. ಎರಡನೇ ದಿನದಾಟದ ಚಹಾ ವಿರಾಮದ ವೇಳೆಗೆ ಪಾಕಿಸ್ತಾನ ತಂಡವು 9 ವಿಕೆಟ್ ಕಳೆದುಕೊಂಡು 194 ರನ್ ಬಾರಿಸಿದೆ. ನಾಯಕ ಬಾಬರ್ ಅಜಂ ಅಜೇಯ 95 ರನ್‌ ಬಾರಿಸಿದ್ದರೇ, ನಸೀಮ್ ಶಾ 5 ರನ್‌ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಸದ್ಯ ಪಾಕಿಸ್ತಾನ ತಂಡವು ಕೇವಲ 28 ರನ್‌ಗಳ ಮೊದಲ ಇನಿಂಗ್ಸ್‌ ಹಿನ್ನಡೆಯಲ್ಲಿದೆ.