* ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಕ್ರೀಡಾಸ್ಪೂರ್ತಿ ಮರೆತ ವೇಗಿ ಹ್ಯಾರಿಸ್ ರೌಫ್* ಕ್ಯಾಚ್ ಕೈಬಿಟ್ಟ ಸಹ ಆಟಗಾರರ ಕಪಾಳಕ್ಕೆ ಬಾರಿಸಿದ ಪಾಕ್ ವೇಗಿ* ಹ್ಯಾರಿಸ್ ರೌಫ್ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ

ಕರಾಚಿ(ಫೆ.22): ಪಾಕಿಸ್ತಾನ ಕ್ರಿಕೆಟ್ ತಂಡದ (Pakistan Cricket Team) ವೇಗದ ಬೌಲರ್ ಹ್ಯಾರಿಸ್ ರೌಫ್ (Haris Rauf) ಸಹ ಆಟಗಾರನಿಗೆ ಕಪಾಳ ಮೋಕ್ಷ ಮಾಡಿದ ಘಟನೆ ಪಾಕಿಸ್ತಾನ ಸೂಪರ್ ಲೀಗ್ (Pakistan Super League) ಟೂರ್ನಿಯ ವೇಳೆ ನಡೆದಿದೆ. ಸೋಮವಾರ(ಫೆ.22) ನಡೆದ ಪಂದ್ಯದಲ್ಲಿ ಲಾಹೋರ್ ಖಲಂದರ್ಸ್ (Lahore Qalandars) ತಂಡದ ವೇಗಿ ಹ್ಯಾರಿಸ್ ರೌಫ್, ಸಹ ಆಟಗಾರ ಕಮ್ರಾನ್ ಗುಲಾಮ್ ಕ್ಯಾಚ್ ಬಿಟ್ಟ ತಪ್ಪಿಗೆ ಕಪಾಳಕ್ಕೆ ಬಾರಿಸಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಪೇಶಾವರ್ ಝಲ್ಮಿ (Peshawar Zalmi) ಹಾಗೂ ಲಾಹೋರ್ ಖಲಂದರ್ಸ್‌ ನಡುವಿನ ಪಂದ್ಯದ ವೇಳೆ ಪೇಶಾವರ್ ಝಲ್ಮಿ ತಂಡದ ಬ್ಯಾಟರ್ ಹಜರತ್ತುಲ್ಲಾ ಝಝೈ ನೀಡಿದ ಸುಲಭ ಕ್ಯಾಚನ್ನು ಕಮ್ರಾನ್ ಗುಲಾಮ್ ಕೈಚೆಲ್ಲಿದರು. ಇದಾಗಿ ಮೂರು ಎಸೆತಗಳ ಬಳಿಕ ಹ್ಯಾರಿಸ್ ರೌಫ್‌, ಮತ್ತೋರ್ವ ಬ್ಯಾಟರ್ ಮೊಹಮ್ಮದ್ ಹ್ಯಾರಿಸ್ ಅವರ ವಿಕೆಟ್ ಕಬಳಸಿಸುವಲ್ಲಿ ಯಶಸ್ವಿಯಾದರು. ಆಗ ಸಹ ಆಟಗಾರರು ಹ್ಯಾರಿಸ್ ರೌಫ್ ಅವರನ್ನು ಅಭಿನಂದಿಸಲು ಬಂದಾಗ, ಕ್ಯಾಚ್ ಚೆಲ್ಲಿದ ಕಮ್ರಾನ್ ಗುಲಾಮ್ ಅವರಿಗೆ ಬಾರಿಸಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Scroll to load tweet…

ಇನ್ನು ಪೇಶಾವರ್ ಝಲ್ಮಿಯ ಇನಿಂಗ್ಸ್‌ ಕೊನೆಯಲ್ಲಿ ವಹಾಬ್ ರಿಯಾಜ್ ಅವರನ್ನು ರನೌಟ್ ಮಾಡುವಲ್ಲಿ ಕಮ್ರಾನ್ ಗುಲಾಮ್‌ ಯಶಸ್ವಿಯಾಗುತ್ತಾರೆ. ಆಗ ವೇಗಿ ಹ್ಯಾರಿಸ್ ರೌಫ್‌, ಗುಲಾಮ್ ಅವರನ್ನು ಅಪ್ಪಿಕೊಂಡು ಅಭಿನಂದನೆ ಸಲ್ಲಿಸುತ್ತಾರೆ. 

Scroll to load tweet…
Scroll to load tweet…

ಹಲವು ಕ್ರಿಕೆಟ್‌ ಅಭಿಮಾನಿಗಳು ಹ್ಯಾರಿಸ್ ರೌಫ್ ಅವರ ಈ ದುಡುಕಿನ ನಡೆಯನ್ನು ಕಠಿಣ ಶಬ್ದಗಳಿಂದ ಖಂಡಿಸಿದ್ದಾರೆ. ಆಯಿಷಿ ಎನ್ನುವವರಂತೂ, ಹ್ಯಾರಿಸ್ ರೌಫ್ ನೀವು ಈಗ ಗಲ್ಲಿ ಕ್ರಿಕೆಟ್ ಆಡುತ್ತಿಲ್ಲ. ಸಹ ಆಟಗಾರರ ಜತೆ ನೀವು ವರ್ತಿಸಿದ ರೀತಿ ಸರಿಯಿಲ್ಲ. ಒಂದು ವೇಳೆ ತಮಾಷೆಗೂ ನೀವು ಹೀಗೆ ಮಾಡಬಾರದು. ಕಮ್ರಾನ್ ಗುಲಾಮ್ ಕೂಡಾ ಸೂಪರ್ ಸ್ಟಾರ್. ಆತನಿಗೂ ಒಂದು ಸ್ವಂತ ಸ್ಥಾನಮಾನವಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಹ್ಯಾರಿಸ್ ರೌಫ್‌ಗೆ ದಂಡ ವಿಧಿಸಬೇಕು ಎಂದು ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.

Scroll to load tweet…
Scroll to load tweet…

ಮೊದಲು ಬ್ಯಾಟ್‌ ಮಾಡಿದ ಪೇಶಾವರ್ ಝಲ್ಮಿ ತಂಡವು, ಶೋಯೆಬ್ ಮಲಿಕ್, ಝಝೈ ಹಾಗೂ ಹೈದರ್ ಅಲಿ ಬಾರಿಸಿದ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 158 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಲಾಹೋರ್ ಖಲಂದರ್ಸ್ ತಂಡವು ಇನಿಂಗ್ಸ್‌ನ ಮೊದಲ ಎಸೆತದಲ್ಲೇ ತಾರಾ ಬ್ಯಾಟರ್‌ ಫಖರ್ ಜಮಾನ್ ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಕಮ್ರಾನ್ ಗುಲಾಮ್ ಹಾಗೂ ಫಿಲ್ ಸಾಲ್ಟ್ ತಂಡಕ್ಕೆ ಕೆಲಕಾಲ ಆಸರೆಯಾದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಅನುಭವಿ ಬ್ಯಾಟರ್‌ ಮೊಹಮ್ಮದ್ ಹಫೀಜ್ 44 ಎಸೆತಗಳಲ್ಲಿ 49 ರನ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ಸಮೀಪ ಕೊಂಡ್ಯೊಯ್ದರು.

Pak vs Aus: ಪಾಕ್ ಎದುರಿನ ಸೀಮಿತ ಓವರ್‌ಗಳ ಸರಣಿಗೆ ಸ್ಟಾರ್ ಆಟಗಾರರಿಗೆ ರೆಸ್ಟ್‌..!

ಆದರೆ ಇದಾದ ಬಳಿಕ ಲಾಹೋರ್ ಖಲಂದರ್ಸ್ ತಂಡವು ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಪರಿಣಾಮ ಕೊನೆಯ ಓವರ್‌ನಲ್ಲಿ ಖಲಂದರ್ಸ್ ತಂಡವು ಗೆಲ್ಲಲು 24 ರನ್‌ಗಳ ಅಗತ್ಯವಿತ್ತು. ಕೊನೆಯಲ್ಲಿ ಶಾಹೀನ್ ಶಾ ಅಫ್ರಿದಿ ಕೇವಲ 20 ಎಸೆತಗಳಲ್ಲಿ ಸ್ಪೋಟಕ 39 ರನ್ ಬಾರಿಸುವ್ ಮೂಲಕ ಪಂದ್ಯ ಟೈ ಆಗುವಂತೆ ಮಾಡಿದರು. ಇದಾದ ಬಳಿಕ ಫಲಿತಾಂಶಕ್ಕಾಗಿ ಸೂಪರ್ ಓವರ್‌ ಮೊರೆ ಹೋಗಲಾಯಿತು. ಸೂಪರ್ ಓವರ್‌ನಲ್ಲಿ ಲಾಹೋರ್ ಖಲಂದರ್ಸ್ ತಂಡವು ಕೇವಲ 5 ರನ್‌ ಗಳಿಸಲಷ್ಟೇ ಶಕ್ತವಾಯಿತು. ಪೇಶಾವರ್ ತಂಡವು ಕೇವಲ 2 ಎಸೆತಗಳಲ್ಲಿ ಗುರಿ ತಲುಪುವ ಮೂಲಕ ಗೆಲುವಿನ ಕೇಕೆ ಹಾಕಿತು.