ಆಸ್ಟ್ರೇಲಿಯಾದಲ್ಲಿ ಆಡುತ್ತಿದ್ದ ಪಾಕಿಸ್ತಾನದ ಕ್ರಿಕೆಟಿಗ ಜುನೈಲ್ ಝಫರ್ ಖಾನ್ (40) ವಿಪರೀತ ಬಿಸಿಲಿನಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಅಡಿಲೇಡ್‌ನಲ್ಲಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು. ಮತ್ತೊಂದೆಡೆ, ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ 5 ವಿಕೆಟ್‌ಗಳಿಂದ ಸೋತಿದೆ. ನ್ಯೂಜಿಲೆಂಡ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಮಳೆಯಿಂದಾಗಿ ಪಂದ್ಯವನ್ನು 15 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು.

ಆಡಿಲೇಡ್: ಪಾಕಿಸ್ತಾನ ಮೂಲದ 40 ವರ್ಷದ ಕ್ರಿಕೆಟಿಗ ಜುನೈಲ್ ಝಫರ್‌ ಖಾನ್ ಅವರು ಆಸ್ಟ್ರೇಲಿಯಾದಲ್ಲಿ ಸ್ಥಳೀಯ ಕ್ಲಬ್‌ ಪರ ಆಡುತ್ತಿದ್ದ ಸಂದರ್ಭ ವಿಪರೀತ ಬಿಸಿಲಿನಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. 

ಅಡಿಲೇಡ್‌ನಲ್ಲಿ ಕಾನ್ಕಾರ್ಡಿಯಾ ಕಾಲೇಜು ಮೈದಾನದಲ್ಲಿ ಕ್ರಿಕೆಟ್‌ ಪಂದ್ಯ ನಡೆಯುತ್ತಿತ್ತು. ಈ ಸಂದರ್ಭ ಜುನೈಲ್ 40 ಓವರ್‌ ಪೀಲ್ಡಿಂಗ್ ಮಾಡಿ ಬಳಿಕ 7 ಓವರ್‌ ಬ್ಯಾಟಿಂಗ್ ಮಾಡಿದ್ದಾರೆ. ಈ ವೇಳೆ ಅವರು ಏಕಾಏಕಿ ಕುಸಿದು ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯೋಜನವಾಗಲಿಲ್ಲ.

ಹವಾಮಾನ ಇಲಾಖೆಯ ಪ್ರಕಾರ ದಕ್ಷಿಣ ಆಸ್ಟ್ರೇಲಿಯಾದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಪ್ರಮಾಣದ ಹೀಟ್‌ ವೇವ್‌ ದಾಖಲಾಗುತ್ತಿದ್ದು, ಪಂದ್ಯದ ವೇಳೆ ಮೈದಾನದಲ್ಲಿ 40 ಡಿಗ್ರಿ ಸೆಲ್ಸಿಯಸ್‌ ತಾಪಮಾನವಿತ್ತು. ಇದೇ ಸಂದರ್ಭದಲ್ಲಿ ಅವರು ಕುಸಿದು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: IPLಗೂ ಮುನ್ನ ಫ್ಯಾನ್ಸ್‌ಗೆ ಸರ್ಪ್ರೈಸ್, ಆ್ಯನಿಮಲ್ ಸಿನಿಮಾದ ರಣಬೀರ್ ಲುಕ್‌ನಲ್ಲಿ ಧೋನಿ ವಿಡಿಯೋ

ಟಿ20: ನ್ಯೂಜಿಲೆಂಡ್‌ ವಿರುದ್ಧ ಪಾಕ್‌ಗೆ ಸತತ 2 ಸೋಲು

ಡ್ಯುನೆಡಿನ್‌(ನ್ಯೂಜಿಲೆಂಡ್‌): 2ನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಪಾಕಿಸ್ತಾನ 5 ವಿಕೆಟ್‌ ಸೋಲನುಭವಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯ ಮುನ್ನಡೆಯನ್ನು ಆತಿಥೇಯ ಕಿವೀಸ್‌ 2-0ಗೆ ಹೆಚ್ಚಿಸಿದೆ. ಮೈದಾನ ಒದ್ದೆಯಾಗಿದ್ದ ಕಾರಣ ಪಂದ್ಯ ತಡವಾಗಿ ಆರಂಭಗೊಂಡಿತು. ಹೀಗಾಗಿ ತಲಾ 15 ಓವರ್‌ ಆಟ ಆಡಿಸಲಾಯಿತು. 

ಇದನ್ನೂ ಓದಿ: RCB Unbox Event: ಸಂಜಿತ್ ಹೆಗ್ಡೆಗೆ ಈ ಹಾಡು ಹಾಡದಂತೆ ಫ್ಯಾನ್ಸ್ ತಾಕೀತು!

ಮೊದಲು ಬ್ಯಾಟ್‌ ಮಾಡಿದ ಪಾಕ್‌ 9 ವಿಕೆಟ್‌ಗೆ 135 ರನ್‌ ಕಲೆಹಾಕಿತು. ನಾಯಕ ಅಘಾ ಸಲ್ಮಾನ್‌ 46 ರನ್ ಸಿಡಿಸಿದರು. ಕಿವೀಸ್ ಚೇಸಿಂಗ್‌ ವೇಳೆ ಪಾಕ್‌ ವೇಗಿ ಶಾಹೀನ್‌ ಅಫ್ರಿದಿ ಮೊದಲ ಓವರ್‌ ಮೇಡಿನ್‌ ಮಾಡಿದರು. ಆದರೆ ಮುಂದಿನ 12 ಎಸೆತಗಳಲ್ಲಿ 7 ಸಿಕ್ಸರ್‌ ಸಿಡಿಸಿದ ಟಿಮ್‌ ಸೀಫರ್ಟ್‌ ಹಾಗೂ ಫಿನ್‌ ಆ್ಯಲೆನ್‌, ಕಿವೀಸ್‌ಗೆ 13.1 ಓವರ್‌ಗಳಲ್ಲಿ ಗೆಲುವು ತಂದುಕೊಟ್ಟರು. ಸೀಫರ್ಟ್‌ 22 ಎಸೆತಕ್ಕೆ 45, ಆ್ಯಲೆನ್‌ 16 ಎಸೆತಕ್ಕೆ 38 ರನ್‌ ಸಿಡಿಸಿದರು. ಈ ಜೋಡಿ ಒಟ್ಟು 10 ಸಿಕ್ಸರ್‌ ಸಿಡಿಸಿತು.