ಕರಾಚಿ(ಡಿ.18): ಪಾಕಿಸ್ತಾನ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಮೊಹಮದ್‌ ಆಮೀರ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುರುವಾರ ದಿಢೀರ್‌ ನಿವೃತ್ತಿ ಘೋಷಿಸಿದ್ದಾರೆ.

ನಾನು ಮಾನಸಿಕವಾಗಿ ಸಾಕಷ್ಟು ಕಿರುಕುಳಕ್ಕೆ ಒಳಗಾಗಿದ್ದೇನೆ. ಹೀಗಾಗಿ ನಾನು ಕ್ರಿಕೆಟ್‌ಗೆ ಗುಡ್‌ಬೈ ಹೇಳುತ್ತಿದ್ದೇನೆ. ನಾನು ಇಂತಹ ಕಿರುಕುಳವನ್ನು ಎದುರಿಸುವಷ್ಟು ಸಮರ್ಥನಾಗಿದ್ದೇನೆ ಎಂದು ನನಗನಿಸುತ್ತಿಲ್ಲ. ಅದರಲ್ಲೂ 2010 ರಿಂದ 2015ರ ಅವಧಿಯಲ್ಲಿ ಸಾಕಷ್ಟು ನೊಂದಿದ್ಧೇನೆ.ಸಂಕಷ್ಟದ ಸಮಯದಲ್ಲಿ ಪಿಸಿಬಿ ಮಾಜಿ ಆಯ್ಕೆಸಮಿತಿ ಅಧ್ಯಕ್ಷ ನಜಂ ಸೇಥಿ ಹಾಗೂ ಶಾಹಿದ್ ಅಫ್ರಿದಿ ಈ ಇಬ್ಬರು ಮಾತ್ರ ನನ್ನ ಬೆಂಬಲಕ್ಕೆ ನಿಂತಿದ್ದರು ಎಂದು ಆಮೀರ್ ಹೇಳಿದ್ದಾರೆ.

ಕಳೆದ ವರ್ಷ ಅತಿಯಾದ ಕ್ರಿಕೆಟ್‌ನ ಕಾರಣ ನೀಡಿ ಟೆಸ್ಟ್‌ ಮಾದರಿಗೆ ವಿದಾಯ ಹೇಳಿದ್ದ ಆಮೀರ್‌ ಟೀಕೆಗೆ ಗುರಿಯಾಗಿದ್ದರು. ನ್ಯೂಜಿಲೆಂಡ್‌ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಿಂದ ಆಮೀರ್‌ರನ್ನು ಕೈಬಿಡಲಾಗಿತ್ತು. ಕೇವಲ 28ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮೂಲಕ ಆಮೀರ್‌ ಅಚ್ಚರಿ ಮೂಡಿಸಿದ್ದಾರೆ. 

ಟೆಸ್ಟ್‌ ಕ್ರಿಕೆಟ್‌ಗೆ ಪಾಕಿಸ್ತಾನ ವೇಗಿ ಮೊಹಮ್ಮದ್ ಅಮೀರ್ ವಿದಾಯ!

2009ರಲ್ಲಿ ಇಂಗ್ಲೆಂಡ್‌ ವಿರುದ್ಧ ಟಿ20ಗೆ ಪಾದಾರ್ಪಣೆ ಮಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ ಜೀವನ ಆರಂಭಿಸಿದ್ದರು. 2010ರಲ್ಲಿ ಇಂಗ್ಲೆಂಡ್‌ ಪ್ರವಾಸದ ವೇಳೆ ಆಮೀರ್‌ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಸಿಕ್ಕಿಬಿದ್ದು 5 ವರ್ಷಗಳ ಕಾಲ ನಿಷೇಧಕ್ಕೆ ಗುರಿಯಾಗಿದ್ದರು. ಇನ್ನು 2017ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಪಾಕಿಸ್ತಾನ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಆಮೀರ್ ಪ್ರಮುಖ ಪಾತ್ರವಹಿಸಿದ್ದರು.

ಆಮೀರ್‌ ಅಂ.ರಾ. ಕ್ರಿಕೆಟ್‌ ಅಂಕಿ-ಅಂಶ

ಮಾದರಿ ಪಂದ್ಯ ಬೆಸ್ಟ್‌ ವಿಕೆಟ್‌

ಟೆಸ್ಟ್‌ : 36 6/44 119

ಏಕದಿನ: 61 5/30 81

ಟಿ20: 50 4/13 59