* ಪಾಕಿಸ್ತಾನ ಸ್ಟಾರ್ ಆಲ್ರೌಂಡರ್ ಮೊಹಮ್ಮದ್ ಹಫೀಜ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ* 18 ವರ್ಷಗಳ ಸುದೀರ್ಘ ಕ್ರಿಕೆಟ್ ಬದುಕಿಗೆ ತೆರೆ ಎಳೆದ ಪಾಕ್ ಕ್ರಿಕೆಟಿಗ* ಟಿ20 ಫ್ರಾಂಚೈಸಿ ಲೀಗ್‌ನಲ್ಲಿ ಮುಂದುವರೆಯಲಿರುವ ಮೊಹಮ್ಮದ್ ಹಫೀಜ್
ಇಸ್ಲಾಮಾಬಾದ್(ಜ.03): ಪಾಕಿಸ್ತಾನ ಕ್ರಿಕೆಟ್ ತಂಡದ ಅನುಭವಿ ಆಲ್ರೌಂಡರ್ ಮೊಹಮ್ಮದ್ ಹಫೀಜ್ (Mohammad Hafeez) ಇಂದು(ಡಿ.03) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಇದರೊಂದಿಗೆ 18 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕಿಗೆ ಹಫೀಜ್ ತೆರೆ ಎಳೆದಿದ್ದಾರೆ. ಮೊಹಮ್ಮದ್ ಹಫೀಜ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರೂ ಸಹಾ, ಟಿ20 ಫ್ರಾಂಚೈಸಿ ಲೀಗ್‌ಗಳಲ್ಲಿ ಪಾಲ್ಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.
ಮೊಹಮ್ಮದ್ ಹಫೀಜ್ 2003ರಲ್ಲಿ ಜಿಂಬಾಬ್ವೆ ವಿರುದ್ದ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದಾಗಿ ದಶಕಗಳ ಕಾಲ ಪಾಕಿಸ್ತಾನ ಕ್ರಿಕೆಟ್ ತಂಡದ (Pakistan Cricket Team) ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದ ಹಫೀಜ್, ಇತ್ತೀಚೆಗಷ್ಟೇ ತೆರೆಕಂಡ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ (ICC T20 World Cup) ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದ ಕಣಕ್ಕಿಳಿಯುವ ಮೂಲಕ ಪಾಕಿಸ್ತಾನ ಜೆರ್ಸಿಯಲ್ಲಿ ಕಡೆಯ ಬಾರಿಗೆ ಕಾಣಿಸಿಕೊಂಡಿದ್ದರು. ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡವು ಆಸ್ಟ್ರೇಲಿಯಾಗೆ ಶರಣಾಗಿತ್ತು. 2020ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಲು ತೀರ್ಮಾನಿಸಿದ್ದರು. ಆದರೆ ಕೋವಿಡ್ (COVID 19) ಕಾರಣದಿಂದಾಗಿ ಟೂರ್ನಿಯು ಒಂದು ವರ್ಷ ಮುಂದೂಡಲ್ಪಟ್ಟಿದ್ದರಿಂದ ಹಫೀಜ್ 2021ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಪರ ಕಣಕ್ಕಿಳಿದಿದ್ದರು.
ಈ ಮೊದಲು ಮೊಹಮ್ಮದ್ ಹಫೀಜ್ 2018ರ ಡಿಸೆಂಬರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇದಾದ ಬಳಿಕ ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಲಾರ್ಡ್ಸ್ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ದ ತಮ್ಮ ಕಟ್ಟಕಡೆಯ ಏಕದಿನ ಪಂದ್ಯವನ್ನಾಡಿದ್ದರು. ಇದೀಗ 41 ವರ್ಷದ ಆಲ್ರೌಂಡರ್, ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್‌ಗೂ ನಿವೃತ್ತಿ ಘೋಷಿಸಿದ್ದಾರೆ.
ಬರೋಬ್ಬರಿ 18 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಜೀವನದಲ್ಲಿ ಮೊಹಮ್ಮದ್ ಹಫೀಜ್ ಒಟ್ಟು 218 ಏಕದಿನ, 55 ಟೆಸ್ಟ್ ಹಾಗೂ 119 ಟಿ20 ಪಂದ್ಯಗಳನ್ನಾಡಿದ್ದಾರೆ. 2009ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಪಾಕ್ ತಂಡದ ಗೆಲುವಿನಲ್ಲಿ ಹಫೀಜ್ ತನ್ನದೇ ಆದ ಕೊಡುಗೆ ನೀಡಿದ್ದರು. ಮೂರು ಮಾದರಿಯ ಕ್ರಿಕೆಟ್‌ನಿಂದ ಪಾಕಿಸ್ತಾನ ಪರ ಮೊಹಮ್ಮದ್ ಹಫೀಜ್ ಒಟ್ಟು 12,780 ರನ್ ಬಾರಿಸಿದ್ದಾರೆ.
Quinton de Kock Retires: ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಹೇಳಿದ ಡಿ ಕಾಕ್!
ಪಾಕಿಸ್ತಾನ ಕ್ರಿಕೆಟ್ ತಂಡದ ಪರ ಒಟ್ಟು 9 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಮೊಹಮ್ಮದ್ ಹಫೀಜ್ ಭಾಜನರಾಗಿದ್ದಾರೆ. ಹಫೀಜ್ ಬ್ಯಾಟಿಂಗ್‌ನಲ್ಲಷ್ಟೇ ಅಲ್ಲದೇ ಬೌಲಿಂಗ್‌ನಲ್ಲೂ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 139 ವಿಕೆಟ್ ಪಡೆದಿರುವ ಹಫೀಜ್, ಟೆಸ್ಟ್ ಕ್ರಿಕೆಟ್‌ನಲ್ಲಿ 53 ಹಾಗೂ ಟಿ20 ಕ್ರಿಕೆಟ್‌ನಲ್ಲಿ 61 ವಿಕೆಟ್ ಪಡೆದಿದ್ದಾರೆ. ಪಾಕಿಸ್ತಾನ ತಂಡದ ಪರ ಅತಿಹೆಚ್ಚು ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಆಟಗಾರ ಎನ್ನುವ ಕೀರ್ತಿಗೆ ಮೊಹಮ್ಮದ್ ಹಫೀಜ್ ಪಾತ್ರರಾಗಿದ್ದಾರೆ. ಮುಂಬರುವ ಪಾಕಿಸ್ತಾನ ಸೂಪರ್ ಲೀಗ್ (Pakistan Super League) ಟೂರ್ನಿಯಲ್ಲಿ ಲಾಹೋರ್ ಖಲಂದರ್ ಪರ ಕಣಕ್ಕಿಳಿಯಲು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಮೊಹಮ್ಮದ್ ಹಫೀಜ್ ನಾಯಕನಾಗಿಯೂ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದಾರೆ. ಹಫೀಜ್ ನಾಯಕತ್ವದಲ್ಲಿ 2012ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವು ಸೆಮಿಫೈನಲ್ ಪ್ರವೇಶಿಸಿತ್ತು. ಮೊಹಮ್ಮದ್ ಹಫೀಜ್ ನಾಯಕತ್ವದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು 28 ಪಂದ್ಯಗಳನ್ನಾಡಿ 18 ಗೆಲುವು ಹಾಗೂ 11 ಸೋಲು ಕಂಡಿತ್ತು.
