ನೇಪಿಯರ್(ಡಿ.23)‌: ನೂತನ ಟೆಸ್ಟ್‌ ನಾಯಕ ಮೊಹಮದ್‌ ರಿಜ್ವಾನ್‌(89)ರ ಆಕರ್ಷಕ ಬ್ಯಾಟಿಂಗ್‌ ನೆರವಿನಿಂದ ನ್ಯೂಜಿಲೆಂಡ್‌ ವಿರುದ್ಧ ಮಂಗಳವಾರ ನಡೆದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಪಾಕಿಸ್ತಾನ 4 ವಿಕೆಟ್‌ಗಳ ಗೆಲುವು ಸಾಧಿಸಿದೆ. 

ಮೊದಲೆರಡು ಪಂದ್ಯಗಳನ್ನು ಭರ್ಜರಿಯಾಗಿಯೇ ಜಯಿಸಿ 2-1ರಲ್ಲಿ ಸರಣಿ ಕೈವಶ ಮಾಡಿಕೊಂಡಿದ್ದ ಆತಿಥೇಯ ನ್ಯೂಜಿಲೆಂಡ್, ಪಾಕ್ ಎದುರು ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಲೆಕ್ಕಾಚಾರದಲ್ಲಿತ್ತು. ಪಾಕ್ ವಿರುದ್ದ ತವರಿನಲ್ಲಿ ಕ್ಲೀನ್‌ ಸ್ವೀಪ್ ಮಾಡುವ ಅವಕಾಶವನ್ನು ನ್ಯೂಜಿಲೆಂಡ್ ತಂಡ ಕೈಚೆಲ್ಲಿದೆ.

ಟಾಸ್ ಸೋತರೂ ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ ತಂಡ ಡೆವೋನ್ ಕಾನ್ವೆ ಬಾರಿಸಿದ ಆಕರ್ಷಕ ಅರ್ಧಶತಕ(63)ದ ನೆರವಿನಿಂದ 7 ವಿಕೆಟ್‌ಗೆ 173 ರನ್‌ ಕಲೆಹಾಕಿತು. ಪಾಕಿಸ್ತಾನ ಪರ ಫಾಹಿಮ್ ಅಶ್ರಫ್ 3 ವಿಕೆಟ್ ಪಡೆದರೆ, ಹ್ಯಾರಿಸ್ ರವೂಫ್‌ ಹಾಗೂ ಶಾಹಿನ್ ಅಫ್ರಿದಿ ತಲಾ 2 ವಿಕೆಟ್ ಪಡೆದರು.

ಟಿ20: ಪಾಕ್ ವಿರುದ್ಧ ಕಿವೀಸ್‌ಗೆ 5 ವಿಕೆಟ್‌ಗಳ ಭರ್ಜರಿ ಜಯ

ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಾಕಿಸ್ತಾನ 19.4 ಓವರಲ್ಲಿ ಗುರಿ ತಲುಪಿತು. ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ರಿಜ್ವಾನ್ ಕೇವಲ 59 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 89 ರನ್‌ ಬಾರಿಸುವ ಮೂಲಕ ತಂಡಕ್ಕೆ ನೆರವಾದರು. ಇನ್ನು ಅನುಭವಿ ಬ್ಯಾಟ್ಸ್‌ಮನ್ ಮೊಹಮ್ಮದ್ ಹಫೀಜ್ 41 ಬಾರಿಸಿ ರಿಜ್ವಾನ್‌ಗೆ ಉತ್ತಮ ಸಾಥ್ ನೀಡಿದರು.

ಡಿಸೆಂಬರ್‌ 26ರಿಂದ ಉಭಯ ತಂಡಗಳ ನಡುವೆ 2 ಪಂದ್ಯಗಳ ಟೆಸ್ಟ್‌ ಸರಣಿ ಆರಂಭಗೊಳ್ಳಲಿದೆ.

ಸ್ಕೋರ್‌: ನ್ಯೂಜಿಲೆಂಡ್‌ 173/7
ಪಾಕಿಸ್ತಾನ 177/6