* ಐಪಿಎಲ್‌ ಮಾದರಿಯಲ್ಲಿ ಪಿಎಸ್‌ಎಲ್ ಹರಾಜು ನಡೆಸಲು ಪಿಸಿಬಿ ಚಿಂತನೆ* ಪಿಎಸ್‌ಎಲ್‌ ಟೂರ್ನಿಗೆ ಹೊಸ ಟಚ್ ನೀಡಲು ಹೋಗಿ ಹಾಸ್ಯಾಸ್ಪದ ಹೇಳಿಕೆ ನೀಡಿದ ಪಿಸಿಬಿ ಮುಖ್ಯಸ್ಥ ರಮೀಜ್ ರಾಜಾ* ಪಿಎಸ್‌ಎಲ್ ಹರಾಜು ನಡೆಸಿದರೆ ಯಾರೂ ಪಿಎಸ್‌ಎಲ್ ತೊರೆದು ಐಪಿಎಲ್‌ನತ್ತ ಮುಖ ಮಾಡುವುದಿಲ್ಲ ಎಂದ ರಾಜಾ

ಇಸ್ಲಾಮಾಬಾದ್‌(ಮಾ.16): ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) (Pakistan Cricket Board) ಅಧ್ಯಕ್ಷ ರಮೀಜ್‌ ರಾಜಾ (Ramiz Raja) ಅವರು ಮತ್ತೊಂದು ಹಾಸ್ಯಸ್ಪದ ಹೇಳಿಕೆ ಮೂಲಕ ಸುದ್ದಿಯಾಗಿದ್ದಾರೆ. ಈ ಬಾರಿ ಅವರು ಐಪಿಎಲ್‌ (IPL) ಬಗ್ಗೆ ಮಾತನಾಡಿದ್ದು, ಆಟಗಾರರು ಪಾಕಿಸ್ತಾನ ಸೂಪರ್‌ ಲೀಗ್‌(ಪಿಎಸ್‌ಎಲ್‌) (Pakistan Super League) ಬಿಟ್ಟು ಐಪಿಎಲ್‌ ಆಡಲು ಹೇಗೆ ಹೋಗುತ್ತಾರೆ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಈ ಬಗ್ಗೆ ಮಂಗಳವಾರ ಮಾತನಾಡಿದ ರಾಜಾ, ‘ನಾವೀಗ ಆರ್ಥಿಕವಾಗಿ ಸ್ವತಂತ್ರರಾಗಲು ಹೊಸ ಮಾರ್ಗ ಕಂಡುಕೊಳ್ಳಬೇಕಿದೆ. ಈಗ ಐಸಿಸಿ ಮತ್ತು ಪಿಎಸ್‌ಎಲ್‌ನಿಂದ ಮಾತ್ರ ಹಣ ಬರುತ್ತಿದೆ. ಮುಂದಿನ ವರ್ಷದಿಂದ ಐಪಿಎಲ್‌ನಂತೆ ಪಿಎಸ್‌ಎಲ್‌ಗೂ ಆಟಗಾರರ ಹರಾಜು ನಡೆಸಲಿದ್ದೇವೆ. ಈ ಬಗ್ಗೆ ಫ್ರಾಂಚೈಸಿಗಳ ಜೊತೆ ಮಾತುಕತೆ ನಡೆಸುತ್ತೇವೆ. ತಂಡಗಳು ಖರ್ಚು ಮಾಡಬಹುದಾದ ಮೊತ್ತವನ್ನು ಏರಿಕೆ ಮಾಡಲಿದ್ದೇವೆ. ಆಗ ನೋಡೋಣ ಪಿಎಸ್‌ಎಲ್‌ ಬಿಟ್ಟು ಐಪಿಎಲ್‌ ಆಡಲು ಯಾರು ಹೋಗ್ತಾರೆ ಅಂತ’ ಎಂದು ರಾಜಾ ಹೇಳಿಕೆ ನೀಡಿದ್ದಾರೆ. ಅಲ್ಲದೇ, ಕ್ರಿಕೆಟ್‌ ಈಗ ಹಣ ಗಳಿಸುವ ಆಟ. ಕ್ರಿಕೆಟ್‌ನಿಂದ ಪಾಕಿಸ್ತಾನಕ್ಕೆ ಹೆಚ್ಚಿನ ಹಣ ಬಂದರೆ ನಮ್ಮ ಗೌರವವೂ ಹೆಚ್ಚಾಗಲಿದೆ ಎಂದಿದ್ದಾರೆ.

ಕ್ರಿಕೆಟ್ (Cricket) ಒಂದು ರೀತಿ ಹಣಗಳಿಸುವ ಕ್ರೀಡೆಯಾಗಿದೆ. ನಮ್ಮ ದೇಶದಲ್ಲಿ ಕ್ರಿಕೆಟ್‌ನಿಂದ ಆರ್ಥಿಕತೆ ಹೆಚ್ಚಾದಂತೆ, ನಮ್ಮ ಗೌರವವೂ ಜಾಗತಿಕ ಮಟ್ಟದಲ್ಲಿ ಹೆಚ್ಚಾಗಲಿದೆ. ನಾವು ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯನ್ನು ಐಪಿಎಲ್‌ನಂತೆ ಆಟಗಾರರ ಹರಾಜು ನಡೆಸಿದರೆ, ಆಟಗಾರರು ಪಾಕಿಸ್ತಾನ ಸೂಪರ್‌ ಲೀಗ್‌(ಪಿಎಸ್‌ಎಲ್‌) ಬಿಟ್ಟು ಐಪಿಎಲ್‌ ಆಡಲು ಹೇಗೆ ಹೋಗುತ್ತಾರೆ ನೋಡೋಣ ಎಂದು ರಮೀಜ್ ರಾಜಾ ಸವಾಲು ಹಾಕಿದ್ದಾರೆ. ಈ ಮೊದಲು ರಮೀಜ್ ರಾಜಾ ‘ಪಿಸಿಬಿಗೆ ಶೇ.50ರಷ್ಟು ಆರ್ಥಿಕ ನೆರವು ಐಸಿಸಿಯಿಂದ ಬರಲಿದೆ. ಐಸಿಸಿಗೆ ಹರಿದು ಬರುವ ಒಟ್ಟು ಹಣದಲ್ಲಿ ಶೇ.90ರಷ್ಟು ಭಾರತ ಕೊಡುಗೆ ಆಗಿದೆ. ಹೀಗಾಗಿ ಪರೋಕ್ಷವಾಗಿ ಭಾರತವೇ(ಬಿಸಿಸಿಐ) ನಮಗೆ ನೆರವು ನೀಡುತ್ತಿದೆ. ವಿಶ್ವ ಕ್ರಿಕೆಟ್‌ನಲ್ಲಿ ನಮಗೆ ಹೆಚ್ಚು ಗೌರವ ಸಿಗಬೇಕು ಎಂದರೆ ನಾವು ಸ್ವಾವಲಂಬಿಯಾಗಬೇಕು. ಅದಕ್ಕೆ ನಾವೇ ಹೂಡಿಕೆದಾರರು, ಪ್ರಾಯೋಜಕರನ್ನು ಹುಡುಕಿಕೊಳ್ಳಬೇಕು ಎಂದು ಕರೆಕೊಟ್ಟಿದ್ದರು.

ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಗೆದ್ದರೆ ಪಾಕ್‌ಗೆ Blank cheque ಸಿಗುತ್ತೆ: ರಮೀಜ್ ರಾಜಾ!

ಕಳೆದ ತಿಂಗಳು ಮುಕ್ತಾಯವಾದ 2022ನೇ ಸಾಲಿನ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಮುಲ್ತಾನ್ ಸುಲ್ತಾನ್ (Multan Sultans) ತಂಡವನ್ನು ಮಣಿಸಿದ ಲಾಹೋರ್ ಖಲಂದರ್ಸ್‌ (Lahore Qalandars) ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಪಿಎಸ್‌ಎಲ್ ಟೂರ್ನಿಯಲ್ಲಿ ಈ ವರೆಗೆ ಇಸ್ಲಾಮಾಬಾದ್ ಯುನೈಟೆಡ್(2016&2018), ಪೇಶಾವರ್ ಝಲ್ಮಿ(2017), ಖೆಟ್ಟಾ ಗ್ಲಾಡಿಯೇಟರ್ಸ್‌(2019), ಕರಾಚಿ ಕಿಂಗ್ಸ್‌(2020) ಹಾಗೂ ಕಳೆದ ವರ್ಷ ಮುಲ್ತಾನ್ ಸುಲ್ತಾನ್ಸ್(2021) ತಂಡಗಳು ಚಾಂಪಿಯನ್ ಪಟ್ಟ ಅಲಂಕರಿಸಿವೆ.

4 ದೇಶಗಳ ಟೂರ್ನಿ ಬಗ್ಗೆ ಸೌರವ್‌ ಜೊತೆ ಚರ್ಚೆ: ರಾಜಾ

ಕರಾಚಿ: ನಾಲ್ಕು ದೇಶಗಳ ನಡುವಿನ ಏಕದಿನ ಕ್ರಿಕೆಟ್‌ ಟೂರ್ನಿ ಆಯೋಜಿಸುವ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಜೊತೆ ಚರ್ಚೆ ನಡೆಸುತ್ತೇನೆ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಮುಖ್ಯಸ್ಥ ರಮೀಜ್‌ ರಾಜಾ ಮಂಗಳವಾರ ತಿಳಿಸಿದ್ದಾರೆ.

‘ಆಸ್ಪ್ರೇಲಿಯಾ, ಇಂಗ್ಲೆಂಡ್‌, ಭಾರತ ಹಾಗೂ ಪಾಕಿಸ್ತಾನ ನಡುವೆ ಟೂರ್ನಿ ನಡೆಸುವ ಬಗ್ಗೆ ಗಂಗೂಲಿ ಜೊತೆ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌(ಎಸಿಸಿ) ಸಭೆಯಲ್ಲಿ ಮಾತನಾಡುತ್ತೇನೆ. ನಾವಿಬ್ಬರೂ ಮಾಜಿ ನಾಯಕರು. ಹೀಗಾಗಿ ನಮಗೆ ಕ್ರಿಕೆಟ್‌ನಲ್ಲಿ ಯಾವುದೇ ರಾಜಕೀಯ ಇಲ್ಲ. ಒಂದು ವೇಳೆ ನಮ್ಮ ಪ್ರಸ್ತಾಪಕ್ಕೆ ಭಾರತ ಒಪ್ಪದಿದ್ದರೆ, ಆಸ್ಪ್ರೇಲಿಯಾ, ಇಂಗ್ಲೆಂಡ್‌ ಜೊತೆ ಟೂರ್ನಿ ಆಯೋಜಿಸುತ್ತೇವೆ’ ಎಂದಿದ್ದಾರೆ. ಅಲ್ಲದೇ, ಮುಂದಿನ ವರ್ಷ ಏಷ್ಯಾ ಕಪ್‌ನಲ್ಲಿ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ಆಗಮಿಸುವ ಬಗ್ಗೆ ರಮೀಜ್‌ ಭರವಸೆ ವ್ಯಕ್ತಪಡಿಸಿದ್ದಾರೆ. ಪಾಕ್‌ಗೆ ಬರದಿದ್ದರೆ ಈ ಬಗ್ಗೆ ಮುಂದೆ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ತಿಳಿಸಿದ್ದಾರೆ.