Asianet Suvarna News Asianet Suvarna News

Ban vs Pak: ಬಾಂಗ್ಲಾ ಎದುರಿನ ಟೆಸ್ಟ್‌ಗೆ 12 ಆಟಗಾರರನ್ನೊಳಗೊಂಡ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಕಟ..!

* ಪಾಕಿಸ್ತಾನ-ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್‌ಗೆ ಕ್ಷಣಗಣನೆ ಆರಂಭ

* ನವೆಂಬರ್ 26ರಿಂದ ಆರಂಭವಾಗಲಿದೆ ಮೊದಲ ಟೆಸ್ಟ್ 

* ಬಾಂಗ್ಲಾ ಎದುರಿನ ಮೊದಲ ಟೆಸ್ಟ್‌ಗೆ 12 ಆಟಗಾರರ ಪಾಕ್ ತಂಡ ಪ್ರಕಟ

Pakistan Cricket announce 12 man squad for 1st Test against Bangladesh kvn
Author
Bengaluru, First Published Nov 25, 2021, 2:04 PM IST

ಚಿತ್ತಗಾಂಗ್(ನ.25): ಬಾಂಗ್ಲಾದೇಶ ವಿರುದ್ದ ನವೆಂಬರ್ 26ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್‌ ಪಂದ್ಯಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (Pakistan Cricket Board) 12 ಆಟಗಾರರನ್ನೊಳಗೊಂಡ ತಂಡ ಪ್ರಕಟಿಸಲಾಗಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಚಿತ್ತಗಾಂಗ್‌ನಲ್ಲಿರುವ ಜುಹೂರ್ ಅಹಮ್ಮದ್ ಚೌಧರಿ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಬಾಬರ್ ಅಜಂ (Babar Azam) ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದು, ವಿಕೆಟ್ ಕೀಪರ್‌ ಮೊಹಮ್ಮದ್ ರಿಜ್ವಾನ್ (Mohammad Rizwan) ಉಪನಾಯಕನಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಇನ್ನುಳಿದಂತೆ ಆಲ್ರೌಂಡರ್‌ ಫಾಹಿಮ್ ಅಶ್ರಫ್‌ ಅಂತಿಮ 12ರ ಬಳಗದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಇದರ ಜತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ತುದಿಗಾಲಿನಲ್ಲಿ ನಿಂತಿರುವ ಅಬ್ದುಲ್ಲಾ ಶಫಿಕ್ ಕೂಡಾ ಅಂತಿಮ ಹನ್ನೆರಡರ ಬಳಗದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ. ಬಾಂಗ್ಲಾದೇಶ (Bangladesh Cricket Team) ಎದುರು ಟಿ20 ಸರಣಿಯಲ್ಲಿ ಭರ್ಜರಿ ಜಯ ಸಾಧಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡವು, ಇದೀಗ ರೆಡ್‌ ಬಾಲ್‌ ಕ್ರಿಕೆಟ್‌ನಲ್ಲೂ ಅಬ್ಬರಿಸಲು ಎದುರು ನೋಡುತ್ತಿದೆ. 

ಈ ವರ್ಷಾರಂಭದಲ್ಲಿ ಪಾಕಿಸ್ತಾನ ತಂಡವು ವೆಸ್ಟ್‌ ಇಂಡೀಸ್ ವಿರುದ್ದದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ಅಂತರದಲ್ಲಿ ಡ್ರಾ ಮಾಡಿಕೊಂಡಿತ್ತು. ಇನ್ನೊಂದೆಡೆ ಹರಾರೆಯಲ್ಲಿ ಜಿಂಬಾಬ್ವೆ ವಿರುದ್ದ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ಭರ್ಜರಿ ಜಯ ಸಾಧಿಸಿತ್ತು. ಇದೀಗ ಪಾಕ್ ವಿರುದ್ದ ತವರಿನಲ್ಲಿ ನಡೆಯುತ್ತಿರುವ ಸರಣಿಯಲ್ಲಿ ಅಜಂ ಪಡೆಗೆ ಶಾಕ್‌ ನೀಡುವ ಲೆಕ್ಕಾಚಾರದಲ್ಲಿದೆ.

IPL 2022: ಈ ಐವರು ಬ್ಯಾಟರ್‌ಗಳು RCB ಪರ ಎಬಿ ಡಿವಿಲಿಯರ್ಸ್‌ ಸ್ಥಾನ ತುಂಬಬಲ್ಲರು..!

ಬಾಂಗ್ಲಾದೇಶ ವಿರುದ್ದದ ಮೊದಲ ಟೆಸ್ಟ್‌ಗೆ 12 ಆಟಗಾರರನ್ನೊಳಗೊಂಡ ತಂಡ ಹೀಗಿದೆ ನೋಡಿ:
ಬಾಬರ್ ಅಜಂ(ನಾಯಕ), ಮೊಹಮ್ಮದ್ ರಿಜ್ವಾನ್(ಉಪನಾಯಕ), ಅಬ್ದುಲ್ಲಾ ಶಫಿಕ್‌, ಆಬಿದ್ ಅಲಿ, ಅಜರ್ ಅಲಿ, ಫಾಹಿಮ್ ಅಶ್ರಫ್, ಫವಾದ್ ಆಲಂ, ಹಸನ್ ಅಲಿ, ಇಮಾಮ್‌ ಉಲ್ ಹಕ್‌, ನೂಮನ್ ಅಲಿ, ಸಾಜಿದ್ ಖಾನ್, ಶಾಹಿನ್ ಶಾ ಅಫ್ರಿದಿ.

ಗಾಯದ ಸಮಸ್ಯೆಯಿಂದ ಬಳಲುತ್ತಿದೆ ಬಾಂಗ್ಲಾದೇಶ:
ಈಗಾಗಲೇ ತವರಿನಲ್ಲಿ ನಡೆದ ಟಿ20 ಸರಣಿಯಲ್ಲಿ ವೈಟ್‌ವಾಷ್ ಆಗುವ ಮೂಲಕ ಮುಖಭಂಗ ಅನುಭವಿಸಿರುವ ಬಾಂಗ್ಲಾದೇಶ ತಂಡವು ಟೆಸ್ಟ್ ಸರಣಿಗೂ ಮುನ್ನ ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಸ್ನಾಯು ಸೆಳೆತಕ್ಕೆ ಒಳಗಾಗಿರುವ ತಂಡದ ಸ್ಟಾರ್ ಆಲ್ರೌಂಡರ್ ಶಕೀಬ್ ಅಲ್‌ ಹಸನ್‌ (Shakib Al Hasan) ಈಗಾಗಲೇ ಪಾಕ್‌ ವಿರುದ್ದದ ಮೊದಲ ಟೆಸ್ಟ್‌ ಪಂದ್ಯದಿಂದ ಹೊರಗುಳಿದಿದ್ದಾರೆ. ಶಕೀಬ್ ಅಲ್ ಹಸನ್‌ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ವೆಸ್ಟ್‌ ಇಂಡೀಸ್ ವಿರುದ್ದದ ಪಂದ್ಯದ ವೇಳೆಗೆ ಗಾಯಕ್ಕೊಳಗಾಗಿದ್ದರು(hamstring Injury). ಹೀಗಾಗಿ ಶಕೀಬ್‌ ತವರಿನಲ್ಲಿ ಪಾಕ್‌ ವಿರುದ್ದದ ಟಿ20 ಸರಣಿಯಿಂದಲೂ ಹೊರಬಿದ್ದಿದ್ದರು. 

ಶಕೀಬ್‌ ಅಲ್ ಹಸನ್‌ ಪಾಕಿಸ್ತಾನ ವಿರುದ್ದ ಮೊದಲ ಟೆಸ್ಟ್‌ನಿಂದ ಹೊರಗುಳಿಯುವುದು ಖಚಿತ. ಇನ್ನೂ ಅವರು ಗಾಯದಿಂದ ಸಂಪೂರ್ಣವಾಗಿ ಗುಣಮುಖರಾಗಿಲ್ಲ. ಫಿಸಿಯೋಥೆರಪಿಸ್ಟ್‌ಗಳು ನೀಡುವ ವರದಿಯನ್ನು ಆದರಿಸಿ ಎರಡನೇ ಟೆಸ್ಟ್‌ಗೆ ಅವರು ಲಭ್ಯವಾಗುವರೋ ಅಥವಾ ಇಲ್ಲವೇ ಎನ್ನುವ ಬಗ್ಗೆ ನಿರ್ಧರಿಸಲಾಗುವುದು ಎಂದು ಬಾಂಗ್ಲಾದೇಶ ಆಯ್ಕೆ ಸಮಿತಿ ಮುಖ್ಯಸ್ಥ ಮಿನಾಜುಲ್‌ ಆಬೆದಿನ್ ತಿಳಿಸಿದ್ದಾರೆ.

ಇನ್ನು ಅನುಭವಿ ಆರಂಭಿಕ ಬ್ಯಾಟರ್‌ ತಮಿಮ್ ಇಕ್ಬಾಲ್‌ (Tamil Iqbal) ಕೂಡಾ ಎಡಗೈ ಗಾಯಕ್ಕೆ ಒಳಗಾಗಿದ್ದು, ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಇನ್ನು ವೇಗದ ಬೌಲರ್ ಟಸ್ಕಿನ್ ಅಹಮ್ಮದ್ (Taskin Ahmed) ಕೂಡಾ ಗಾಯಗೊಂಡಿದ್ದು, ಮೊದಲ ಟೆಸ್ಟ್ ಪಂದ್ಯ ಆಡುವುದು ಅನುಮಾನ ಎನಿಸಿದೆ. ಹೀಗಾಗಿ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಬಲಿಷ್ಠ ಪಾಕಿಸ್ತಾನ ಎದುರು ಬಾಂಗ್ಲಾದೇಶ ತಂಡವು ಯಾವ ರೀತಿಯ ಪ್ರದರ್ಶನ ತೋರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Follow Us:
Download App:
  • android
  • ios