ಕೊನೆಯ ಎಸೆತದಲ್ಲಿ ಗೆಲುವು ಕಂಡ ಪಾಕಿಸ್ತಾನಅಂತಿಮ ಎಸೆತದಲ್ಲಿ ಬೌಂಡರಿ ಸಿಡಿಸಿ ತಂಡಕ್ಕೆ ಗೆಲುವು ನೀಡಿದ ಅಹ್ಮದ್ ಖಾನ್ಭಾರತ ತಂಡಕ್ಕೆ ಸೋಮವಾರ ಅಫ್ಘಾನಿಸ್ತಾನ ಎದುರಾಳಿ
ದುಬೈ (ಡಿ. 25): ಕೊನೆಯ ಎಸೆತದಲ್ಲಿ ಎರಡು ರನ್ ಗಳನ್ನು ರಕ್ಷಿಸಿಕೊಳ್ಳಲು ವಿಫಲವಾದ ಭಾರತ (India) ತಂಡ ಪಾಕಿಸ್ತಾನ (Pakistan ) ವಿರುದ್ಧ ಅಂಡರ್ 19 ಏಷ್ಯಾಕಪ್ ಟೂರ್ನಿಯ (ACC U19 Asia Cup 2021) ತನ್ನ 2ನೇ ಪಂದ್ಯದಲ್ಲಿ 2 ವಿಕೆಟ್ ಗಳ ಸೋಲು ಕಂಡಿದೆ. ರವಿ ಕುಮಾರ್ ಎಸೆದ ಕೊನೆಯ ಓವರ್ ನಲ್ಲಿ ಪಾಕಿಸ್ತಾನ ತಂಡದ ಗೆಲುವಿಗೆ 8 ರನ್ ಗಳು ಬೇಕಿದ್ದವು. ಕೊನೆಯ ಎಸೆತದವರೆಗೂ ರವಿಕುಮಾರ್ (Ravi Kumar) ಉತ್ತಮ ದಾಳಿ ನಡೆಸಿದ್ದರು. ಅಂತಿಮ ಎಸೆತದಲ್ಲಿ 2 ರನ್ ಬೇಕಿದ್ದಾಗ ಅಹ್ಮದ್ ಖಾನ್ (Ahmad Khan)ಆಕರ್ಷಕ ಬೌಂಡರಿ ಸಿಡಿಸುವ ಮೂಲಕ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ 2ನೇ ಗೆಲುವಿಗೆ ಕಾರಣರಾದರು. ಭಾರತ ತಂಡ ಮುಂದಿನ ಪಂದ್ಯದಲ್ಲಿ ಸೋಮವಾರ ಅಫ್ಘಾನಿಸ್ತಾನ (Afghanistan ) ತಂಡವನ್ನು ಎದುರಿಸಲಿದ್ದರೆ, ಪಾಕಿಸ್ತಾನ, ಯುಎಇ (UAE ) ತಂಡವನ್ನು ಎದುರಿಸಲಿದೆ. ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಮುಖಾಮುಖಿಯಲ್ಲಿ ಗೆದ್ದ ತಂಡ ಸೆಮಿಫೈನಲ್ (Semi Final) ಸಾಧನೆ ಮಾಡಲಿದೆ.
ಐಸಿಸಿ ಅಕಾಡೆಮಿ ಗ್ರೌಂಡರ್ ನಂಬರ್-2 ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಯಶ್ ಧುಲ್ ನೇತೃತ್ವದ ಭಾರತ ತಂಡ 49 ಓವರ್ ಗಳಲ್ಲಿ 237 ರನ್ ಗೆ ಆಲೌಟ್ ಆಯಿತು. ಪಾಕಿಸ್ತಾನ ತಂಡದ ಪರವಾಗಿ ವೇಗದ ಬೌಲರ್ ಜೀಶನ್ ಜಮೀರ್ (Zeeshan Zameer ) 60 ರನ್ ಗೆ 5 ವಿಕೆಟ್ ಉರುಳಿಸುವ ಮೂಲಕ ಮಿಂಚಿದರು. ಮೊತ್ತ ಬೆನ್ನಟ್ಟಿದ ಪಾಕಿಸ್ತಾನ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಮೊಹಮದ್ ಶೆಹಜಾದ್ (Muhammad Shehzad) 105 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ಇದ್ದ 81 ರನ್ ಸಿಡಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಭಾರತ ತಂಡ ಗೆಲುವಿಗಾಗಿ ಕೊನೆ ಎಸೆತದ ತನಕ ಹೋರಾಡಿದರೂ ಯಶಸ್ವಿಯಾಗಲಿಲ್ಲ.
238 ರನ್ ಬೆನ್ನಟ್ಟುವ ಹಾದಿಯಲ್ಲಿ ಪಾಕಿಸ್ತಾನ ತಂಡಕ್ಕೆ ಭಾರತ ಆರಂಭದಲ್ಲಿಯೇ ಕಡಿವಾಣ ಹಾಕಿತ್ತು. ಆರಂಭಿಕ ಅಬ್ದುಲ್ ವಹೀದ್ ಅವರನ್ನು ರಾಜ್ಯವರ್ಧನ್ ಶೂನ್ಯಕ್ಕೆ ಔಟ್ ಮಾಡಿದ್ದರು. ಆದರೆ, 2ನೇ ವಿಕೆಟ್ ಗೆ ಮಾಜ್ ಶದಾಕ್ತ್ ಹಾಗೂ ಮೊಹಮದ್ ಶೆಹಜಾದ್ 2ನೇ ವಿಕೆಟ್ ಗೆ 64 ರನ್ ಜೊತೆಯಾಟವಾಡಿದ್ದರು. 15ನೇ ಓವರ್ ನಲ್ಲಿ ರಶೀದ್ ರಾಜ್ ಈ ಜೊತೆಯಾಟವನ್ನು ಬೇರ್ಪಡಿಸಿದರು.
ಆ ಬಳಿಕ ಪಾಕಿಸ್ತಾನದ ವಿಕೆಟ್ ಗಳನ್ನು ನಿರಂತರವಾಗಿ ಉರುಳಿಸಲು ಆರಂಭಿಸಿದ ಭಾರತ ಪಂದ್ಯದ ಮೇಲೆ ಮೇಲುಗೈ ಸಾಧಿಸಲು ಪ್ರಯತ್ನಪಟ್ಟಿತು. ಆದರೆ, ಒಂದೆಡೆ ವಿಕೆಟ್ ಕಾಯ್ದುಕೊಂಡಿದ್ದ ಮೊಹಮದ್ ಶೆಹಜಾದ್ 37ನೇ ಓವರ್ ನಲ್ಲಿ ನಿರ್ಗಮಿಸಿದರು. ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ಗಳಾದ ಇರ್ಫಾನ್ ಖಾನ್ (32), ರಿಜ್ವಾನ್ ಮೊಹಮದ್(29) ಹಾಗೂ ಅಹ್ಮದ್ ಖಾನ್ (29) ಸಾಹಸಿಕ ಆಟದಿಂದ ಪಾಕಿಸ್ತಾನ ಗೆಲುವು ಕಂಡಿತು. ಭಾರತದ ಪರವಾಗಿ ರಶೀದ್ ರಾಜ್ ನಾಲ್ಕು ವಿಕೆಟ್ ಉರುಳಿಸಿ ಗಮನಸೆಳೆದರು.
ACC U19 Asia Cup 2021: ಯುಎಇ ವಿರುದ್ದ ಭಾರತ ಕಿರಿಯರ ತಂಡಕ್ಕೆ 154 ರನ್‌ಗಳ ಭರ್ಜರಿ ಗೆಲುವು
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಭಾರತ 41 ರನ್ ಗೆ ಪ್ರಮುಖ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಈ ಹಂತದಲ್ಲಿ ವಿಕೆಟ್ ಕೀಪರ್ ಅರಾಧ್ಯ ಯಾದವ್ 83 ಎಸೆತಗಳಲ್ಲಿ 3 ಬೌಂಡರಿ ಇದ್ದ 50 ರನ್ ಬಾರಿಸಿ ತಂಡವನ್ನು ಅಧರಿಸಿದರು. ಅಗ್ರ ಕ್ರಮಾಂಕದಲ್ಲಿ ಹರ್ನೂರ್ ಸಿಂಗ್ 59 ಎಸೆತಗಳಲ್ಲಿ 6 ಬೌಂಡರಿ ಇದ್ದ 45 ರನ್ ಬಾರಿಸಿ ಮಿಂಚಿದರು. ಇನ್ನಿಂಗ್ಸ್ ನ ಕೊನೆಯಲ್ಲಿ ಕುಶಾಲ್ ತಂಬೆ (32 ರನ್, 38 ಎಸೆತ, 4 ಬೌಂಡರಿ) ಹಾಗೂ ರಾಜ್ಯವರ್ಧನ್ ( 33 ರನ್, 20 ಎಸೆತ, 5 ಬೌಂಡರಿ, 1 ಸಿಕ್ಸರ್) ಅಬ್ಬರದ ಆಟವಾಡಿದ್ದರಿಂದ ತಂಡದ ಮೊತ್ತ 235ರ ಗಡಿ ದಾಟಿತು. ನಾಯಕ ಯಶ್ ಧುಲ್ (Yash Dhull) ಮೊದಲ ಎಸೆತದಲ್ಲಿಯೇ ಔಟಾಗಿ ನಿರಾಸೆ ಮೂಡಿಸಿದರು.
ಭಾರತ 49 ಓವರ್ ಗಳಲ್ಲಿ 237 (ಆರಾಧ್ಯ ಯಾದವ್ 50, ಹರ್ನೂರ್ ಸಿಂಗ್ 46, ಜೀಶನ್ ಜಮೀರ್ 60ಕ್ಕೆ 5), ಪಾಕಿಸ್ತಾನ: 8 ವಿಕೆಟ್ ಗೆ 240 (ಮೊಹಮದ್ ಶೆಹಜಾದ್ 81, ಇರ್ಫಾನ್ ಖಾನ್ 32, ರಶೀದ್ ರಾಜ್ 56ಕ್ಕೆ 4).
