* ಪಾಕಿಸ್ತಾನ ಎದುರು ವಿಂಡೀಸ್‌ಗೆ ರೋಚಕ ಗೆಲುವು ತಂದುಕೊಟ್ಟ ಕೀಮರ್ ರೋಚ್* ಮೊದಲ ಟೆಸ್ಟ್‌ನಲ್ಲಿ ಪಾಕ್ ಎದುರು ಕೆರಿಬಿಯನ್ನರಿಗೆ 1 ವಿಕೆಟ್‌ಗಳ ಜಯ* 2 ಪಂದ್ಯಗಳ ಸರಣಿಯಲ್ಲಿ ವಿಂಡೀಸ್‌ಗೆ 1-0 ಮುನ್ನಡೆ 

ಕಿಂಗ್‌ಸ್ಟನ್‌(ಆ.17): ಅನುಭವಿ ಬೌಲರ್‌ ಕೀಮರ್‌ ರೋಚ್‌ ಹಾಗೂ ಯುವ ವೇಗಿ ಜೇಡನ್‌ ಸೀಲ್ಸ್‌ ಕೊನೆಯ ವಿಕೆಟ್‌ಗೆ ನೀಡಿದ 17 ರನ್‌ಗಳ ಜೊತೆಯಾಟದ ನೆರವಿನಿಂದ ವೆಸ್ಟ್‌ಇಂಡೀಸ್‌ ತಂಡವು ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 1 ವಿಕೆಟ್‌ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

168 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ್ದ ವೆಸ್ಟ್‌ಇಂಡೀಸ್‌ ಚಹಾ ವಿರಾಮದ ವೇಳೆಗೆ 114ಕ್ಕೆ 7 ವಿಕೆಟ್‌ ಕಳೆದುಕೊಂಡು ಆತಂಕಕ್ಕೆ ಸಿಲುಕಿತ್ತು. ಈ ವೇಳೆ ಅಜೇಯವಾಗಿ 30 ರನ್‌ ಗಳಿಸಿದ ರೋಚ್‌ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬೌಲಿಂಗ್‌ನಲ್ಲಿ 5 ವಿಕೆಟ್‌ ಗಳಿಸಿದ ಸೀಲ್ಸ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Scroll to load tweet…

ಲಾರ್ಡ್ಸ್ ಟೆಸ್ಟ್ ಪಂದ್ಯ ಗೆದ್ದು ಬೀಗಿದ ಟೀಂ ಇಂಡಿಯಾ; ಇಂಗ್ಲೆಂಡ್‌ಗೆ ತೀವ್ರ ಮುಖಭಂಗ!

ಹೀಗಿತ್ತು ಮೊದಲ ಟೆಸ್ಟ್: ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಪಾಕಿಸ್ತಾನ 217 ರನ್‌ ಬಾರಿಸಿ ಸರ್ವಪತನ ಕಂಡಿತ್ತು. ಇದಕ್ಕುತ್ತರವಾಗಿ ವೆಸ್ಟ್ ಇಂಡೀಸ್‌ ನಾಯಕ ಕ್ರೆಗ್ ಬ್ರಾಥ್‌ವೇಟ್‌(97) ಶತಕ ವಂಚಿತ ಬ್ಯಾಟಿಂಗ್ ನೆರವಿನಿಂದ 253 ರನ್‌ ಬಾರಿಸುವ ಮೂಲಕ ಒಟ್ಟಾರೆ ಮೊದಲ ಇನಿಂಗ್ಸ್‌ನಲ್ಲಿ 36 ರನ್‌ಗಳ ಅಲ್ಪ ಮುನ್ನಡೆ ಸಾಧಿಸಿತು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ಪಾಕ್‌ ನಾಯಕ ಬಾಬರ್ ಅಜಂ(55) ಅರ್ಧಶತಕದ ನೆರವಿನಿಂದ 203 ರನ್‌ ಕಲೆಹಾಕಿ ಆಲೌಟ್ ಆಗುವ ಮೂಲಕ ವಿಂಡೀಸ್‌ಗೆ ಮೊದಲ ಟೆಸ್ಟ್‌ ಗೆಲ್ಲಲು 168 ರನ್‌ಗಳ ಗುರಿ ನೀಡಿತ್ತು. 

ಇನ್ನು ಪಾಕಿಸ್ತಾನ ಹಾಗೂ ವೆಸ್ಟ್‌ ಇಂಡೀಸ್‌ ನಡುವಿನ ಎರಡನೇ ಟೆಸ್ಟ್ ಪಂದ್ಯವು ಆಗಸ್ಟ್ 20ರಿಂದ ಇದೇ ಕಿಂಗ್‌ಸ್ಟನ್‌ನ ಸಬಿನಾ ಪಾರ್ಕ್‌ ಮೈದಾನದಲ್ಲೇ ನಡೆಯಲಿದ್ದು, ಪಾಕ್ ಎದುರು ಟೆಸ್ಟ್ ಸರಣಿ ಕೈವಶ ಮಾಡಿಕೊಳ್ಳಲು ಕೆರಿಬಿಯನ್ನರು ತುದಿಗಾಲಿನಲ್ಲಿ ನಿಂತಿದ್ದಾರೆ.

ಸ್ಕೋರ್‌: ಪಾಕಿಸ್ತಾನ 217 ಮತ್ತು 203, ವೆಸ್ಟ್‌ಇಂಡೀಸ್‌ 253 ಮತ್ತು 168/9