Asianet Suvarna News Asianet Suvarna News

Ind vs Ban ಬಾಂಗ್ಲಾದೇಶ ಏಕದಿನ ಸರಣಿಯಿಂದ ಹೊರಬಿದ್ದ ಶಮಿ, ಮಾರಕ ವೇಗಿ ಉಮ್ರಾನ್ ಮಲಿಕ್‌ಗೆ ಬುಲಾವ್..!

ಬಾಂಗ್ಲಾದೇಶ ಎದುರಿನ ಏಕದಿನ ಸರಣಿಯಿಂದ ಹೊರಬಿದ್ದ ಮೊಹಮ್ಮದ್ ಶಮಿ
ಭುಜದ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಅನುಭವಿ ವೇಗಿ ಶಮಿ
ಶಮಿ ಬದಲಿಗೆ ಭಾರತ ತಂಡ ಕೂಡಿಕೊಂಡ ಯುವ ವೇಗಿ ಉಮ್ರಾನ್ ಮಲಿಕ್

Pacer Umran Malik Replaces Injured Pacer Mohammed Shami In India ODI Squad against Bangladesh kvn
Author
First Published Dec 3, 2022, 11:34 AM IST

ನವದೆಹಲಿ(ಡಿ.03): ಭುಜದ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ, ಡಿಸೆಂಬರ್ 04ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ಇದೀಗ ಬಾಂಗ್ಲಾದೇಶ ಎದುರಿನ ಏಕದಿನ ಸರಣಿಗೆ ಯುವ ಮಾರಕ ವೇಗಿ ಉಮ್ರಾನ್ ಮಲಿಕ್, ಭಾರತ ಏಕದಿನ ಕ್ರಿಕೆಟ್ ತಂಡ ಕೂಡಿಕೊಂಡಿದ್ದಾರೆ. 

ಆಸ್ಟ್ರೇಲಿಯಾದಲ್ಲಿ ಕಳೆದ ತಿಂಗಳು ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊಹಮ್ಮದ್ ಶಮಿ, ಟೀಂ ಇಂಡಿಯಾ ವೇಗದ ಬೌಲಿಂಗ್ ಪಡೆಯನ್ನು ಮುನ್ನಡೆಸಿದ್ದರು. ಭಾರತ ತಂಡವು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್‌ನಲ್ಲಿ ಮುಗ್ಗರಿಸಿ ನಿರಾಸೆ ಅನುಭವಿಸಿತ್ತು. ಇದಾದ ಬಳಿಕ ಶಮಿ, ನ್ಯೂಜಿಲೆಂಡ್ ಎದುರಿನ ಸೀಮಿತ ಓವರ್‌ಗಳ ಸರಣಿಯಿಂದ ವಿಶ್ರಾಂತಿ ಪಡೆದಿದ್ದರು. ಇನ್ನು ಬಾಂಗ್ಲಾದೇಶ ಎದುರಿನ ಏಕದಿನ ಸರಣಿಗೆ ಸ್ಥಾನ ಪಡೆದಿದ್ದ ಮೊಹಮ್ಮದ್ ಶಮಿ, ಅಭ್ಯಾಸ ನಡೆಸುತ್ತಿದ್ದಾಗ ಭುಜದ ನೋವಿಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಇನ್ನು ಏಕದಿನ ಸರಣಿಯ ಬಳಿಕ ಟೀಂ ಇಂಡಿಯಾ ಡಿಸೆಂಬರ್ 14ರಿಂದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲಿದ್ದು, ಟೆಸ್ಟ್‌ ಸರಣಿಯಿಂದಲೂ ಹೊರಗುಳಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

"ವೇಗದ ಬೌಲರ್‌ ಮೊಹಮ್ಮದ್ ಶಮಿ, ಬಾಂಗ್ಲಾದೇಶ ಎದುರಿನ ಏಕದಿನ ಸರಣಿಗೆ ಅಭ್ಯಾಸ ನಡೆಸುವಾಗ ಭುಜದ ನೋವಿಗೆ ಒಳಗಾಗಿದ್ದಾರೆ. ಅವರೀಗ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಬಿಸಿಸಿಐ ವೈದ್ಯಕೀಯ ಸಿಬ್ಬಂದಿಗಳ ನಿಗಾದಲ್ಲಿದ್ದಾರೆ. ಹೀಗಾಗಿ ಅವರು ಬಾಂಗ್ಲಾದೇಶ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ಭಾರತ ತಂಡದ ಆಯ್ಕೆ ಸಮಿತಿಯು ಮೊಹಮ್ಮದ್ ಶಮಿ ಬದಲಿಗೆ ಉಮ್ರಾನ್ ಮಲಿಕ್ ಅವರಿಗೆ ಭಾರತ ತಂಡದಲ್ಲಿ ಸ್ಥಾನ ನೀಡಲಾಗಿದೆ" ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಂಗ್ಲಾದೇಶ ಎದುರಿನ ಏಕದಿನ ಸರಣಿಗೆ ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಉಮ್ರಾನ್ ಮಲಿಕ್ ಹಾಗೂ ಕುಲ್ದಿಪ ಸೆನ್ ಸ್ಥಾನ ಪಡೆದಿದ್ದಾರೆ. ಇನ್ನು ಮೊಹಮ್ಮದ್ ಶಮಿ ಗಾಯಕ್ಕೆ ಕಾರಣವೇನು ಹಾಗೂ ಗಾಯ ಯಾವ ಪ್ರಮಾಣದಲ್ಲಿ ಆಗಿದೆ ಎನ್ನುವುದರ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ. ಮೊಹಮ್ಮದ್ ಶಮಿ, ಭಾರತ ಏಕದಿನ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶಮಿ, ಟೀಂ ಇಂಡಿಯಾ ಪರ ವೇಗದ ಬೌಲಿಂಗ್ ವಿಭಾಗದಲ್ಲಿ ಪ್ರಮುಖ ಪಾತ್ರವಹಿಸುವ ಸಾಧ್ಯತೆಯಿದೆ.

ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವು ಢಾಕಾದ ಮೀರ್‌ಪುರ್‌ ಕ್ರೀಡಾಂಗಣದಲ್ಲಿ ಡಿಸೆಂಬರ್ 4, ಡಿಸೆಂಬರ್ 7, ಡಿಸೆಂಬರ್ 10ರಂದು ಏಕದಿನ ಪಂದ್ಯಗಳು ನಡೆಯಲಿದ್ದು, ಡಿಸೆಂಬರ್ 14ರಿಂದ 18ರ ವರೆಗೂ ಛಟ್ಟೋಗ್ರಾಮ್‌ನಲ್ಲಿ ಮೊದಲ ಟೆಸ್ಟ್‌, ಡಿ.22ರಿಂದ 26ರ ವರೆಗೂ ಢಾಕಾದಲ್ಲಿ 2ನೇ ಟೆಸ್ಟ್‌ ನಡೆಯಲಿದೆ. ಟೆಸ್ಟ್‌ ಸರಣಿಯು ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ವ್ಯಾಪ್ತಿಗೆ ಒಳಪಡಲಿದೆ.
 
ಬಾಂಗ್ಲಾದೇಶ ಎದುರಿನ ಏಕದಿನ ಸರಣಿಗೆ ಭಾರತದ ಪರಿಷ್ಕೃತ ತಂಡ ಹೀಗಿದೆ ನೋಡಿ

ರೋಹಿತ್ ಶರ್ಮಾ(ನಾಯಕ), ಕೆ ಎಲ್ ರಾಹುಲ್(ಉಪನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಭ್ ಪಂತ್(ವಿಕೆಟ್ ಕೀಪರ್), ಇಶಾನ್ ಕಿಶನ್, ಶಹಬಾಜ್ ಅಹಮದ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್, ದೀಪಕ್ ಚಹರ್, ಕುಲ್ದೀಪ್ ಸೆನ್.

Follow Us:
Download App:
  • android
  • ios