ಟೀಂ ಇಂಡಿಯಾಗೆ 10 ವಿಕೆಟ್‌ಗಳ ಹೀನಾಯ ಸೋಲು, ಕಿವೀಸ್‌ಗೆ 100ನೇ ಐತಿಹಾಸಿಕ ಟೆಸ್ಟ್ ಗೆಲುವು
ಟೀಂ ಇಂಡಿಯಾ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್‌ಗೆ 10 ವಿಕೆಟ್‌ಗಳಿಂದ ಶರಣಾಗಿದೆ. ಇನ್ನು ಕಿವೀಸ್ ತಂಡ ಟೆಸ್ಟ್ ಕ್ರಿಕೆಟ್‌ನಲ್ಲಿ ನೂರನೇ ಐತಿಹಾಸಿಕ ಗೆಲುವು ದಾಖಲಿಸಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.
ವೆಲ್ಲಿಂಗ್ಟನ್(ಫೆ.24): ನ್ಯೂಜಿಲೆಂಡ್ ಎದುರು ಮೊದಲ ಟೆಸ್ಟ್‌ನಲ್ಲಿ ಟೀಂ ಇಂಡಿಯಾ 10 ವಿಕೆಟ್‌ಗಳ ಆಘಾತಕಾರಿ ಸೋಲು ಕಂಡಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೊದಲ ಸೋಲು ಎದುರಾಗಿದೆ. ಸತತ 7 ಟೆಸ್ಟ್ ಪಂದ್ಯ ಗೆದ್ದು ಬೀಗುತ್ತಿದ್ದ ವಿರಾಟ್ ಕೊಹ್ಲಿ ಪಡೆ ನ್ಯೂಜಿಲೆಂಡ್‌ಗೆ ಶರಣಾಗಿದೆ. ಇನ್ನು ನ್ಯೂಜಿಲೆಂಡ್ ತಂಡ ಐತಿಹಾಸಿಕ ನೂರನೇ ಟೆಸ್ಟ್ ಗೆಲುವು ದಾಖಲಿಸಿದೆ.
100ನೇ ಗೆಲುವು: ಭಾರತ ವಿರುದ್ಧ ಭರ್ಜರಿ ಗೆಲುವು ಸಾಧಿಸುವುದರ ಜತೆಗೆ ನ್ಯೂಜಿಲೆಂಡ್ ತಂಡ 100 ಟೆಸ್ಟ್ ಗೆಲುವುಗಳನ್ನು ದಾಖಲಿಸಿದ ಸಾಧನೆ ಮಾಡಿದೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 100 ಗೆಲುವು ದಾಖಲಿಸಿದ 7ನೇ ತಂಡ ಎನ್ನುವ ಗೌರವಕ್ಕೆ ಕಿವೀಸ್ ಭಾಜನವಾಗಿದೆ. ಅಂದಹಾಗೆ 100ನೇ ಟೆಸ್ಟ್ ಪಂದ್ಯವನ್ನಾಡಿದ ರಾಸ್ ಟೇಲರ್‌ಗೂ ಸ್ಮರಣೀಯ ಪಂದ್ಯಗಳಲ್ಲಿ ಒಂದು ಎನಿಸಿದೆ.
ಹೌದು, 144/4 ರನ್‌ಗಳೊಂದಿಗೆ ನಾಲ್ಕನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾಗೆ ಟಿಮ್ ಸೌಥಿ ಆಘಾತ ನೀಡಿದರು. ಪ್ರವಾಸಿ ಭಾರತ ತಂಡ 191 ರನ್‌ಗಳಿಸುವಷ್ಟರಲ್ಲಿ ಸರ್ವಪತನ ಕಂಡಿತು. ಇದರೊಂದಿಗೆ ನ್ಯೂಜಿಲೆಂಡ್ ತಂಡಕ್ಕೆ ಗೆಲ್ಲಲು 9 ರನ್‌ಗಳ ಸುಲಭ ಗುರಿ ನೀಡಿತು. ಕೇವಲ 10 ಎಸೆತಗಳಲ್ಲಿ ಕಿವೀಸ್ ತಂಡ ಗೆಲುವಿನ ನಗೆ ಬೀರಿತು. ಇದರೊಂದಿಗೆ ಎರಡು ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ 1-0 ಮುನ್ನಡೆ ಸಾಧಿಸಿದೆ. ಇನ್ನು ಎರಡನೇ ಪಂದ್ಯ ಫೆಬ್ರವರಿ 29ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ.
ಇಂಡೋ-ಕಿವೀಸ್ ಟೆಸ್ಟ್: ಸೋಲಿನ ಭೀತಿಯಲ್ಲಿ ಟೀಂ ಇಂಡಿಯಾ
ಮೂರನೇ ದಿನದಾಟದಂತ್ಯದ ವೇಳೆಗೆ ರಹಾನೆ(29) ಹಾಗೂ ವಿಹಾರಿ(15) ರನ್ ಕೆಲಕಾಲ ಪ್ರತಿರೋಧ ತೋರಿದ್ದರಾದರೂ, ಹೆಚ್ಚು ಹೆಚ್ಚುಹೊತ್ತು ಕ್ರೀಸ್‌ನಲ್ಲಿರಲು ಕಿವೀಸ್ ವೇಗಿಗಳು ಅವಕಾಶ ನೀಡಲಿಲ್ಲ. ಪಂತ್ ಬ್ಯಾಟಿಂಗ್ ಕೇವಲ 25 ರನ್‌ಗಳಿಗೆ ಸೀಮಿತವಾಯಿತು.
ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಮೊದಲು ಫೀಲ್ಡಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತ್ತು. ಮೊದಲ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ 165 ರನ್‌ಗಳಿಸಿ ಆಲೌಟ್ ಆಯಿತು. ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ತಂಡ 348 ರನ್ ಬಾರಿಸಿತು. ಇದರೊಂದಿಗೆ 183 ರನ್‌ಗಳ ಇನಿಂಗ್ಸ್ ಮುನ್ನಡೆ ಗಳಿಸಿತು. ಇನ್ನು ಬಾರೀ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ಮಯಾಂಕ್ ಅಗರ್‌ವಾಲ್ ಅರ್ಧಶತಕದ ಹೊರತಾಗಿಯೂ 191 ರನ್‌ಗಳನ್ನು ಗಳಿಸಿ ಕಿವೀಸ್‌ಗೆ ಸುಲಭ ಗುರಿ ನೀಡಿತು.
ನ್ಯೂಜಿಲೆಂಡ್ ಪರ ಟಿಮ್ ಸೌಥಿ 5 ವಿಕೆಟ್ ಪಡೆದರೆ, ಟ್ರೆಂಟ್ ಬೌಲ್ಟ್ 4 ಹಾಗೂ ಕಾಲಿನ್ ಡಿ ಗ್ರಾಂಡ್‌ಹೋಮ್ ಒಂದು ವಿಕೆಟ್ ಪಡೆದರು. ಪಂದ್ಯದಲ್ಲಿ ಒಟ್ಟು 9 ವಿಕೆಟ್ ಕಬಳಿಸಿದ ಟಿಮ್ ಸೌಥಿ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.