ಲಂಕಾ ಪ್ರವಾಸಕ್ಕೆ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಕಟ; ಮಾರಕ ವೇಗಿಗೆ ಬುಲಾವ್
ಲಂಕಾ ಎದುರಿನ ಟೆಸ್ಟ್ ಸರಣಿಗೆ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಕಟ
ಪಾಕ್ ತಂಡ ಕೂಡಿಕೊಂಡ ಮಾರಕ ವೇಗಿ ಶಾಹೀನ್ ಅಫ್ರಿದಿ
ಜುಲೈ ತಿಂಗಳಿನಲ್ಲಿ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿ
ಕರಾಚಿ(ಜೂ.17): ಶ್ರೀಲಂಕಾ ವಿರುದ್ದದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಬಲಿಷ್ಠ 16 ಆಟಗಾರರನ್ನೊಳಗೊಂಡ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ಮಾರಕ ವೇಗಿ ಶಾಹೀನ್ ಅಫ್ರಿದಿ ತಂಡ ಕೂಡಿಕೊಂಡಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಇಂದು ಲಂಕಾ ಪ್ರವಾಸಕ್ಕೆ ಪಾಕ್ ತಂಡವನ್ನು ಪ್ರಕಟಿಸಿದೆ. ಇನ್ನು ಇದೇ ವೇಳೆ ಇಬ್ಬರು ಅನ್‌ಕ್ಯಾಪ್ ಆಟಗಾರರಿಗೂ ತಂಡದಲ್ಲಿ ಸ್ಥಾನ ನೀಡಿದ್ದು, ಬ್ಯಾಟರ್ ಮೊಹಮ್ಮದ್ ಹೊರೈರಾ ಹಾಗೂ ಆಲ್ರೌಂಡರ್ ಅಮಿರ್ ಜಮಾಲ್ ಇದೇ ಮೊದಲ ಬಾರಿಗೆ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಬಾಬರ್ ಅಜಂ ನಾಯಕರಾಗಿ ಮುನ್ನಡೆಸಲಿದ್ದು, ತಂಡದಲ್ಲಿ ಹಲವು ಅನುಭವಿ ಹಾಗೂ ಯುವ ಆಟಗಾರರ ದಂಡೇ ಇದೆ. ಲಂಕಾ ಪ್ರವಾಸಕ್ಕೆ ಪಾಕ್ ತಂಡದಲ್ಲಿ ಮೊಹಮ್ಮದ್ ರಿಜ್ವಾನ್, ಅಬ್ದುಲ್ಲಾ ಶಫೀಕ್, , ಇಮಾಮ್ ಉಲ್ ಹಕ್, ಹಸನ್ ಅಲಿ ಹಾಗೂ ನಸೀಂ ಶಾ ತಂಡ ಕೂಡಿಕೊಂಡಿದ್ದಾರೆ. ಇನ್ನು ಎಡಗೈ ಮಾರಕ ವೇಗಿ ಶಾಹೀನ್ ಶಾ ಅಫ್ರಿದಿ ತಂಡ ಸೇರ್ಪಡೆ ಬಾಬರ್ ಅಜಂ ಪಡೆಯ ಆತ್ಮವಿಶ್ವಾಸ ಹೆಚ್ಚಿಸುವಂತೆ ಮಾಡಿದೆ.
"ವರ್ಷದ ಬಳಿಕ ನಾನು ಪಾಕಿಸ್ತಾನ ಟೆಸ್ಟ್ ತಂಡವನ್ನು ಕೂಡಿಕೊಂಡಿರುವುದಕ್ಕೆ ನಿಜಕ್ಕೂ ಸಂತೋಷವಾಗುತ್ತಿದೆ. ನಾನು ಟೆಸ್ಟ್ ಕ್ರಿಕೆಟ್ ಅನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆ. ಈ ಮಾದರಿಯ ಕ್ರಿಕೆಟ್‌ನಿಂದ ಹೊರಗುಳಿಯುವುದು ನನ್ನ ಪಾಲಿಗೆ ತುಂಬಾ ಬೇಸರದ ಸಂಗತಿಯಾಗಿತ್ತು" ಎಂದು ತಂಡ ಕೂಡಿಕೊಂಡ ಬಳಿಕ ಶಾಹೀನ್ ಅಫ್ರಿದಿ ಹೇಳಿದ್ದಾರೆ.
"ನಾನು ಶ್ರೀಲಂಕಾದಲ್ಲಿ ಗಾಯಗೊಂಡೆ, ಇದಾದ ಬಳಿಕ ತವರಿನ ಸಂಪೂರ್ಣ ಸೀಸನ್ ಮಿಸ್ ಮಾಡಿಕೊಂಡೆ. ಇದೀಗ ನಾನು ಅದೇ ತಂಡದ ಎದುರು ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದ್ದೇನೆ. ಇದರ ಜತೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 100 ವಿಕೆಟ್ ಸಾಧನೆ ಮಾಡಲು ಸಜ್ಜಾಗಿದ್ದೇನೆ. ನನ್ನ ಕಷ್ಟದ ಸಂದರ್ಭದಲ್ಲಿ ನನಗೆ ಬೆಂಬಲವಾಗಿ ನಿಂತ ಅಭಿಮಾನಿಗಳಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಹಾಗೂ ಹೊಸ ಸವಾಲು ಸ್ವೀಕರಿಸಲು ಎದುರು ನೋಡುತ್ತಿದ್ದೇನೆ ಎಂದು ಶಾಹೀನ್ ಅಫ್ರಿದಿ ಹೇಳಿದ್ದಾರೆ.
ಆಫ್ಘಾನಿಸ್ತಾನ ಎದುರು 546 ರನ್ ಅಂತರದಲ್ಲಿ ಟೆಸ್ಟ್ ಗೆದ್ದ ಬಾಂಗ್ಲಾದೇಶ..! 21ನೇ ಶತಮಾನದ ಅತಿದೊಡ್ಡ ಗೆಲುವು
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಭಾಗವಾಗಿ ಪಾಕಿಸ್ತಾನ ತಂಡವು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಲಂಕಾ ಪ್ರವಾಸ ಕೈಗೊಳ್ಳಲಿದೆ. ಲಂಕಾ ಪ್ರವಾಸದ ಸಿದ್ದತೆಗಾಗಿ ಜುಲೈ 03ರಂದು ಪಾಕ್ ತಂಡವು ಒಟ್ಟಾಗಿ ಅಭ್ಯಾಸ ನಡೆಸಲಿದ್ದು, ಜುಲೈ 09ರಂದ ಲಂಕಾಗೆ ಟೆಸ್ಟ್ ಸರಣಿಯನ್ನಾಡಲು ಪ್ರವಾಸ ಕೈಗೊಳ್ಳಲಿದೆ. ಲಂಕಾ ಪ್ರವಾಸದ ವೇಳಾಪಟ್ಟಿ ಇನ್ನೂ ಪ್ರಕಟವಾಗಿಲ್ಲ.
ಲಂಕಾ ಎದುರಿನ ಟೆಸ್ಟ್ ಸರಣಿಗೆ ಪಾಕಿಸ್ತಾನ ತಂಡ ಹೀಗಿದೆ ನೋಡಿ:
ಬಾಬರ್ ಅಜಂ(ನಾಯಕ), ಮೊಹಮ್ಮದ್ ರಿಜ್ವಾನ್(ಉಪನಾಯಕ&ವಿಕೆಟ್ ಕೀಪರ್), ಅಮಿರ್ ಜಮಾಲ್, ಅಬ್ದುಲ್ಲಾ ಶಫಿಕ್, ಅಬ್ರಾರ್ ಅಹಮ್ಮದ್, ಹಸನ್ ಅಲಿ, ಇಮಾಮ್ ಉಲ್ ಹಕ್, ಮೊಹಮ್ಮದ್ ಹುರೈರಾ, ಮೊಹಮ್ಮದ್ ನವಾಜ್, ನಸೀಂ ಶಾ, ನೂಮನ್ ಅಲಿ, ಸಲ್ಮಾನ್ ಅಲಿ ಆಘಾ, ಸರ್ಫರಾಜ್ ಅಹಮ್ಮದ್(ವಿಕೆಟ್ ಕೀಪರ್), ಸೌದ್ ಶಕೀಲ್, ಶಾಹೀನ್ ಅಫ್ರಿದಿ ಮತ್ತು ಶಾನ್ ಮಸೂದ್.