ಏಕಕಾಲದಲ್ಲಿ 3 ಮಾದರಿಯ ತಂಡ ಆಡಿಸುವ ಸಾಮರ್ಥ್ಯ ಭಾರತಕ್ಕಿದೆ ಎಂದ ಆಸೀಸ್ ಮಾರಕ ವೇಗಿ!
ಭಾರತಕ್ಕೆ ಮೂರು ತಂಡಗಳನ್ನು ಕಣಕ್ಕಿಳಿಸುವ ಸಾಮರ್ಥ್ಯವಿದೆ ಎಂದು ಮಿಚೆಲ್ ಸ್ಟಾರ್ಕ್ ಹೇಳಿದ್ದಾರೆ. ಐಪಿಎಲ್‌ನಿಂದ ಭಾರತೀಯ ಕ್ರಿಕೆಟಿಗರಿಗೆ ಮಾತ್ರ ಪ್ರಯೋಜನವಾಗಲಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಸಿಡ್ನಿ: ಒಂದೇ ಬಾರಿ ಟಿ20, ಏಕದಿನ ಹಾಗೂ ಟೆಸ್ಟ್ ತಂಡಗಳನ್ನು ಕಣಕ್ಕಿಳಿಸುವ ಸಾಮರ್ಥ್ಯ ಭಾರತಕ್ಕೆ ಮಾತ್ರ ಇದೆ ಎಂದು ಆಸ್ಟ್ರೇಲಿಯಾದ ತಾರಾ ವೇಗಿ ಮಿಚೆಲ್ ಸ್ಟಾರ್ಕ್ ಹೇಳಿದ್ದಾರೆ.
ಈ ಬಗ್ಗೆ ಯೂಟ್ಯೂಬ್ ಚಾನೆಲೊಂದರಲ್ಲಿ ಮಾತನಾಡಿರುವ ಅವರು, ‘ಒಂದೇ ದಿನ ಟೆಸ್ಟ್ ತಂಡ, ಏಕದಿನ ತಂಡ ಹಾಗೂ ಟಿ20ಗೆ ಮತ್ತೊಂದು ತಂಡವನ್ನು ಆಡಿಸುವ ಸಾಮರ್ಥ್ಯ ಭಾರತಕ್ಕಿದೆ. ಆಸ್ಟ್ರೇಲಿಯಾದಲ್ಲಿ ಟೆಸ್ಟ್, ಇಂಗ್ಲೆಂಡ್‌ನಲ್ಲಿ ಏಕದಿನ, ದಕ್ಷಿಣ ಆಫ್ರಿಕಾದಲ್ಲಿ ಟಿ20 ತಂಡವನ್ನು ಭಾರತ ಕಣಕ್ಕಿಳಿಸಬಹುದು. ಅಷ್ಟೊಂದು ಸ್ಪರ್ಧಾತ್ಮಕ ತಂಡ ಭಾರತ. ಈ ಸಾಮರ್ಥ್ಯ ಬೇರೆ ಯಾವುದೇ ದೇಶಕ್ಕೆ ಇಲ್ಲ’ ಎಂದು ಶ್ಲಾಘಿಸಿದ್ದಾರೆ.
ಇನ್ನು, ಐಪಿಎಲ್‌ನಿಂದ ಭಾರತದ ಸೀಮಿತ ಓವರ್ ಕ್ರಿಕೆಟಿಗರಿಗೆ ಅನುಕೂಲ ಆಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ವಿಶ್ವದ ಎಲ್ಲಾ ಕಡೆ ಆಡುತ್ತೇವೆ. ಆದರೆ ಭಾರತೀಯರು ಕೇವಲ ಐಪಿಎಲ್ ಆಡುತ್ತಾರೆ’ ಎಂದರು.
ಇದನ್ನೂ ಓದಿ: WPL 2025: ಗುಜರಾತ್ ಜೈಂಟ್ಸ್‌ನ ಮಣಿಸಿ 2ನೇ ಸಲ ಮುಂಬೈ ಇಂಡಿಯನ್ಸ್ ಫೈನಲ್‌ಗೆ!
'ಐಪಿಎಲ್‌ನಿಂದ ಕೇವಲ ಭಾರತೀಯ ಕ್ರಿಕೆಟಿಗರಿಗೆ ಮಾತ್ರ ಪ್ರಯೋಜನವಾಗಲಿದೆ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಭಾರತೀಯ ಆಟಗಾರರು ಕೇವಲ ಐಪಿಎಲ್ ಟೂರ್ನಿಯಲ್ಲಿ ಮಾತ್ರ ಭಾಗವಹಿಸುತ್ತಾರೆ. ಆದರೆ ಉಳಿದ ಕ್ರಿಕೆಟಿಗರು ಜಗತ್ತಿನ ನಾನಾ ಟಿ20 ಲೀಗ್‌ಗಳಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಸ್ಟಾರ್ಕ್ ಹೇಳಿದ್ದಾರೆ.
ಇನ್ನು ಭಾರತ ತಂಡ ಈ ಬಾರಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿದ್ದು ತಮಗೆ ಅಷ್ಟೇನೂ ಅಚ್ಚರಿ ಮೂಡಿಸಿಲ್ಲ ಎಂದಿದ್ದಾರೆ. ಆದರೆ ಈಗಿರುವ ಭಾರತ ತಂಡವು ಇಲ್ಲಿಯವರೆಗಿನ ತಂಡಗಳ ಪೈಕಿ ಶ್ರೇಷ್ಠ ತಂಡವೇ ಎಂದು ಕೇಳಿದರೆ ತಾವು ಇಲ್ಲ ಎನ್ನುವುದಾಗಿ ಹೇಳಿದ್ದಾರೆ. ' ಪ್ರಾಮಾಣಿಕವಾಗಿ ಹೇಳಬೇಕೆಂದರೆ ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಕಪ್ ಗೆದ್ದಿದ್ದು ಅಷ್ಟೇನೂ ಅಚ್ಚರಿ ಮೂಡಿಸಲಿಲ್ಲ. ನಿಜ ಹೇಳಬೇಕೆಂದರೆ ನಾನು ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಯಾವ ಪಂದ್ಯವನ್ನು ಪೂರ್ಣವಾಗಿ ನೋಡಿಲ್ಲ. ಆಸ್ಟ್ರೇಲಿಯಾ ಆಡಿದ ಕೆಲವು ಪಂದ್ಯಗಳ ಕೆಲವು ತುಣುಕುಗಳನ್ನಷ್ಟೇ ನೋಡಿದೆ. ನಾನು ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ತಂಡದಲ್ಲಿ ವರುಣ್ ಚಕ್ರವರ್ತಿಯ ಜತೆಗೆ ಆಡಿದ್ದೇನೆ. ಅವರೊಬ್ಬ ಅದ್ಭುತ ಪ್ರತಿಭೆ ಎಂದು ಬಣ್ಣಿಸಿದ್ದಾರೆ.
ಇದನ್ನೂ ಓದಿ: ಅಜಿಂಕ್ಯ ರಹಾನೆ ಕ್ಯಾಪ್ಟನ್ ಮಾಡಿ ಮಹಾ ಯಡವಟ್ಟು ಮಾಡಿತಾ ಕೆಕೆಆರ್?
ಸದ್ಯ ಈಗಿರುವ ಭಾರತ ತಂಡವು ಏಕದಿನ ಕ್ರಿಕೆಟ್ ಮಾದರಿಯ ಶ್ರೇಷ್ಠ ತಂಡವೇ ಎಂದು ಕೇಳಿದರೆ ಟೀಂ ಇಂಡಿಯಾ ಅಭಿಮಾನಿಗಳು ಹೌದು ಎನ್ನಬಹುದು, ಆದರೆ ನನ್ನ ಕೇಳಿದರೆ ಇಲ್ಲ ಎನ್ನುತ್ತೇನೆ ಎಂದು ಮಿಚೆಲ್ ಸ್ಟಾರ್ಕ್ ಅಭಿಪ್ರಾಯಪಟ್ಟಿದ್ದಾರೆ.
ಸೆಮೀಸ್‌ನಲ್ಲೇ ಮುಗ್ಗರಿಸಿದ್ದ ಆಸ್ಟ್ರೇಲಿಯಾ: 8 ತಂಡಗಳು ಪಾಲ್ಗೊಂಡಿದ್ದ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸ್ಟೀವ್ ಸ್ಮಿತ್ ನೇತೃತ್ವದ ಆಸ್ಟ್ರೇಲಿಯಾ ತಂಡವು ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾಗೆ ಶರಣಾಗುವ ಮೂಲಕ ತನ್ನ ಅಭಿಯಾನವನ್ನು ಮುಗಿಸಿತ್ತು. ಆಸೀಸ್ ತ್ರಿವಳಿ ವೇಗಿಗಳಾದ ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್‌ವುಡ್ ಹಾಗೂ ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯ ಹೊರತಾಗಿಯೂ ಅಂತಿಮ ನಾಲ್ಕರ ಘಟ್ಟಕ್ಕೇರುವಲ್ಲಿ ಕಾಂಗರೂ ಪಡೆ ಯಶಸ್ವಿಯಾಗಿತ್ತು. ಇನ್ನು ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವು ಸೋಲು ಕಾಣುತ್ತಿದ್ದಂತೆಯೇ ಸ್ಟೀವ್ ಸ್ಮಿತ್ ಅಂತಾರಾಷ್ಟ್ರೀಯ ಏಕದಿನ ಮಾದರಿಗೆ ವಿದಾಯ ಘೋಷಿಸಿದ್ದರು.