ಲಂಡನ್‌(ಫೆ.03): ಭಾರತ ವಿರುದ್ದದ 4 ಪಂದ್ಯಗಳ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಇಂಗ್ಲೆಂಡ್ ಪಾಳಯದಲ್ಲಿ ಸಿಹಿ ಸುದ್ದಿಯೊಂದು ಹೊರಬಿದ್ದಿದ್ದು, ತಂಡದ ಯುವ ಬ್ಯಾಟ್ಸ್‌ಮನ್‌ ಓಲಿ ಪೋಪ್‌ ಸಂಪೂರ್ಣ ಫಿಟ್‌ ಆಗಿದ್ದು, ಆಯ್ಕೆಗೆ ಲಭ್ಯರಿದ್ದಾರೆ.

2020ರಲ್ಲಿ ಪಾಕಿಸ್ತಾನ ವಿರುದ್ದದ ಟೆಸ್ಟ್ ಸರಣಿ ವೇಳೆ ಎಡಗೈ ಭುಜದ ನೋವಿಗೆ ತುತ್ತಾಗಿದ್ದರು. ಇದೀಗ ಓಲಿ ಫೋಪ್ ಸಂಪೂರ್ಣ ಫಿಟ್‌ ಆಗಿದ್ದಾರೆ. ಇಂಗ್ಲೆಂಡ್‌ ಕ್ರಿಕೆಟ್ ವೈದ್ಯಕೀಯ ಸಿಬ್ಬಂದಿ ಈ ವಿಚಾರ ಖಚಿತಪಡಿಸಿದ್ದು, ಆಯ್ಕೆಗೆ ಪೋಪ್‌ ಲಭ್ಯರಿದ್ದಾರೆ ಎಂದು ತಿಳಿಸಿದೆ.

23 ವರ್ಷದ ಓಲಿ ಪೋಪ್ ಕಳೆದ ಎರಡು ದಿನಗಳಿಂದ ಸಂಪೂರ್ಣ ತಂಡದೊಂದಿಗೆ ಅಭ್ಯಾಸ ನಡೆಸುತ್ತಿದ್ದಾರೆ ಎಂದು ಇಂಗ್ಲೆಂಡ್ ತಂಡ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಓಲಿ ಪೋಪ್‌ ಪುನಶ್ಚೇತನದಲ್ಲಿದ್ದರೂ ಸಹ ಲಂಕಾ ಪ್ರವಾಸದಲ್ಲಿ ತಂಡದೊಟ್ಟಿಗೆ ತೆರಳಿದ್ದರು. ಇಂಗ್ಲೆಂಡ್‌ ಕ್ರಿಕೆಟ್‌ ತಂಡಕ್ಕೆ ಓಲಿ ಪೋಪ್‌ ಲಭ್ಯತೆ ಮಧ್ಯಮ ಕ್ರಮಾಂಕದಲ್ಲಿ ಮತ್ತಷ್ಟು ಆಯ್ಕೆಗಳು ಸಿಗುವಂತೆ ಮಾಡಿದೆ. ಈಗಾಗಲೇ ಮೋಯಿನ್ ಅಲಿ ಹಾಗೂ ಡಾನ್ ಲಾರೇನ್ಸ್‌ ಸಹಾ ಇಂಗ್ಲೆಂಡ್‌ ಮಧ್ಯಮ ಕ್ರಮಾಂಕದ ಮೇಲೆ ಕಣ್ಣಿಟ್ಟಿದ್ದಾರೆ.  

ಭಾರತ-ಇಂಗ್ಲೆಂಡ್‌ 2ನೇ ಟೆಸ್ಟ್‌: ಪ್ರೇಕ್ಷಕರಿಗೆ ಪ್ರವೇಶ?

ಭಾರತ-ಇಂಗ್ಲೆಂಡ್‌ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿಯು ಫೆಬ್ರವರಿ 05ರಿಂದ ಆರಂಭವಾಗಲಿದೆ. ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಚೆನ್ನೈನ ಚೆಪಾಕ್‌ ಮೈದಾನ ಆತಿಥ್ಯವನ್ನು ವಹಿಸಿದ್ದರೆ, ಕೊನೆಯ ಎರಡು ಟೆಸ್ಟ್‌ ಪಂದ್ಯಗಳಿಗೆ ಅಹಮದಾಬಾದ್‌ನ ಸರ್ದಾರ್‌ ಪಟೇಲ್‌ ಮೈದಾನ ಆತಿಥ್ಯ ವಹಿಸಿದೆ.