Rohit Sharma: ಸಿಕ್ಸರ್‌ಗಳ ವಿಶ್ವದಾಖಲೆ ನಿರ್ಮಿಸಿದ ಹಿಟ್‌ಮ್ಯಾನ್!
ಅಫ್ಘಾನಿಸ್ತಾನ ವಿರುದ್ಧ ಭರ್ಜರಿ ಅರ್ಧಶತಕ ಬಾರಿಸಿರುವ ಹಿಟ್‌ಮ್ಯಾನ್ ರೋಹಿತ್ ಶರ್ಮ ಇದೇ ಹಾದಿಯಲ್ಲಿ ಅಪರೂಪದ ವಿಶ್ವದಾಖಲೆಯನ್ನು ನಿರ್ಮಾಣ ಮಾಡಿದ್ದಾರೆ.
ನವದೆಹಲಿ (ಅ.11): ಟೀಂ ಇಂಡಿಯಾ ನಾಯಕ, ಹಿಟ್‌ಮ್ಯಾನ್ ರೋಹಿತ್ ಶರ್ಮ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಪರೂಪದ ವಿಶ್ವದಾಖಲೆಯನ್ನು ನಿರ್ಮಿಸಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ ಬ್ಯಾಟ್ಸ್‌ಮನ್ ಎನ್ನುವ ಶ್ರೇಯಕ್ಕೆ ಅವರು ಭಾಜನರಾಗಿದ್ದಾರೆ. ಟೆಸ್ಟ್, ಟಿ20 ಹಾಗೂ ಏಕದಿನ ಒಟ್ಟಾರೆಯಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ನವೀನ್ ಉಲ್ ಹಕ್‌ಗೆ ತಮ್ಮ 2ನೇ ಸಿಕ್ಸರ್ ಬಾರಿಸಿದ ವೇಳೆಗೆ ರೋಹಿತ್ ಶರ್ಮ, ಕ್ರಿಸ್ ಗೇಲ್ ಅವರನ್ನು ಹಿಂದಿಕ್ಕಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಪ್ರಸ್ತುತ ರೋಹಿತ್ ಶರ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 555 ಸಿಕ್ಸರ್‌ಗಳನ್ನು ಬಾರಿಸಿದ್ದರೆ, ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ 553 ಸಿಕ್ಸರ್‌ಗಳೊಂದಿಗೆ 2ನೇ ಸ್ಥಾನಕ್ಕೆ ಇಳಿದಿದ್ದಾರೆ. ಪಾಕಿಸ್ತಾನದ ಶಾಹೀದ್ ಅಫ್ರಿದಿ 476 ಸಿಕ್ಸರ್‌ಗಳೊಂದಿಗೆ 3ನೇ ಸ್ಥಾನ, ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕ್ಕಲಂ 398 ಸಿಕ್ಸರ್‌ಗಳೊಂದಿಗೆ ನಾಲ್ಕನೇ ಸ್ಥಾನ ಹಾಗೂ ಮಾರ್ಟಿನ್ ಗುಪ್ಟಿಲ್ 393 ಸಿಕ್ಸರ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.
ಕ್ರಿಸ್ ಗೇಲ್ 553 ಸಿಕ್ಸರ್‌ಗಳನ್ನು ಬಾರಿಸಲು 551 ಇನ್ನಿಂಗ್ಸ್ ಆಡಿದರೆ, ರೋಹಿತ್ ಶರ್ಮ ಈ ದಾಖಲೆಯನ್ನು ಮುರಿಯಲು ಕೇವಲ 473 ಇನ್ನಿಂಗ್ಸ್ ಆಡಿದ್ದಾರೆ. ಅದಲ್ಲದೆ, ರೋಹಿತ್ ಶರ್ಮ 2023ರಲ್ಲಿ ಒಟ್ಟು 50 ಸಿಕ್ಸರ್ ಅನ್ನು ಈ ವೇಳೆ ಪೂರೈಸಿದ್ದಾರೆ. 2017, 2018, 2019 ಹಾಗೂ 2023ರ ಒಂದೇ ವರ್ಷದಲ್ಲಿ ರೋಹಿತ್ ಶರ್ಮ 50 ಸಿಕ್ಸರ್‌ಗಳನ್ನು ಪೂರೈಸಿದ್ದಾರೆ. ಒಂದೇ ವರ್ಷದಲ್ಲಿ 50 ಹಾಗೂ ಅದಕ್ಕಿಂತ ಹೆಚ್ಚು ಸಿಕ್ಸರ್‌ಗಳನ್ನು ನಾಲ್ಕು ಬಾರಿ ಸಾಧಿಸಿದ ಏಕೈಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ಆಗಿದ್ದಾರೆ.