ನವೆಂಬರ್ 19 ರಂದು ಅಹಮದಾಬಾದ್‌ನಲ್ಲಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವಿಶ್ವಕಪ್ 2023 ರ ಫೈನಲ್‌ಗೆ ಮೊದಲು ಭರ್ಜರಿ ಸಮಾರೋಪ ಸಮಾರಂಭ ನಡೆಯಲಿದೆ. ಐಎಎಫ್‌ ವತಿಯಿಂದ ಏರ್‌ಶೋ ಕೂಡ ನಡೆಯಲಿದೆ ಎಂದು ವರದಿಯಾಗಿದೆ. 

ಮುಂಬೈ (ನ.16): ಸೆಮಿಫೈನಲ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್‌ಅನ್ನು ಸೋಲಿಸಿದ್ದೇ, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನ.19 ರಂದು ನಡೆಯಲಿರುವ ವಿಶ್ವಕಪ್‌ ಫೈನಲ್‌ ಪಂದ್ಯಕ್ಕೆ ಸಿದ್ಧತೆಗಳು ಬಹಳ ಜೋರಾಗಿ ನಡೆಯುತ್ತಿದೆ. ಇದೀಗ ಬಂದಿರುವ ವರದಿಗಳ ಪ್ರಕಾರ, ವಿಶ್ವಕಪ್‌ನ ಸಮಾರೋಪ ಸಮಾರಂಭದಲ್ಲಿ ಭಾರತೀಯ ವಾಯುಸೇನೆಯಿಂದ ಏರ್‌ಶೋ ಕೂಡ ನಡೆಯಲಿದೆ ಎಂದು ವರದಿಯಾಗಿದೆ. ಬುಧವಾರ ಮುಂಬೈನಲ್ಲಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್‌ ತಂಡವನ್ನು70 ರನ್‌ಗಳಿಂದ ಸೋಲಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಮೂರನೇ ಬಾರಿಗೆ ಫೈನಲ್‌ಗೆ ಪ್ರವೇಶಿಸಿದೆ. ಫೈನಲ್‌ ಪಂದ್ಯಕ್ಕೂ ಮುನ್ನ ಏರ್‌ಶೋ ನಡೆಯುವ ಸಾಧ್ಯತೆ ದಟ್ಟವಾಗಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್‌ ಪಂದ್ಯ ಪ್ರೇಕ್ಷಕರ ಪಾಲಿಗೆ ಬಹಳ ಸ್ಮರಣೀಯವಾಗಿರಬೇಕು ಎನ್ನುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನೂ ಮಾಡಲಾಗುತ್ತಿದೆ. ಭಾರತ ಈಗಾಗಲೇ ಫೈನಲ್‌ ಪಂದ್ಯ ಆಡಲು ಸಿದ್ಧವಾಗಿದ್ದರೆ, ಆಸ್ಟ್ರೇಲಿಯಾ ಅಥವಾ ದಕ್ಷಿಣ ಆಫ್ರಿಕಾ ನಡುವೆ ಯಾರು ಎದುರಾಳಿ ಎನ್ನುವುದು ಇನ್ನು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.

ಮುಂಬೈನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ಭಾರತವು ಟೂರ್ನಿಯಲ್ಲಿ ಅಜೇಯವಾಗಿ ಫೈನಲ್‌ವರೆಗೆ ಏರಿದೆ. ಈ ಬಾರಿಯ ವಿಶ್ವಕಪ್‌ಗೆ ಆರಂಭೋತ್ಸವ ಸಮಾರಂಭ ನಡೆದಿರಲಿಲ್ಲ. ಆದರೆ, ಫೈನಲ್‌ನಲ್ಲಿ ಆತಿಥೇಯ ಭಾರತ ಕೂಡ ಇರುವ ಕಾರಣ ಸಮಾರೋಪವನ್ನು ಭರ್ಜರಿಯಾಗಿ ನಡೆಸಲು ಬಿಸಿಸಿಐ ಪ್ಲ್ಯಾನ್‌ ಮಾಡಿದೆ. ನಾಲ್ಕು ನೆಟ್‌ ವಿಮಾನಗಳು ಈಗಾಗಲೇ ನರೇಂದ್ರ ಮೋದಿ ಸ್ಟೇಡಿಯಂನ ಆಗಸದಲ್ಲಿ ಹಾರಾಟದ ರಿಹರ್ಸಲ್‌ ಆರಂಭಿಸಿದೆ. ಏರ್‌ಶೋಗಾಗಿ ಇವು ತಾಲೀಮು ನಡೆಸುತ್ತಿದೆ.

ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ಏರ್ ಶೋ ಆಯೋಜಿಸಲು ಸ್ಥಳೀಯ ಆಡಳಿತದ ಅನುಮತಿ ಕೂಡ ಕೇಳಲಾಗಿದೆ. ಐಎಎಫ್‌ ಕಡೆಯಿಂದ ಏರ್‌ ಶೋ ಮಾತ್ರವಲ್ಲದೆ, ಖ್ಯಾತನಾಮ ಬಾಲಿವುಡ್‌ ಸೆಲೆಬ್ರಿಟಿಗಳು ಕೂಡ ವಿಶ್ವಕಪ್‌ ಫೈನಲ್‌ ಪಂದ್ಯವನ್ನು ವೀಕ್ಷಣೆ ಮಾಡಲಿದ್ದಾರೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಫೈನಲ್‌ ಪಂದ್ಯವನ್ನು ವೀಕ್ಷಿಸಲು ಸ್ಟೇಡಿಯಂಗೆ ಆಗಮಿಸಲಿದ್ದಾರೆ.

ವಿಶ್ವಕಪ್ ಫೈನಲ್ ಪಂದ್ಯಕ್ಕೆ ಪ್ರಧಾನಿ ಮೋದಿ-ಧೋನಿಗೆ ಆಹ್ವಾನ, ಫ್ಯಾನ್ಸ್‌ಗೆ ವರ್ಣರಂಜಿತ ಕಾರ್ಯಕ್ರಮ!

ಬೆಳಗ್ಗೆ 7 ಗಂಟೆಯಿಂದ ಲೈವ್‌ ಕವರೇಜ್‌: ಇನ್ನು ವಿಶ್ವಕಪ್‌ನ ನೇರಪ್ರಸಾರ ವಾಹಿನಿಯಾಗಿರುವ ಸ್ಟಾರ್‌ಸ್ಪೋರ್ಟ್ಸ್‌, ಮಧ್ಯಾಹ್ನದಿಂದ ಆರಂಭವಾಗಲಿರುವ ಪಂದ್ಯಕ್ಕೆ ಬೆಳಗ್ಗೆ 7 ಗಂಟೆಯಿಂದಲೇ ಅಹಮದಾಬಾದ್‌ನಿಂದ ಲೈವ್‌ ಕವರೇಜ್‌ ಆರಂಭಿಸಲಿದೆ. ಈ ಬಗ್ಗೆ ಸ್ವತಃ ಸ್ಟಾರ್‌ ಸ್ಪೋರ್ಟ್ಸ್‌ ಕೂಡ ಮಾಹಿತಿ ನೀಡಿದೆ. ಸಾಮಾನ್ಯವಾಗಿ ವಿಶ್ವಕಪ್‌ ಪಂದ್ಯ 2 ಗಂಟೆಗೆ ಆರಂಭವಾದರೆ, ಮಧ್ಯಾಹ್ಮ 12 ರಿಂದ ಸ್ಟಾರ್‌ ಸ್ಪೋರ್ಟ್ಸ್‌ ತನ್ನ ಲೈವ್‌ ಕವರೇಜ್‌ ಆರಂಭ ಮಾಡುತ್ತಿತ್ತು. ಆದರೆ, ವಿಶ್ವಕಪ್‌ ಫೈನಲ್‌ ಪಂದ್ಯ ಆರಂಭವಾಗುವ 7 ಗಂಟೆ ಮುನ್ನ ಲೈವ್‌ ಕವರೇಜ್‌ ಆರಂಭಿಸಲಿದೆ.

ಸೆಮಿಫೈನಲ್ ಪಂದ್ಯದ ಬೆಸ್ಟ್ ಫೀಲ್ಡರ್ ಅವಾರ್ಡ್‌ನಲ್ಲಿ ಟ್ವಿಸ್ಟ್, ಬಾಜಿರಾವ್‌ಗೆ ಸಿಕ್ಕಿತಾ ಮೆಡಲ್?