ವೈಟ್‌ವಾಷ್: ಕಿವೀಸ್ ಟೆಸ್ಟ್‌ನಲ್ಲೂ ಟೀಂ ಇಂಡಿಯಾಗೆ ಮುಖಭಂಗ
ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಈ ಮೂಲಕ ಕಿವೀಸ್ ಎದುರು ವೈಟ್‌ವಾಷ್ ಅನುಭವಿಸಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.
ಕ್ರೈಸ್ಟ್‌ಚರ್ಚ್(ಮಾ.02): ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದ್ದ ನ್ಯೂಜಿಲೆಂಡ್, ಇದೀಗ ವಿಶ್ವ ಟೆಸ್ಟ್ ನಂ.1 ಶ್ರೇಯಾಂಕಿತ ತಂಡ ಟೀಂ ಇಂಡಿಯಾ ಎದುರು ವೈಟ್‌ವಾಷ್ ಸಾಧಿಸಿದೆ. ಎರಡನೇ ಟೆಸ್ಟ್ ಪಂದ್ಯವನ್ನು ನ್ಯೂಜಿಲೆಂಡ್ ತಂಡ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
2ನೇ ಟೆಸ್ಟ್: ಮತ್ತೊಂದು ಸೋಲಿನ ಭೀತಿಯಲ್ಲಿ ಟೀಂ ಇಂಡಿಯಾ
ಗೆಲ್ಲಲು 132 ರನ್‌ಗಳ ಗುರಿ ಪಡೆದ ನ್ಯೂಜಿಲೆಂಡ್ ಮತ್ತೊಮ್ಮೆ ಉತ್ತಮ ಆರಂಭ ಪಡೆಯಿತು. ಟಾಮ್ ಲಾಥಮ್(52) ಹಾಗೂ ಟಾಮ್ ಬ್ಲಂಡೆಲ್(55) ಶತಕದ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ ಕಿವೀಸ್ 103 ರನ್‌ಗಳಿಸಿದರು. ಈ ಜೋಡಿಯನ್ನು ಉಮೇಶ್ ಯಾದವ್ ಈ ಜೋಡಿಯನ್ನು ಬೇರ್ಪಡಿಸಿದರು. ಇದಾದ ಬಳಿಕ ಜಸ್ಪ್ರೀತ್ ಬುಮ್ರಾ 2 ವಿಕೆಟ್ ಪಡೆದರಾದರೂ ಭಾರತವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.
ಎರಡನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 90 ರನ್ ಬಾರಿಸಿದ್ದ ಟೀಂ ಇಂಡಿಯಾ, ಮೂರನೇ ದಿನದಾಟದ ಆರಂಭದಲ್ಲೇ 124 ರನ್ ಗಳಿಸಿ ತನ್ನ ಹೋರಾಟ ಅಂತ್ಯಗೊಳಿಸಿತು. ಪಂತ್, ಜಡೇಜಾ ಹಾಗೂ ವಿಹಾರಿ ತಂಡಕ್ಕೆ ಆಸರೆಯಾಗಬಲ್ಲರು ಎನ್ನುವ ನಿರೀಕ್ಷೆ ಹುಸಿಯಾಯಿತು. ನ್ಯೂಜಿಲೆಂಡ್ ಪರ ಟ್ರೆಂಟ್ ಬೋಲ್ಟ್ 4 ವಿಕೆಟ್ ಪಡೆದರೆ, ಟಿಮ್ ಸೌಥಿ 3, ಗ್ರಾಂಡ್‌ಹೋಮ್ ಹಾಗೂ ವ್ಯಾಗ್ನರ್ ತಲಾ ಒಂದೊಂದು ವಿಕೆಟ್ ಪಡೆದರು.
ಗೆಲುವಿನೊಂದಿಗೆ ಆರಂಭ ಸೋಲಿನೊಂದಿಗೆ ಮುಕ್ತಾಯ: ಜನವರಿಯಲ್ಲಿ ಕೊನೆಯಲ್ಲಿ ಟೀಂ ಇಂಡಿಯಾ, ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿತ್ತು. ಉಭಯ ತಂಡಗಳು ಆರಂಭದಲ್ಲಿ 5 ಪಂದ್ಯಗಳ ಟಿ20 ಸರಣಿಯನ್ನಾಡಿದ್ದವು. 5 ಪಂದ್ಯಗಳ ಟಿ20 ಸರಣಿಯನ್ನು ಟೀಂ ಇಂಡಿಯಾ 5-0 ಅಂತರದಲ್ಲಿ ವೈಟ್‌ವಾಷ್ ಮಾಡಿತ್ತು. ಇದಾದ ಬಳಿಕ 3 ಪಂದ್ಯಗಳ ಏಕದಿನ ಸರಣಿಯನ್ನು ನ್ಯೂಜಿಲೆಂಡ್ ತಂಡ ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು. ಇದೀಗ ಟೆಸ್ಟ್ ಸರಣಿಯನ್ನು ಕಿವೀಸ್ ಕೈವಶ ಮಾಡಿಕೊಂಡಿದೆ. ಹೀಗಾಗಿ ಟೀಂ ಇಂಡಿಯಾ ಕಿವೀಸ್ ಪ್ರವಾಸವನ್ನು ಗೆಲುವಿನಿಂದ ಆರಂಭಿಸಿ ಸೋಲಿನೊಂದಿಗೆ ಮುಗಿಸಿದೆ.
ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸಿ, ಬ್ಯಾಟಿಂಗ್‌ನಲ್ಲೂ ಉಪಯುಕ್ತ ಕಾಣಿಕೆ ನೀಡಿದ ಕೈಲ್ ಜಾಮಿಸನ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರೆ, 2 ಪಂದ್ಯಗಳ ಸರಣಿಯಲ್ಲಿ 14 ವಿಕೆಟ್ ಕಬಳಿಸಿ ಮಿಂಚಿದ ಟಿಮ್ ಸೌಥಿ ಸರಣಿಶ್ರೇಷ್ಠ ಪ್ರಶಸ್ತಿ ಗಳಿಸಿದರು.