ಕ್ರೈಸ್ಟ್‌ಚರ್ಚ್(ಮಾ.01): ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲೂ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳ ಪೆವಿಲಿಯನ್ ಪರೇಡ್ ಮುಂದುವರೆದಿದೆ. ಎರಡನೇ ದಿನದಾಟದಂತ್ಯಕ್ಕೆ ಟೀಂ ಇಂಡಿಯಾ 6 ವಿಕೆಟ್ ಕಳೆದುಕೊಂಡು 90 ರನ್ ಬಾರಿಸಿದೆ. ಇದರೊಂದಿಗೆ ಒಟ್ಟಾರೆ 97 ರನ್‌ಗಳ ಮುನ್ನಡೆ ಪಡೆದಿದೆ. ಒಂದೇ ದಿನ ಉಭಯ ತಂಡಗಳ ಒಟ್ಟು 16 ವಿಕೆಟ್‌ಗಳು ಉರುಳಿವೆ. 

ಶಮಿ-ಬುಮ್ರಾ ಝಲಕ್, ನ್ಯೂಜಿಲೆಂಡ್ 235ಕ್ಕೆ ಆಲೌಟ್

ನ್ಯೂಜಿಲೆಂಡ್ ತಂಡವನ್ನು 235 ರನ್‌ಗಳಿಗೆ ನಿಯಂತ್ರಿಸಿ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು.  ಮಯಾಂಕ್ ಅಗರ್‌ವಾಲ್ 3 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ್ದ ಪೃಥ್ವಿ ಶಾ ಆಟ ಕೆವಲ 14 ರನ್‌ಗಳಿಗೆ ಸೀಮಿತವಾಯಿತು. ಇನ್ನು ನಾಯಕ ವಿರಾಟ್ ಕೊಹ್ಲಿ 14 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.  ಇದರೊಂದಿಗೆ ಕಿವೀಸ್ ಪ್ರವಾಸದ ಕೊನೆಯ ಇನಿಂಗ್ಸ್‌ನಲ್ಲಾದರೂ ಕೊಹ್ಲಿ ಅರ್ಧಶತಕ ಸಿಡಿಸಬಹುದು ಎನ್ನುವ ನಿರೀಕ್ಷೆ ಹುಸಿ ಮಾಡಿದರು. 

ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ನೆಲಕಚ್ಚಿ ಆಡುವ ಪ್ರಯತ್ನ ಮಾಡಿದರಾದರೂ, ಬೃಹತ್ ಮೊತ್ತ ಗಳಿಸುವ ಪೂಜಾರ ಕನಸಿಗೆ ಬೋಲ್ಟ್ ತಣ್ಣೀರೆರಚಿದರು. ಪೂಜಾರ 88 ಎಸೆತಗಳಲ್ಲಿ 2 ಬೌಂಡರಿ ಸಹಿತ 24 ರನ್ ಗಳಿಸಿ ಬೌಲ್ಟ್ ಬೌಲಿಂಗ್‌ನಲ್ಲಿ ಬೋಲ್ಡ್ ಆಗಿ ಪೆವಿಲಿಯನ್ ಸೇರಿದರು. ಉಪನಾಯಕ ರಹಾನೆ ಆಟ 9 ರನ್‌ಗಳಿಗೆ ಸೀಮಿತವಾಯಿತು. ನೈಟ್ ವಾಚ್‌ಮನ್ ಉಮೇಶ್ ಯಾದವ್ 1 ರನ್‌ಗಳಿಸಿ ಬೌಲ್ಟ್‌ಗೆ ವಿಕೆಟ್ ಒಪ್ಪಿಸಿದರು. ಇದೀಗ ಹನುಮ ವಿಹಾರಿ(5) ಹಾಗೂ ರಿಷಭ್ ಪಂತ್(1) ಕ್ರೀಸ್ ಕಾಯ್ದುಕೊಂಡಿದ್ದಾರೆ. 

ಇದಕ್ಕೂ ಮೊದಲು  ವಿಕೆಟ್ ನಷ್ಟವಿಲ್ಲದೇ 63 ರನ್ ಬಾರಿಸಿದ್ದ ನ್ಯೂಜಿಲೆಂಡ್ ತಂಡ ಟೀಂ ಇಂಡಿಯಾ ವೇಗಿಗಳ ದಾಳಿಗೆ ಕುಸಿಯಿತು. ಮೊಹಮ್ಮದ್ ಶಮಿ 4, ಬುಮ್ರಾ 3, ಜಡೇಜಾ 2 ವಿಕೆಟ್ ಕಬಳಿಸುವ ಮೂಲಕ ಕಿವೀಸ್ ಪಡೆಯನ್ನು 235 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು. ಟಾಮ್ ಲಾಥಮ್(52), ಕೈಲ್ ಜಾಮಿಸನ್(49) ಹೊರತುಪಡಿಸಿ ಉಳಿದ್ಯಾವ ಆಟಗಾರರು ಹೆಚ್ಚು ಪ್ರತಿರೋಧ ತೋರಲಿಲ್ಲ.
 

ಮಾರ್ಚ್ 1 ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ