ಲಾರ್ಡ್ಸ್‌ನಲ್ಲಿ ಗಂಗೂಲಿ ದಾಖಲೆ ಮುರಿದ ಡೆವೊನ್ ಕಾನ್ವೇ..!
* ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ದ್ವಿಶತಕ ಬಾರಿಸಿದ ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್‌ಮನ್ ಕಾನ್‌ವೇ
* ಡೆವೊನ್ ಕಾನ್ವೇ ಇಂಗ್ಲೆಂಡ್ ಎದುರು ದ್ವಿಶತಕ ಬಾರಿಸಿ ದಾಖಲೆ ನಿರ್ಮಾಣ
* ಲಾರ್ಡ್ಸ್ ಮೈದಾನದಲ್ಲಿ ಚೊಚ್ಚಲ ಪಂದ್ಯದಲ್ಲೇ ದ್ವಿಶತಕ ಚಚ್ಚಿ 25 ವರ್ಷ ಹಳೆಯ ರೆಕಾರ್ಡ್ ಉಡೀಸ್
ಲಂಡನ್(ಜೂ.04): ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್‌ನ ಆರಂಭಿಕ ಬ್ಯಾಟ್ಸ್‌ಮನ್ ಡೆವೊನ್ ಕಾನ್‌ವೇ 200 ರನ್ ಗಳಿಸುವ ಮೂಲಕ, ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಅತಿಹೆಚ್ಚು ರನ್ ಗಳಿಸಿದ ದಾಖಲೆ ಬರೆದಿದ್ದಾರೆ.
ಈ ಮೊದಲು 1996ರಲ್ಲಿ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ತಮ್ಮ ಪಾದಾರ್ಪಣಾ ಪಂದ್ಯವನ್ನು ಲಾರ್ಡ್ಸ್‌ನಲ್ಲಿ ಆಡಿ 131 ರನ್ ಗಳಿಸಿದ್ದರು. ಇದು ಲಾರ್ಡ್ಸ್ ಮೈದಾನದಲ್ಲಿ ಪಾದಾರ್ಪಣೆ ಮಾಡಿದ ಆಟಗಾರ ಬಾರಿಸಿದ ವೈಯುಕ್ತಿಕ ಗರಿಷ್ಠ ಸ್ಕೋರ್ ಎನಿಸಿತ್ತು. ಕಿವೀಸ್ ಆರಂಭಿಕ ಬ್ಯಾಟ್ಸ್‌ಮನ್ ಕಾನ್‌ವೇ ಬರೋಬ್ಬರಿ 347 ಎಸೆತಗಳನ್ನು ಎದುರಿಸಿ 22 ಬೌಂಡರಿ ಹಾಗೂ 1 ಸಿಕ್ಸರ್ ನೆರನಿಂದ ಚೊಚ್ಚಲ ದ್ವಿಶತಕ ಬಾರಿಸಿ ಸಂಭ್ರಮಿಸಿದರು. ಇದರೊಂದಿಗೆ 25 ವರ್ಷಗಳ ಹಳೆಯ ಗಂಗೂಲಿ ದಾಖಲೆಯನ್ನು ಕಾನ್‌ವೇ ಮುರಿದಿದ್ದಾರೆ. ಅಲ್ಲದೇ ಮ್ಯಾಥ್ಯೂ ಸಿಂಕ್ಲೇರ್ ಬಳಿಕ ಚೊಚ್ಚಲ ಟೆಸ್ಟ್‌ನಲ್ಲೇ ದ್ವಿಶತಕ ಬಾರಿಸಿದ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ಎನ್ನುವ ಹಿರಿಮೆಗೂ ಪಾತ್ರರಾಗಿದ್ದಾರೆ.
ಇಂಗ್ಲೆಂಡ್ ಎದುರು ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ
ಇಂಗ್ಲೆಂಡ್ ವಿರುದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ನ್ಯೂಜಿಲೆಂಡ್ ತಂಡವು ಕಾನ್‌ವೇ ಬಾರಿಸಿದ ಕೆಚ್ಚೆದೆಯ ದ್ವಿಶತಕ(200) ಹಾಗೂ ಹೆನ್ರಿ ನಿಕೋಲಸ್ ಬಾರಿಸಿದ ಸಮಯೋಚಿತ ಅರ್ಧಶತಕದ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ ಕಿವೀಸ್ 378 ರನ್ ಬಾರಿಸಿ ಸರ್ವಪತನ ಕಂಡಿತ್ತು. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಆತಿಥೇಯ ಇಂಗ್ಲೆಂಡ್ 18 ರನ್ ಗಳಿಸುವಷ್ಟರಲ್ಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಮೂರನೇ ವಿಕೆಟ್‌ಗೆ ನಾಯಕ ಜೋ ರೂಟ್(42) ಹಾಗೂ ರೋರಿ ಬರ್ನ್ಸ್(59) ಮುರಿಯದ 93 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ.
ಸದ್ಯ ಎರಡನೇ ದಿನದಾಟದಂತ್ಯದ ವೇಳೆಗೆ ಕೇವಲ 2 ವಿಕೆಟ್ ಕಳೆದುಕೊಂಡು 111 ರನ್ ಬಾರಿಸಿದ್ದು, ಇನ್ನೂ 267 ರನ್‌ಗಳ ಹಿನ್ನಡೆಯಲ್ಲಿದೆ. ಮೂರನೇ ದಿನದಾಟದ ಅಂತ್ಯದ ವೇಳೆ ಪಂದ್ಯ ಯಾರ ಕಡೆ ವಾಲಲಿದೆ ಎನ್ನುವ ಸುಳಿವು ಸಿಗುವ ಸಾಧ್ಯತೆಯಿದೆ.