* ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತ-ನ್ಯೂಜಿಲೆಂಡ್ ಮುಖಾಮುಖಿ* ಜೂನ್ 18ರಿಂದ ಸೌಥಾಂಪ್ಟನ್‌ನಲ್ಲಿ ಆರಂಭವಾಗಲಿದೆ ಟೆಸ್ಟ್ ವಿಶ್ವಕಪ್* ಭಾರತಕ್ಕಿಂತ ನ್ಯೂಜಿಲೆಂಡ್ ಕಪ್ ಗೆಲ್ಲುವು ಸಾಧ್ಯತೆಯಿದೆ ಎಂದ ಬ್ರೆಟ್ ಲೀ

ನವದೆಹಲಿ(ಜೂ.04): ಟೆಸ್ಟ್‌ ವಿಶ್ವಕಪ್ ಎಂದೇ ಬಿಂಬಿಸಲಾಗುತ್ತಿರುವ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಪ್ರಶಸ್ತಿಗಾಗಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಹಾಗೂ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡಗಳು ಸೆಣಸಾಟ ನಡೆಸಲಿವೆ. ಈ ಹೈವೋಲ್ಟೇಜ್ ಪಂದ್ಯವು ಜೂನ್ 18ರಿಂದ ಆರಂಭವಾಗಲಿದ್ದು, ಸೌಥಾಂಪ್ಟನ್ ಆತಿಥ್ಯವನ್ನು ವಹಿಸಿದೆ.

ಒಂದು ಕಡೆ ನ್ಯೂಜಿಲೆಂಡ್ ತಂಡವು ಇಂಗ್ಲೆಂಡ್‌ ವಿರುದ್ದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯ ಪೈಕಿ ಮೊದಲ ಪಂದ್ಯವನ್ನು ಆಡುತ್ತಿದೆ. ಮತ್ತೊಂದೆಡೆ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸದ್ಯ ಇಂಗ್ಲೆಂಡ್‌ಗೆ ಬಂದಿಳಿದಿದ್ದು, ಕಠಿಣ ಕ್ವಾರಂಟೈನ್‌ಗೆ ಒಳಗಾಗಿದೆ.

ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಯಾವ ತಂಡ ಪ್ರಾಬಲ್ಯ ಮೆರೆಯಬಹುದು ಎನ್ನುವ ಕುರಿತಂತೆ ತುಟಿ ಬಿಚ್ಚಿದ್ದಾರೆ. ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಸಮಾನ ಬಲಾಬಲಗಳನ್ನು ಹೊಂದಿವೆ. ಆದರೆ ಅನುಭವದ ಆಧಾರದಲ್ಲಿ ಹೇಳುವುದಾದರೆ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್‌ನಲ್ಲಿನ ವಾತಾವರಣ ಹೆಚ್ಚೂ ಕಡಿಮೆ ಒಂದೇ ರೀತಿಯಿದೆ. ಹೀಗಾಗಿ ಕಿವೀಸ್ ಕೊಂಚ ಮೇಲುಗೈ ಸಾಧಿಸುವ ಸಾಧ್ಯತೆಯಿದೆ ಎಂದು ಬ್ರೆಟ್ ಲೀ ತಿಳಿಸಿದ್ದಾರೆ.

ಇಂಗ್ಲೆಂಡ್ ಪಿಚ್‌ನಲ್ಲಿ ಸ್ವಿಂಗ್ ಬೌಲಿಂಗ್ ಹೆಚ್ಚು ಪರಿಣಾಮಕಾರಿಯಾಗಬಲ್ಲದು. ಈ ಕಾರಣಕ್ಕಾಗಿ ಕಿವೀಸ್‌ ಬೌಲರ್‌ಗಳು ಇಂಗ್ಲೆಂಡ್ ಪಿಚ್‌ನಲ್ಲಿ ಹೆಚ್ಚು ಲಾಭ ಪಡೆಯುವ ಸಾಧ್ಯತೆಯಿದೆ. ಇನ್ನು ಬ್ಯಾಟಿಂಗ್ ವಿಭಾಗವನ್ನು ಗಮನಿಸಿದರೆ, ಎರಡೂ ತಂಡಗಳು ಸಾಕಷ್ಟು ಬಲಿಷ್ಠವಾಗಿದೆ. ಹೀಗಾಗಿ ಯಾವ ತಂಡದ ಬೌಲರ್‌ಗಳು ಚೆನ್ನಾಗಿ ಬೌಲಿಂಗ್ ಮಾಡುತ್ತಾರೋ ಅವರು ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಗೆಲ್ಲಬಹುದು ಎಂದು ಬ್ರೆಟ್‌ ಲೀ ಅಭಿಪ್ರಾಯಪಟ್ಟಿದ್ದಾರೆ.