ದುಬೈ(ನ.25): ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ)ಯ ನೂತನ ಸ್ವತಂತ್ರ ಅಧ್ಯಕ್ಷರಾಗಿ ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲೇ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಇಮ್ರಾನ್ ಖವಾಜ ಅವರನ್ನು ಸೋಲಿಸುವ ಮೂಲಕ ಶಶಾಂಕ್ ಮನೋಹರ್ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಗ್ರೆಗ್ ಆಯ್ಕೆಯಾಗಿದ್ದಾರೆ.

ನ್ಯೂಜಿಲೆಂಡ್ ಕ್ರಿಕೆಟ್‌ ಮಂಡಳಿಯ ಮಾಜಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇಗೆ ಐಸಿಸಿ ಚೇರ್‌ಮನ್ ಆಗಲು ಮೂರನೇ ಎರಡರಷ್ಟು ಮತಗಳ ಅಗತ್ಯವಿತ್ತು. ಐಸಿಸಿ ಮಂಡಳಿಯ 16 ಮತಗಳ ಪೈಕಿ 11 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಕಳೆದ ಜುಲೈ ತಿಂಗಳಿನಲ್ಲಿ ಶಶಾಂಕ್ ಮನೋಹರ್ ರಾಜೀನಾಮೆಯಿಂದಾಗಿ ಖವಾಜ ಹಂಗಾಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಐಸಿಸಿ ಅಧ್ಯಕ್ಷ ಸ್ಥಾನ​ದಿಂದ ಕೆಳ​ಗಿಳಿದ ಶಶಾಂಕ್‌ ಮನೋಹರ್

ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ನನ್ನ ಪಾಲಿಗೆ ಅತ್ಯಂತ ಗೌರವದ ವಿಚಾರ. ನನ್ನನ್ನು ಬೆಂಬಲಿಸಿದ ಎಲ್ಲರಿಗು ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಾವೆಲ್ಲರೂ ಒಟ್ಟಾಗಿ ಸೇರಿ ಜಾಗತಿಕ ಪಿಡುಗನ್ನು ಎದುರಿಸುವ ಮೂಲಕ ಕ್ರೀಡೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ವಿಶ್ವಾಸವಿದೆ ಎಂದು ನೂತನ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಹೇಳಿದ್ದಾರೆ.