ಕ್ರೈಸ್ಟ್‌ ಚರ್ಚ್‌(ಜ.06): ಪಾಕಿಸ್ತಾನ ವಿರುದ್ದದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಇನಿಂಗ್ಸ್‌ ಹಾಗೂ 176 ರನ್‌ಗಳ ಭರ್ಜರಿ ಗೆಲುವು ಸಾಧಿಸಿರುವ ಕೇನ್‌ ವಿಲಿಯಮ್ಸನ್‌ ನೇತೃತ್ವದ ನ್ಯೂಜಿಲೆಂಡ್ ತಂಡ ಐಸಿಸಿ ಟೆಸ್ಟ್ ಶ್ರೇಯಾಂಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಂ.1 ಸ್ಥಾನಕ್ಕೇರಿದ ಸಾಧನೆ ಮಾಡಿದೆ.

ಪಾಕ್‌ ವಿರುದ್ದದ ಎರಡು ಟೆಸ್ಟ್‌ ಪಂದ್ಯಗಳಲ್ಲೂ ಆಕರ್ಷಕ ದ್ವಿಶತಕ ಬಾರಿಸಿದ ನಾಯಕ ಕೇನ್‌ ವಿಲಿಯಮ್ಸನ್‌ ಇದೇ ಮೊದಲ ಬಾರಿಗೆ ತಂಡವನ್ನು ಅಗ್ರಸ್ಥಾನಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಕಳೆದ 10 ವರ್ಷದಲ್ಲಿ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ 6ನೇ ತಂಡ ಎನ್ನುವ ಕೀರ್ತಿಗೆ ನ್ಯೂಜಿಲೆಂಡ್ ತಂಡ ಪಾತ್ರವಾಗಿದೆ.

ಲಂಕಾ ವಿರುದ್ಧ ಸರಣಿ ಕ್ಲೀನ್ ಸ್ವೀಪ್‌ ಮಾಡಿದ ಆಫ್ರಿಕಾ

ಪಾಕಿಸ್ತಾನ ವಿರುದ್ದದ ಭರ್ಜರಿ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿ ನ್ಯೂಜಿಲೆಂಡ್ ತಂಡ 118 ರೇಟಿಂಗ್ ಅಂಕಗಳೊಂದಿಗೆ ಮೊದಲ ಸ್ಥಾನಕ್ಕೇರಿದರೆ, ಆಸ್ಟ್ರೇಲಿಯಾ 116, ಭಾರತ 114, ಇಂಗ್ಲೆಂಡ್ 106 ಹಾಗೂ ದಕ್ಷಿಣ ಆಫ್ರಿಕಾ ತಂಡ 96 ರೇಟಿಂಗ್ ಅಂಕಗಳೊಂದಿಗೆ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಟಾಪ್ 5 ಪಟ್ಟಿಯೊಳಗೆ ಸ್ಥಾನ ಪಡೆದಿವೆ.

ಎರಡನೇ ಟೆಸ್ಟ್ ಪಂದ್ಯ ಹೇಗಿತ್ತು?:

ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಮೊದಲ ಇನಿಂಗ್ಸ್‌ನಲ್ಲಿ 297 ರನ್‌ ಬಾರಿಸಿ ಸರ್ವಪತನ ಕಂಡಿತ್ತು. ಇನ್ನು ಇನಿಂಗ್ಸ್‌ ಆರಂಭಿಸಿದ ನ್ಯೂಜಿಲೆಂಡ್ ತಂಡ ನಾಯಕ ಕೇನ್‌ ವಿಲಿಯಮ್ಸನ್‌(238) ಆಕರ್ಷಕ ದ್ವಿಶತಕ ಹಾಗೂ ಹೆನ್ರಿ ನಿಕೋಲಸ್(157) ಮತ್ತು ಡೈರೆಲ್‌ ಮಿಚೆಲ್(102*) ಭರ್ಜರಿ ಶತಕದ ನೆರವಿನಿಂದ 6 ವಿಕೆಟ್ ಕಳೆದುಕೊಂಡು 659 ರನ್‌ ಬಾರಿಸಿ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿತು. ಇನ್ನು ಭಾರೀ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಪಾಕಿಸ್ತಾನ ವೇಗಿ ಕೈಲ್ ಜಾಮಿಸನ್ ಮಾರಕ ದಾಳಿಗೆ ತತ್ತರಿಸಿ 186 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿತು. 

ವೇಗಿ ಕೈಲ್ ಜಾಮಿಸನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ನ್ಯೂಜಿಲೆಂಡ್ ನಾಯಕ ಕೇನ್‌ ವಿಲಿಯಮ್ಸನ್ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದಾರೆ.