ಆಕ್ಲೆಂಡ್‌(ಏ.02): ಬಾಂಗ್ಲಾದೇಶ ವಿರುದ್ಧ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ 65 ರನ್‌ಗಳ ಗೆಲುವು ಸಾಧಿಸಿದ ನ್ಯೂಜಿಲೆಂಡ್‌, 3 ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿದೆ. 

ಮಳೆಯಿಂದಾಗಿ ತಲಾ 10 ಓವರ್‌ಗೆ ಪಂದ್ಯವನ್ನು ಕಡಿತಗೊಳಿಸಲಾಗಿತ್ತು. ಮೊದಲ ಬ್ಯಾಟ್‌ ಮಾಡಿದ ಕಿವೀಸ್‌ 4 ವಿಕೆಟ್‌ಗೆ 141 ರನ್‌ ಗಳಿಸಿತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಫಿನ್‌ ಆ್ಯಲೆನ್‌ 71, ಮಾರ್ಟಿನ್‌ ಗಪ್ಟಿಲ್‌ 44 ರನ್‌ ಗಳಿಸಿದರು ಸ್ಪೋಟಕ ಬ್ಯಾಟಿಂಗ್‌ ನಡೆಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಬಾಂಗ್ಲಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಫಿನ್‌ ಕೇವಲ 18 ಎಸೆತಗಳಲ್ಲಿ ಚೊಚ್ಚಲ ಅರ್ಧಶತಕ ಪೂರೈಸಿದರು.  

ಇನ್ನು ಕಠಿಣ ಗುರಿ ಬೆನ್ನತ್ತಿದ ಬಾಂಗ್ಲಾದೇಶ ಕೇವಲ 9.3 ಓವರಲ್ಲಿ 76 ರನ್‌ಗೆ ಆಲೌಟ್‌ ಆಯಿತು. ಟೊಡ್‌ ಆ್ಯಸ್ಟಲ್‌ 4, ನಾಯಕ ಟಿಮ್‌ ಸೌಥಿ 3 ಹಾಗೂ ಗ್ಲೆನ್ ಫಿಲಿಪ್ಸ್, ಆಡಂ ಮಿಲ್ನೆ ಹಾಗೂ ಲಾಕಿ ಫರ್ಗ್ಯೂಸನ್‌ ತಲಾ ಒಂದೊಂದು ವಿಕೆಟ್ ಪಡೆದರು. 

ಫಿನ್ ಆ್ಯಲನ್‌ ಸಿಡಿಲಬ್ಬರದ ಬ್ಯಾಟಿಂಗ್‌: ಚಿನ್ನ ಹುಡುಕುತ್ತಿದ್ದ ಆರ್‌ಸಿಬಿಗೆ ವಜ್ರವೇ ಸಿಕ್ಕಂತಾಯ್ತು..!

ಈ ಮೊದಲ ಅಂದರೆ ಟಿ20 ಸರಣಿಗೂ ಮುನ್ನ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕಿವೀಸ್‌ ತಂಡ ಬಾಂಗ್ಲಾ ಎದುರು ಕ್ಲೀನ್‌ ಸ್ವೀಪ್‌ ಮಾಡಿತ್ತು. ಇದರೊಂದಿಗೆ ಕಿವೀಸ್‌ ನೆಲದಲ್ಲಿ ಒಂದೂ ಗೆಲುವು ಕಾಣದೇ ಬಾಂಗ್ಲಾ ತನ್ನ ಪ್ರವಾಸವನ್ನು ಮುಗಿಸಿದೆ.

ಸ್ಕೋರ್‌: 
ಕಿವೀಸ್‌ 141/4
ಬಾಂಗ್ಲಾ 76/10