ಆಕ್ಲೆಂಡ್‌(ಏ.02): ಆರ್‌ಸಿಬಿ ತಂಡಕ್ಕೆ ಹೊಸದಾಗಿ ಸೇರ್ಪಡೆಗೊಂಡಿರುವ ನ್ಯೂಜಿಲೆಂಡ್‌ನ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಫಿನ್‌ ಆ್ಯಲನ್‌, ಗುರುವಾರ ಬಾಂಗ್ಲಾದೇಶ ವಿರುದ್ಧ 3ನೇ ಟಿ20 ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್‌ ನಡೆಸಿದರು. ಕೇವಲ 18 ಎಸೆತಗಳಲ್ಲಿ ಅರ್ಧಶತಕ ಚಚ್ಚುವ ಮೂಲಕ ನ್ಯೂಜಿಲೆಂಡ್‌ ಪರ ಎರಡನೇ ಅತಿವೇಗದ ಟಿ20 ಅರ್ಧಶತಕ ಬಾರಿಸಿದ ದಾಖಲೆಗೆ ಫಿನ್‌ ಭಾಜನರಾಗಿದ್ದಾರೆ.

ಕೇವಲ 29 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 71 ರನ್‌ ಚಚ್ಚಿದರು. 244.83ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಆ್ಯಲನ್‌ ಆಟ, ಆರ್‌ಸಿಬಿ ಅಭಿಮಾನಿಗಳು ಸಂಭ್ರಮಿಸುವಂತೆ ಮಾಡಿತು. ಐಪಿಎಲ್‌ಗೆ ಕೆಲವೇ ದಿನಗಳು ಬಾಕಿ ಇರುವಾಗ ಆ್ಯಲನ್‌ ಈ ರೀತಿಯ ಲಯ ಪ್ರದರ್ಶಿಸಿದ್ದನ್ನು ಕಂಡು ಸಾಮಾಜಿಕ ತಾಣಗಳಲ್ಲಿ ಆರ್‌ಸಿಬಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದರು. ಟಿ20 ಕ್ರಿಕೆಟಲ್ಲಿ ಆ್ಯಲನ್‌ ಸ್ಟ್ರೈಕ್‌ರೇಟ್‌ 187.68 ಇದ್ದು, ಅವರ ಮೇಲೆ ಆರ್‌ಸಿಬಿ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. 

14ನೇ ಐಪಿಎಲ್‌ಗೂ ಮುನ್ನ ಆರ್‌ಸಿಬಿಗೆ ಬಿಗ್‌ ಶಾಕ್‌: ಆಸೀಸ್‌ ಸ್ಫೋಟಕ ಬ್ಯಾಟ್ಸ್‌ಮನ್‌ ಟೂರ್ನಿಯಿಂದ ಔಟ್‌..!

14ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಆಸ್ಟ್ರೇಲಿಯಾದ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್‌ ಜೋಶುವಾ ಫಿಲಿಪಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರಯ ತಂಡದಿಂದ ಹೊರಗುಳಿಯುವ ತೀರ್ಮಾನ ತೆಗೆದುಕೊಂಡಿದ್ದರು. ಫಿಲಿಪಿಯನ್ನು ಆರ್‌ಸಿಬಿ ಕೇವಲ 20 ಲಕ್ಷ ರುಪಾಯಿಗೆ ಖರೀದಿಸಿ 14ನೇ ಆವೃತ್ತಿಯ ಐಪಿಎಲ್‌ನಲ್ಲಿ ರೀಟೈನ್‌ ಮಾಡಿಕೊಂಡಿತ್ತು. ಇದೀಗ ಫಿಲಿಪಿ ಐಪಿಎಲ್‌ನಿಂದ ಹಿಂದೆ ಸರಿದಿದ್ದರಿಂದ ಅದೇ ಬೆಲೆಗೆ ನ್ಯೂಜಿಲೆಂಡ್‌ ಯುವ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಆರ್‌ಸಿಬಿ ತಂಡ ಕೂಡಿಕೊಂಡಿದ್ದಾರೆ. ಫಿನ್‌ ಅಬ್ಬರ ಕಂಡು ಆರ್‌ಸಿಬಿ ಅಭಿಮಾನಿಗಳು ಪುಳಕಿತರಾಗಿದ್ದಾರೆ.

ಬಹುನಿರೀಕ್ಷಿತ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಏಪ್ರಿಲ್‌ 09ರಿಂದ ಆರಂಭವಾಗಲಿದ್ದು, ಚೆನ್ನೈನ ಎಂ. ಎ. ಚಿದಂಬರಂ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡಗಳು ಉದ್ಘಾಟನಾ ಪಂದ್ಯವನ್ನು ಆಡಲಿವೆ.